ಉಳ್ಳಾಲ: ದಸರಾ ಶೋಭಾಯಾತ್ರೆಯಲ್ಲಿ ಪೊಲೀಸರು ಮತ್ತು ಯುವಕರ ನಡುವೆ ಘರ್ಷಣೆ
► ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದಲ್ಲಿ ಓರ್ವನ ಬಂಧನ
ಉಳ್ಳಾಲ: ದಸರಾ ಶೋಭಾಯಾತ್ರೆಯಲ್ಲಿ ಪೊಲೀಸರು ಟ್ಯಾಬ್ಲೋಗಳ ಧ್ವನಿವರ್ಧಕಗಳನ್ನ ಸ್ಥಗಿತಗೊಳಿಸಿದ್ದು, ಈ ವೇಳೆ ಪೊಲೀಸರು ಮತ್ತು ಯುವಕರ ನಡುವೆ ಘರ್ಷಣೆ ನಡೆದ ಘಟನೆ ನಿನ್ನೆ ರಾತ್ರಿ ವರದಿಯಾಗಿದೆ.
ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ರಕ್ಷಿತ್, ಆಶಿಶ್ ಮತ್ತು ಅಶ್ವತ್ಥ್ ಎಂಬವರನ್ನು ಉಳ್ಳಾಲ ಪೊಲೀಸರು ವಶಕ್ಕೆ ಪಡೆದಿದ್ದು ಅವರನ್ನು ಕೂಡಲೇ ಬಿಡುಗಡೆಗೊಳಿಸುವಂತೆ ಆಗ್ರಹಿಸಿ ಸಾರ್ವಜನಿಕರು ಶೋಭಾಯಾತ್ರೆಯನ್ನು ಸ್ಥಗಿತಗೊಳಿಸಿ ಠಾಣೆಯ ಎದುರು ಪ್ರತಿಭಟನೆ ನಡೆಸಿದ್ದಾರೆ.
ಉಳ್ಳಾಲದ ಶಾರದಾ ನಿಕೇತನದಲ್ಲಿ ಜಲಸ್ಥಂಭನದ ಪ್ರಯುಕ್ತ ನಡೆದ ಶೋಭಾಯಾತ್ರೆಯು ಉಳ್ಳಾಲ ಪೇಟೆ, ವಿದ್ಯಾರಣ್ಯ ನಗರ, ಚೀರುಂಭ ಭಗವತೀ ಕ್ಷೇತ್ರದ ಒಳರಸ್ತೆಯಾಗಿ ಉಳ್ಳಾಲ ಪೊಲೀಸ್ ಠಾಣೆಯ ಬಳಿಯ ಅಬ್ಬಕ್ಕ ವೃತ್ತಕ್ಕೆ ಬಂದಿತ್ತು. ಕೆಲ ಟ್ಯಾಬ್ಲೋಗಳು ಠಾಣೆಯ ಮುಂಭಾಗದಿಂದ ಹಾದು ಹೋಗಿದ್ದು, ರಾತ್ರಿ ವೇಳೆಗೆ ಪೊಲೀಸರು ಬಾಕಿ ಉಳಿದ ಟ್ಯಾಬ್ಲೋಗಳ ಧ್ವನಿವರ್ಧಕಗಳನ್ನ ಸ್ಥಗಿತಗೊಳಿಸಿದ್ದಾರೆ. ಈ ವೇಳೆ ನೆರೆದಿದ್ದ ಯುವಕರು ಮತ್ತು ಪೊಲೀಸರ ನಡುವೆ ಘರ್ಷಣೆ ಉಂಟಾಗಿದೆ.
ಉದ್ರಿಕ್ತ ಜನರು ಶೋಭಾಯಾತ್ರೆಯನ್ನು ಸ್ಥಗಿತಗೊಳಿಸಿ ಠಾಣೆಯ ಮುಂಭಾಗದಲ್ಲಿ ಜಮಾಯಿಸಿ ಯುವಕರನ್ನ ಬಿಡುಗಡೆಗೊಳಿಸಿದರೆ ಮಾತ್ರ ಶೋಭಾಯಾತ್ರೆ ನಡೆಸುವುದಾಗಿ ಘೋಷಣೆ ಕೂಗಿದ್ದಾರೆ. ಈ ಸಂದರ್ಭ ಠಾಣೆಗೆ ಭೇಟಿ ನೀಡಿದ ಡಿಸಿಪಿ ಮಿಥುನ್ ಹೆಚ್.ಎನ್ ಅವರು ಸ್ಥಳಕ್ಕೆ ಹೆಚ್ಚುವರಿ ಪೊಲೀಸರನ್ನು ಕರೆಸಿಕೊಂಡಿದ್ದಾರೆ.
ಈ ಸಂದರ್ಭ ಬಿಜೆಪಿ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ, ಮುಖಂಡರಾದ ಸಂತೋಷ್ ಬೋಳಿಯಾರ್ ,ಮೊಗವೀರ ಸಮಾಜದ ಅಧ್ಯಕ್ಷ ಯಶವಂತ ಅಮೀನ್ ಠಾಣೆಗೆ ಆಗಮಿಸಿ ಡಿಸಿಪಿ ಅವರಲ್ಲಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಡಿಸಿಪಿಯವರು ಬಂಧಿತರಲ್ಲಿ ರಕ್ಷಿತ್ ಎಂಬಾತನ ವಿರುದ್ಧ ಈ ಹಿಂದೆಯೇ ಪ್ರಕರಣಗಳಿದ್ದು, ಆತ ಪೊಲೀಸರನ್ನು ಅವಾಚ್ಯವಾಗಿ ನಿಂದಿಸಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಉಳಿದ ಇಬ್ಬರು ಯುವಕರನ್ನು ಬಿಟ್ಟು ಕಳುಹಿಸುತ್ತೇವೆ, ಶೋಭಾಯಾತ್ರೆ ಮುಂದುವರಿಸುವಂತೆ ತಿಳಿಸಿದರು.
ಸೇವಂತಿಗುಡ್ಡೆಯ ರಕ್ಷಿತ್ ಶೆಟ್ಟಿ (27) ಎಂಬಾತನ ವಿರುದ್ಧ ಪಿಎಸ್ ಐ ಕೃಷ್ಣ ಅವರ ದೂರಿನ ಮೇರೆಗೆ ಕರ್ತವ್ಯಕ್ಕೆ ಅಡ್ಡಿಪಡಿಸಿದ ಕುರಿತಂತೆ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.