‘ವಿಶ್ವ ಬಂಟರ ಸಮ್ಮೇಳನ’ದ ಬ್ರೋಶರ್ ಬಿಡುಗಡೆ
ಮಂಗಳೂರು: ‘ಜಾಗತಿಕ ಬಂಟರ ಸಂಘಗಳ ಒಕ್ಕೂಟವನ್ನು ಸಮಾಜ ಕಲ್ಯಾಣ ವ್ಯವಸ್ಥೆಯ ಉತ್ತುಂಗಕ್ಕೆ ಏರಿಸಿದ ಐಕಳ ಹರೀಶ್ ಶೆಟ್ಟಿ ಅಪ್ರತಿಮ ನಾಯಕ. ಬಂಟ ಸಮಾಜವಲ್ಲದೆ ಇತರರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸಿ ನೆರವು ನೀಡುವ ಅವರ ಗುಣ ಎಲ್ಲಾ ಸಂಘಟನೆಗಳಿಗೆ ಮಾದರಿಯಾಗಿದೆ. ಒಕ್ಕೂಟದ ಮಹತ್ವಾಕಾಂಕ್ಷೆಯ ವಿಶ್ವ ಸಮ್ಮೇಳನ ಹೊಸ ಚರಿತ್ರೆಯನ್ನು ಬರೆಯುವಂತಾಗಲಿ’ ಎಂದು ಇಂಟರ್‌ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್‌ನ ಸ್ಥಾಪಕಾಧ್ಯಕ್ಷ ಡಾ. ಎ. ಸದಾನಂದ ಶೆಟ್ಟಿ ಹೇಳಿದ್ದಾರೆ.
ಜಾಗತಿಕ ಬಂಟರ ಸಂಘಗಳ ಒಕ್ಕೂಟವು ಉಡುಪಿಯ ಅಜ್ಜರಕಾಡು ಮೈದಾನದಲ್ಲಿ ಅಕ್ಟೋಬರ್ ೨೮ ಮತ್ತು ೨೯ರಂದು ಆಯೋಜಿಸಿರುವ ‘ವಿಶ್ವ ಬಂಟರ ಸಮ್ಮೇಳನ - ೨೦೨೩’ ಕಾರ್ಯಕ್ರಮದ ಮಾಹಿತಿ ಪತ್ರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಸಮ್ಮೇಳನದ ಯಶಸ್ವಿಗೆ ಕರೆ ನೀಡಿದರು. ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಜೊತೆ ಕಾರ್ಯದರ್ಶಿ ಚಂದ್ರಹಾಸ ಡಿ. ಶೆಟ್ಟಿ, ಕಾರ್ಮಿಕ ನಾಯಕ ಸುರೇಶ್‌ಚಂದ್ರ ಶೆಟ್ಟಿ, ಇಂಟರ್‌ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್‌ನ ಕಾರ್ಯಾಧ್ಯಕ್ಷ ದೇವಿಚರಣ್ ಶೆಟ್ಟಿ, ಮಹಿಳಾ ವಿಭಾಗದ ಸಂಚಾಲಕಿ ವಿಜಯಲಕ್ಷ್ಮಿ ಬಿ. ಶೆಟ್ಟಿ ಉಪಸ್ಥಿತರಿದ್ದರು.
ವೆಲ್ಫೇರ್ ಟ್ರಸ್ಟ್‌ನ ಸಂಘಟನಾ ಕಾರ್ಯದರ್ಶಿ ರಾಜಗೋಪಾಲ ರೈ ಸ್ವಾಗತಿಸಿದರು. ‘ಸದಾಶಯ’ ಸಂಚಾಲಕ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಕಾರ್ಯಕ್ರಮ ಸಂಯೋಜಿಸಿದರು. ಸಾಹೀಲ್ ರೈ ವಂದಿಸಿದರು.