ನ.11ರಂದು ನಮ್ಮ ಕುಡ್ಲ ಕೂಡುದೀಪ ಸ್ಪರ್ಧೆ: ರೋಹನ್ ಮೊಂತೆರೋ, ಗುಣಪಾಲ ಕಡಂಬರಿಗೆ ಪ್ರಶಸ್ತಿ ಪ್ರದಾನ
ಮಂಗಳೂರು, ನ.9: ತುಳುವಾಹಿನಿ ನಮ್ಮ ಕುಡ್ಲ ವತಿಯಿಂದ ನ.11ರಂದು ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರದಲ್ಲಿ 24 ನೇ ವರ್ಷದ ‘ನಮ್ಮಕುಡ್ಲ ಗೂಡುದೀಪ ಸ್ಪರ್ಧೆ’ ಆಯೋಜಿಸಲಾಗಿದೆ.
ಸ್ಪರ್ಧೆಯು ಯಾವುದೇ ವಯೋಮಾನದ ನಿರ್ಬಂಧವಿಲ್ಲದೆ ಸಾಂಪ್ರದಾಯಿಕ, ಆಧುನಿಕ ಹಾಗೂ ಪ್ರತಿಕೃತಿ ಎಂಬ ಮೂರು ವಿಭಾಗಗಳಲ್ಲಿ ನಡೆಯಲಿದೆ. ಪ್ರತಿ ವಿಭಾಗದಲ್ಲೂ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆಯುವ ಗೂಡುದೀಪಗಳಿಗೆ ‘ಚಿನ್ನದ ಪದಕ’ ಹಾಗೂ ತೃತೀಯ ಸ್ಥಾನ ಪಡೆದ 3 ವಿಜೇತರಿಗೆ ಬೆಳ್ಳಿಯ ಪದಕ, ಮೆಚ್ಚುಗೆ ಪಡೆದ ನೂರಕ್ಕಿಂತಲೂ ಹೆಚ್ಚು ಸ್ಪರ್ಧಾ ರ್ಥಿಗಳಿಗೆ ಪ್ರೋತ್ಸಾಹಕ ಬಹುಮಾನ ನೀಡಲಾಗುವುದು ಎಂದು ನಮ್ಮಕುಡ್ಲ ವಾಹಿನಿ ನಿರ್ದೇಶಕ ಹರೀಶ್ ಬಿ. ಕರ್ಕೇರ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಭಾಗವಹಿಸಿದ ಪ್ರತಿಯೊಬ್ಬ ಸ್ಪರ್ಧಿಗೂ ನೆನಪಿನ ಕಾಣಿಕೆ ಜತೆಗೆ ಸಿಹಿತಿಂಡಿಯ ಪೊಟ್ಟಣ, ಶ್ರೀ ಕ್ಷೇತ್ರದ ಪ್ರಸಾದ ನೀಡಿ ಗೌರವಿಸಲಾಗುವುದು ಎಂದು ಅವರು ಹೇಳಿದರು.
ಸಂಜೆ 4 ಕ್ಕೆ ಭಜನಾ ಕಾರ್ಯಕ್ರಮದೊಂದಿಗೆ ಪ್ರಾರಂಭವಾಗಿ, ಸಾಂಸ್ಕೃತಿಕ ಕಾರ್ಯಕ್ರಮ, ಪ್ರಶಸ್ತಿ ಪ್ರದಾನ ನಡೆಯಲಿದೆ. ಈ ಸಂದರ್ಭ ಸಮಾಜಸೇವಕ, ರೋಹನ್ ಕಾರ್ಪೋರೇಷನ್ ಬಿಲ್ಡರ್ಸ್ ಆ್ಯಂಡ್ ಇನ್ಪ್ರಾಸ್ಟ್ರಕ್ಚರ್ ಸಂಸ್ಥೆಯ ರೋಹನ್ ಮೊಂತೆರೊ ಅವರಿಗೆ ‘ನಮ್ಮಕುಡ್ಲ ಪ್ರಶಸ್ತಿ’, ಕಂಬಳ ತೀರ್ಪುಗಾರ ಗುಣಪಾಲ ಕಡಂಬ ಅವರಿಗೆ ‘ನಮ್ಮ ತುಳುವೆರ್’ ಪ್ರಶಸ್ತಿ ನೀಡಿ ಸನ್ಮಾನಿಸಲಾವುದು. ತುಳುನಾಡಿನ ಸಂಘಸಂಸ್ಥೆಗಳಿಗೆ ನೀಡುವ ‘ಬಿ.ಪಿ.ಕರ್ಕೇರಾ ಸೇವಾ ಪ್ರಶಸ್ತಿ’ಯನ್ನು ಕಂಕನಾಡಿ ಬಿಲ್ಲವ ಸಂಘಕ್ಕೆ ನೀಡಲಾಗುವುದು ಎಂದು ಅವರು ಹೇಳಿದರು.
ನಮ್ಮ ಕುಡ್ಲ ಚಾನೆಲ್‌ನ ಹಾಸ್ಯ ಕಾರ್ಯಕ್ರಮ ‘ಯಕ್ಷತೆಲಿಕೆ’ ಯಶಸ್ಸಿನ ಹಿಂದಿರುವ ಯುವ ಹಾಸ್ಯ ಕಲಾವಿದ ದಿನೇಶ್ ಕೊಡಪದವು ಅವರಿಗೆ ನಮ್ಮಕುಡ್ಲ ವಿಶೇಷ ಸನ್ಮಾನ ನೆರವೇರಿಸಲಾಗುವುದು. ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಸಹಿತ ಗಣ್ಯರು ಭಾಗವಹಿಸಲಿದ್ದಾರೆ. ಗೂಡುದೀಪ ಸ್ಪರ್ಧೆಯಲ್ಲಿ ಭಾಗವಹಿಸುವವರು ತಾವೇ ತಯಾರಿಸಿದ ಗೂಡುದೀಪಗಳನ್ನು ತರಬೇಕು, ಮಾರುಕಟ್ಟೆಯಲ್ಲಿ ಖರೀದಿಸಿದ ಗೂಡುದೀಪಗಳಿಗೆ ಅವಕಾಶವಿಲ್ಲ ಎಂದರು.
ಪ್ರಮುಖರಾದ ಸುರೇಶ್ ಬಿ.ಕರ್ಕೇರ, ಕದ್ರಿ ನವನೀತ ಶೆಟ್ಟಿ, ಭಾಸ್ಕರ ರೈ ಕುಕ್ಕುವಳ್ಳಿ, ಎಂ.ಎಸ್.ಕೋಟ್ಯಾನ್, ದಯಾ ನಂದ ಕಟೀಲು, ಮೋಹನ್ ಬಿ. ಕರ್ಕೇರ, ಲೀಲಾಕ್ಷ ಬಿ. ಕರ್ಕೇರ, ಸಂತೋಷ ಬಿ. ಕರ್ಕೇರ ಉಪಸ್ಥಿತರಿದ್ದರು.