ಬೈಕಂಪಾಡಿ - ಅಂಗರಗುಂಡಿ - ಜೋಕಟ್ಟೆ ರಸ್ತೆ ದುರಸ್ತಿಗೆ ಆಗ್ರಹಿಸಿ ಡಿವೈಎಫ್ಐ ಮನವಿ, ಪ್ರತಿಭಟನೆಯ ಎಚ್ಚರಿಕೆ
ಸುರತ್ಕಲ್: ಬೈಕಂಪಾಡಿ ಕೈಗಾರಿಕಾ ವಲಯದಿಂದ ರಾಷ್ಟ್ರೀಯ ಹೆದ್ದಾರಿ ಪ್ರವೇಶಿಸುವ ಬೈಕಂಪಾಡಿ - ಅಂಗರಗುಂಡಿ - ಜೋಕಟ್ಟೆ ಮುಖ್ಯ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿದ್ದು, ಮೂಂದಿನ 15 ದಿನಗಳೊಳಗೆ ರಸ್ತೆ ದುರಸ್ತಿಗೊಳಿಸಲು ಕ್ರಮ ಕೈಗೊಳ್ಳದಿದ್ದರೆ ಸಾರ್ವಜನಿಕರನ್ನು ಸಂಘಟಿಸಿ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಡಿವೈಎಫ್ಐ ಬೈಕಂಪಾಡಿ ಅಂಗರಗುಂಡಿ ಘಟಕದ ನಿಯೋಗವು ಕೆಐಎಡಿಬಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯನ್ನು ಬುಧವಾರ ಭೇಟಿ ಮಾಡಿ ಮನವಿ ಸಲ್ಲಿಸಿ ಆಗ್ರಹಿಸಿತು.
ರಸ್ತೆಯಲ್ಲಿ ಬೃಹತ್ ಗುಂಡಿಗಳು ನಿರ್ಮಾಣವಾಗಿದೆ. ಇದರಿಂದ ರಸ್ತೆಯು ವಾಹನ ಸಂಚಾರಕ್ಕೆ ಅಯೋಗ್ಯ ವಾದ ಸ್ಥಿತಿಯಲ್ಲಿದೆ. ರಸ್ತೆ ಗುಂಡಿಗಳಿಂದಾಗಿ ದ್ವಿಚಕ್ರ ಸವಾರರು ಬಿದ್ದು ಸಾವು ನೋವುಗಳಿಗೆ ಕಾರಣ ವಾಗುತ್ತಿದೆ, ವಾಹನಗಳು ಹಾನಿಗೊಳಗಾಗುತ್ತಿದೆ. ಅಲ್ಲದೆ ಕೆಲವೆಡೆ ಚರಂಡಿ ನಿರ್ಮಿಸದೆ ಅವೈಜ್ಞಾನಿಕ ರಸ್ತೆ ನಿರ್ಮಾಣ ಮಾಡಲಾಗಿದೆ ಇದರಿಂದ ಮಳೆ ನೀರು ರಸ್ತೆಯಲ್ಲೇ ನಿಂತು ಪಾದಚಾರಿಗಳಿಗೂ ನಡೆದಾಡಲು ಸಾಧ್ಯವಾಗುತ್ತಿಲ್ಲ. ಸರಕಾರಿ ಶಾಲೆಗೆ ಹೋಗುವ ಮಕ್ಕಳು ಕೆಸರೆರೆಚಿಸಿಕೊಂಡು ಶಾಲೆಗೆ ಹೋಗಬೇಕಾದ ಪರಿಸ್ಥಿತಿ ಇದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.
ಕಂಪೆನಿಗಳಿಗೆ ಕೆಲಸಕ್ಕೆ ಬರುವ ಮಹಿಳಾ ಕಾರ್ಮಿಕರಿಗೂ ಇದರಿಂದ ತೊಂದರೆ ಉಂಟಾಗಿದೆ. ಜನಪ್ರತಿನಿದಿನಗಳು ಕಣ್ಣಿದ್ದೂ ಕುರುಡರಂತೆ ವರ್ತಿಸುತ್ತಿದ್ದಾರೆ. ಅಧಿಕಾರಿಗಳು ಬೇಜವಾಬ್ದಾರಿತನ ಪ್ರದರ್ಶಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬೈಕಂಪಾಡಿ - ಅಂಗರಗುಂಡಿ - ಜೋಕಟ್ಟೆ ಮುಖ್ಯ ರಸ್ತೆಯ ದುರಸ್ತಿಗೊಳಿಸಿ ಅಭಿವೃದ್ಧಿಪಡಿಸಬೇಕು. ಒಂದು ವೇಳೆ ಮುಂದಿನ 15ದಿನಗಳೊಳಗೆ ರಸ್ತೆ ದುರಸ್ತಿ ಗೊಳಿಸಲು ಕ್ರಮ ಕೈಗೊಳ್ಳದಿದ್ದರೆ ಡಿವೈಎಫ್ಐ ನೇತೃತ್ವದಲ್ಲಿ ಸಾರ್ವಜನಿಕರನ್ನು ಸಂಘಟಿಸಿ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ನಿಯೋಗವು ಎಚ್ಚರಿಕೆ ನೀಡಿತು.
ನಿಯೋಗದಲ್ಲಿ ಡಿವೈಎಫ್ಐ ಜಿಲ್ಲಾಧ್ಯಕ್ಷರಾದ ಬಿ.ಕೆ. ಇಮ್ತಿಯಾಝ್, ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಅಂಗರಗುಂಡಿ ಘಟಕ ಅಧ್ಯಕ್ಷ ತೌಸೀಫ್, ಕಾರ್ಯದರ್ಶಿ ನಿಝಾಮ್, ಉಪಾಧ್ಯಕ್ಷರಾದ ಸೈಫಲ್, ಅನ್ಸಾರ್, ಕೋಶಾಧಿಕಾರಿ ಶಕೀಲ್, ಪ್ರಮುಖರಾದ ಶಮ್ರಾನ್, ಅಝ್ಲವ್, ಫರಾನ್, ರಾಝಿಕ್, ಸಿದ್ದೀಕ್, ಸಲೀಂ, ಗೂಡ್ಸ್ ಟೆಂಪೋ ಚಾಲಕರ ಸಂಘದ ಮುಖಂಡರಾದ ಫೈವ್ ಸ್ಟಾರ್ ಖಾದರ್, ಹೈದರ್ ಮುಂತಾದವರು ಇದ್ದರು.