ಅ.15ರಿಂದ ಎಸ್ ವೈ ಎಸ್ ವತಿಯಿಂದ 'ಸ್ಕ್ರ್ಯಾಪ್ ಟು ಸರ್ವ್' ಯೋಜನೆ
ಮಂಗಳೂರು: ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘದ ವತಿಯಿಂದ ನಿರುಪಯುಕ್ತ ವಸ್ತುಗಳನ್ನು ಉಪಯುಕ್ತ ಸೇವೆಗಳಿಗೆ ಬಳಸಿಕೊಳ್ಳುವ 'ಸ್ಕ್ರ್ಯಾಪ್ ಟು ಸರ್ವ್' ಯೋಜನೆಯು ಅ.15ರಿಂದ 31ರ ತನಕ ನಡೆಯಲಿದೆ.
ರೋಗ ರುಜಿನಗಳು, ಮಳೆಹಾನಿ ಮತ್ತಿತರ ಪ್ರಕೃತಿ ವಿಕೋಪಗಳು, ಮನೆ ಕುಸಿತ, ಅಪಘಾತ ಇತ್ಯಾದಿ ಸಂಕಷ್ಟಗಳ ಸಂದರ್ಭದಲ್ಲಿ ಸಾಂತ್ವನ ಹಸ್ತ ಚಾಚುವುದರಲ್ಲಿ ಎಸ್ ವೈ ಎಸ್ ಸಂಘಟನೆಯು ಕ್ರಿಯಾಶೀಲವಾಗಿದ್ದು, ಅದಕ್ಕಾಗಿಯೇ 'ಇಸಾಬಾ' ಸನ್ನದ್ಧ ಸೇವಾ ತಂಡ ಸಕ್ರಿಯವಾಗಿದೆ. ದೀರ್ಘ ಕಾಲದಿಂದ ರೋಗಿಯಾಗಿರುವ ಬಡ ವ್ಯಕ್ತಿಗಳಿಗೆ ಮೆಡಿಕಲ್ ಕಾರ್ಡ್ ಮೂಲಕ ಮಾಸಾಂತ ಸಹಾಯಧನ, ರೋಗಿಗಳಿಗೆ ಅಗತ್ಯ ಸಲಕರಣೆಗಳನ್ನು ಒದಗಿಸುವ ಸಾಂತ್ವನ ಕೇಂದ್ರ, ಆಂಬುಲೆನ್ಸ್ ಸೇವೆ ಸೇರಿದಂತೆ ಹಲವು ಜನೋಪಯೋಗಿ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ.
ಇದಕ್ಕಾಗಿ ವ್ಯಯಿಸುವ ಲಕ್ಷಾಂತರ ರೂಪಾಯಿಗಳನ್ನು ಹೊಂದಿಸುವುದಕ್ಕಾಗಿ ʼScrap to Serveʼ ಎಂಬ ಯೋಜನೆಯನ್ನು ಹಮ್ಮಿಕೊಂಡಿದೆ. 'ಇಸಾಬಾ' ಸ್ವಯಂಸೇವಕರು ಕಾರ್ಯಕರ್ತರ ಮನೆ, ಅಂಗಡಿ ಮತ್ತಿತರ ಸ್ಥಳಗಳಿಗೆ ತೆರಳಿ, ಅಲ್ಲಿ ಇರಹುದಾದ ನಿರುಪಯುಕ್ತ ವಸ್ತುಗಳನ್ನು ಶೇಖರಿಸಲಿದ್ದು, ಅದರ ಮಾರಾಟದಿಂದ ಬರುವ ಹಣವನ್ನು ಸಾಂತ್ವನ ಚಟುವಟಿಕೆಗಳಿಗೆ ಬಳಸಲಾಗುತ್ತದೆ. ಪ್ರಸ್ತುತ ಯೋಜನೆಯಿಂದ ಪರಿಸರ ಸ್ವಚ್ಛವಾಗುವುದರೊಂದಿಗೆ ಹಲವು ರೋಗಿಗಳಿಗೆ ಸಾಂತ್ವನವಾಗಲಿದೆ. ನಿರುಪಯುಕ್ತ ವಸ್ತುಗಳನ್ನು ದಾನವಾಗಿ ಮಾರ್ಪಡಿಸುವ ಪ್ರಸ್ತುತ ಯೋಜನೆಯೊಂದಿಗೆ ಸಹಕರಿಸಲು ಬಯಸುವವರು ಸಂಚಾಲಕ ಖಲೀಲ್ ಮಾಲಿಕಿ (9449259270) ಅವರನ್ನು ಸಂಪರ್ಕಿಸುವಂತೆ ಎಸ್ ವೈ ಎಸ್ ಕರ್ನಾಟಕ ಪ್ರಧಾನ ಕಾರ್ಯದರ್ಶಿ ಕೆ ಎಂ ಅಬೂಬಕರ್ ಸಿದ್ದೀಖ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.