ಸಮಾಜದ ಕಟ್ಟಕಡೆಯ ಜನಸಮುದಾಯ ಮುಖ್ಯವಾಹಿನಿಗೆ ಬರಬೇಕು ಎನ್ನುವುದು ಸರಕಾರದ ಗುರಿ: ಸಿಎಂ ಸಿದ್ದರಾಮಯ್ಯ
ಮೂಡೂರು-ಪಡೂರು ಜೋಡುಕರೆ ಕಂಬಳಕ್ಕೆ ಮುಖ್ಯಮಂತ್ರಿ ಆಗಮನ
ನಾವೂರು: ಸಮಾಜದ ಕಟ್ಟಕಡೆಯ ಜನರು ಮುಖ್ಯವಾಹಿನಿಗೆ ಬರಬೇಕು, ದುರ್ಬಲವರ್ಗದವರಿಗೆ ಶಕ್ತಿ ತುಂಬುವ ಕೆಲಸ ಸರಕಾರದ ಗುರಿ ಅದಕ್ಕಾಗಿ ಐದು ಗ್ಯಾರಂಟಿ ಯೋಜನೆ ಜಾರಿಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ರಾಜ್ಯದ ಮುಖ್ಯಮಂತ್ರಿಯಾಗಿ ಬಂಟ್ವಾಳ ತಾಲೂಕಿನ ಮೂಡೂರು-ಪಡೂರು ಜೋಡುಕರೆ ಕಂಬಳಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ರಾಜಕೀಯ ಸ್ವಾತಂತ್ರ್ಯದ ಜೊತೆ ಆರ್ಥಿಕ ಸ್ವಾತಂತ್ರ್ಯಮುಖ್ಯ. ಆ ಕಾರಣದಿಂದ ಸಮಾಜದಲ್ಲಿ ಅವಕಾಶ ವಂಚಿತ ಜನರಿಗೆ ಶಕ್ತಿಯನ್ನು ತುಂಬುತ್ತಾ ಬಂದಿದ್ದೇವೆ. ಆದುದರಿಂದ ಜನ ನಮ್ಮ ಕೈ ಹಿಡಿಯುತ್ತಾರೆ. ಆದುದರಿಂದ 2028ರಲ್ಲೂ ನಾವೆ ಅಧಿಕಾರಕ್ಕೆ ಬರುತ್ತೇವೆ ಎಂದರು.
ಸರಕಾರ ಹಣಕಾಸು ಮುಗ್ಗಟ್ಟನ್ನು ಎದುರಿಸುತ್ತಿಲ್ಲ. ಕಂಬಳ ಹೆಚ್ಚು ಜನಪ್ರೀಯ ಕ್ರೀಡೆ. ಕಂಬಕ್ಕೆ ಇನ್ನೂ ಮುಂದೆಯೂ ಸರಕಾರ ಸಹಕಾರ ನೀಡುತ್ತದೆ. ರಮಾನಾಥ ರೈ ಪ್ರಮಾಣಿಕ ಸಚಿವರಲ್ಲಿ ಒಬ್ಬರಾಗಿದ್ದರು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಬಂಟ್ವಾಳ ತಾಲೂಕಿಗೆ ಮಂದಿನ ವರ್ಷ ಕ್ರೀಡಾಂಗಣಕ್ಕೆ ಅನುದಾನ ನೀಡುವುದಾಗಿ ಸಿದ್ದರಾಮಯ್ಯ ಘೋಷಿಸಿದರು. ಈ ಸಂದರ್ಭ ಮಾಜಿ ಸಚಿವ ಮತ್ತು ಕಂಬಳ ಸಮಿತಿಯ ಗೌರವಾಧ್ಯಕ್ಷ ಬಿ.ರಮಾನಾಥ ರೈ ಅಧ್ಯಕ್ಷತೆ ವಹಿಸಿ, ಕಂಬಳ ಸಮಿತಿಯ ಪರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಅಭಿನಂದಿಸಿ, ಸನ್ಮಾನಿಸಿ ಮಾತನಾಡುತ್ತಾ, ರೈತರ ಪರವಾಗಿ ಬದ್ಧತೆಯನ್ನು ಪ್ರದರ್ಶಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಡವರ ಹಸಿವಿನ ನಿವಾರಣೆಗೆ ಅನ್ನಭಾಗ್ಯ ನೀಡಿದವರು, ಹಲವು ನಿಗಮಗಳ ಮೂಲಕ ಸಾಲ ಪಡೆದ ಫಲಾನುಭವಿಗಳಿಗೆ ಮನ್ನಾ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ರಮಾನಾಥ ರೈ ಶ್ಲಾಘಿಸಿದರು. ಬಂಟ್ವಾಳ ತಾಲೂಕಿನ ಕ್ರೀಡಾಂಗಣ ಬೆಂಜನಪದವಿನಲ್ಲಿ ಮಾಡಬೇಕೆಂದು ಮನವಿ ಮಾಡಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಸಂತೋಷ್ ಗುರೂಜಿ , ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಸರಕಾರದ ವಿಧಾನ ಪರಿಷತ್ ನ ಮುಖ್ಯ ಸಚೇತಕ ಸಲೀಂ ಅಹಮ್ಮದ್, ಪುತ್ತೂರು ಶಾಸಕ ಅಶೋಕ್, ರಾಜೇ ಗೌಡ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಸ್ವಾಮಿ, ವಂ.ವಿಲ್ಫೆಡ್ ರೋಡ್ರಿಗಸ್, ಪದ್ಮರಾಜ ಪೂಜಾರಿ, ರಾಜ್ಯ ಬೀಜ ನಿಗಮದ ಅಧ್ಯಕ್ಷೆ ಲಾವಣ್ಯ ಬಲ್ಲಾಳ್, ಗೇರು ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಮುಖ್ಯ ಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್, ಕನಿಷ್ಠ ವೇತನ ಮಂಡಳಿಯ ಅಧ್ಯಕ್ಷ ಟಿ.ಎಂ ಶಹೀದ್ , ಶಾಲೆಟ್ ಪಿಂಟೋ, ಸದಾಶಿವ ಉಳ್ಳಾಲ್, ಕೃಪಾ ಆಳ್ವ, ಉದಯ ಹೆಗ್ಡೆ, ಚಂದ್ರ ಪ್ರಕಾಶ್ ಶೆಟ್ಟಿ, ಪದ್ಮಶೇಖರ ಜೈನ್ ಹಾಗು ಇತರರು ಉಪಸ್ಥಿತರಿದ್ದರು. ಪಿಯೂಸ್ ಎಲ್ ರೋಡ್ರಿಗಸ್ ಸ್ವಾಗತಿಸಿದರು.