×
Ad

ಉಳ್ಳಾಲದಲ್ಲಿ ಪ್ರಥಮ ಬೋಟ್ ಆ್ಯಂಬುಲೆನ್ಸ್‌ಗೆ ಚಾಲನೆ : ನದಿಮಧ್ಯೆ ಧ್ವಜಾರೋಹಣ

ಉಳ್ಳಾಲದ ಘನತೆ ಹೆಚ್ಚಿಸಿದ ಐತಿಹಾಸಿಕ ಕಾರ್ಯಕ್ರಮ: ಯು.ಟಿ.ಖಾದರ್

Update: 2026-01-26 20:07 IST

ಮಂಗಳೂರು : ಉಳ್ಳಾಲದ ಜನತೆ ಮತ್ತು ಮೀನುಗಾರರು ಮನಸ್ಸು ಮಾಡಿದರೆ ಯಾವುದೇ ಕಾರ್ಯ ಮಾಡಬಲ್ಲರು ಎನ್ನುವುದಕ್ಕೆ ‘ಬೋಟ್ ಆ್ಯಂಬುಲೆನ್ಸ್’ ಮತ್ತು ಕಾರ್ಯಕ್ರಮ ಸಾಕ್ಷಿಯಾಗಿದೆ, ಅಲ್ಲದೆ ಈ ಕಾರ್ಯಕ್ರಮ ಉಳ್ಳಾಲದ ಘನತೆಯನ್ನು ರಾಜ್ಯಮಟ್ಟದಲ್ಲಿ ಹೆಚ್ಚಿಸಿದೆ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಶ್ಲಾಘಿಸಿದ್ದಾರೆ.

ಉಳ್ಳಾಲ ವಲಯ ನಾಡದೋಣಿ ಮತ್ತು ಗಿಲ್ನೆಟ್ ಮೀನುಗಾರರ ಸಂಘದ ವತಿಯಿಂದ ನಿರ್ಮಿಸಲಾದ ಪ್ರಥಮ ‘ಬೋಟ್ ಆ್ಯಂಬುಲೆನ್ಸ್’ ಸೋಮವಾರ ಜಪ್ಪಿನಮುಗೇರು ನದಿತಟದಲ್ಲಿ ಲೋಕಾರ್ಪಣೆಗೈದು ಅವರು ಮಾತನಾಡಿದರು.

ಯಾವುದೇ ಯೋಜನೆ ರೂಪಿಸುವುದು ಸುಲಭ, ಆದರೆ ಕಾರ್ಯಗತಗೊಳಿಸುವುದು ಕಷ್ಟ. ಆದರೆ ಮೀನುಗಾರರು ಯೋಜನೆ ರೂಪಿಸಿ ಕಾರ್ಯಕತಗೊಳಿಸಿದ್ದಾರೆ. ಈ ಮಾದರಿ ಯೋಜನೆ ಮುಂದಿನ ದಿನಗಳಲ್ಲಿ ರಾಜ್ಯ ಸರಕಾರಕ್ಕೆ ಪ್ರೇರಣೆಯಾಗಲಿದೆ. ಮೀನುಗಾರರ ಜೀವ ರಕ್ಷಣೆಗಾಗಿಯೇ ಇಂತಹ ಬೋಟ್ ಆ್ಯಂಬುಲೆನ್ಸ್ ಸೇವೆ ಅತ್ಯಂತ ಮಹತ್ವದ್ದಾಗಿದೆ ಎಂದು ತಿಳಿಸಿದರು.

ವಿಧಾನಪರಿಷತ್ ಮಾಜಿ ಸದಸ್ಯ ಬಿ.ಎಂ. ಫಾರೂಕ್ ಮಾತನಾಡಿ, ನೀರಿನ ಮೇಲೆ ಧ್ವಜಾರೋಹಣ ನಡೆಸಿರುವುದು ವಿನೂತನ ಹಾಗೂ ಐತಿಹಾಸಿಕ ಕಾರ್ಯಕ್ರಮ. ಸಮುದ್ರದಲ್ಲಿ ಅಪಾಯದಲ್ಲಿರುವವರ ರಕ್ಷಣಾ ಕಾರ್ಯ ದೇವರ ಕೆಲಸದಂತಿದ್ದು, ಈ ಸೇವೆಗೆ ಇನ್ನಷ್ಟು ಶಕ್ತಿ ಸಿಗಲಿ. ಮೀನುಗಾರರ ಆರ್ಥಿಕ ಬದುಕು ಭದ್ರವಾಗಲಿ ಎಂದು ಹಾರೈಸಿದರು.

16 ಲಕ್ಷ ರೂ. ವೆಚ್ಚದ ಯೋಜನೆ :

ನಾಡದೋಣಿ ಮತ್ತು ಗಿಲ್ ನೆಟ್ ಮೀನುಗಾರರ ಸಂಘದ ಅಧ್ಯಕ್ಷ ಹನೀಫ್ ಸೋಲಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ,  ಬೋಟ್ ಆ್ಯಂಬುಲೆನ್ಸ್ ಯೋಜನೆ ರೂಪಿಸಿದ ಬಳಿಕ ಕಾರ್ಯಗತಗೊಳಿಸಲು ಆರ್ಥಿಕ ಸಮಸ್ಯೆಯಿಂದಾಗಿ ಮೂರು ವರ್ಷ ಬೇಕಾಯಿತು. 16 ಲಕ್ಷ ಖರ್ಚು ತಗುಲಿದ್ದು, ಆರು ಲಕ್ಷ ಸಾಲದಲ್ಲಿದ್ದೇವೆ. ನಮ್ಮ ಸಂಘದಲ್ಲಿ ಸಣ್ಣ ಮೀನುಗಾರರಿದ್ದು, ಸಾಲ ಭರಿಸುವುದು ಸುಲಭವಲ್ಲ. ಉಳ್ಳಾಲದಲ್ಲಿರುವ ಉದ್ಯಮಿಗಳು, ಮೀನುಗಾರರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಟ್ರಾಲ್ಬೋಟ್ ಮೀನುಗಾರರ ಸಂಘದ ಅಧ್ಯಕ್ಷ ಚೇತನ್ ಬೆಂಗ್ರೆ, ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕಿ ರೇವತಿ, ಜೆಡಿಎಸ್ ಮುಖಂಡ ಇಕ್ಬಾಲ್ ಮೂಲ್ಕಿ, ಸಂಘದ ವ್ಯವಸ್ಥಾಪಕ ಅಶ್ರಫ್ ಉಳ್ಳಾಲ್, ಅಬೂಬಕರ್ ಸಿದ್ದೀಕ್, ಸಲಹೆಗಾರ ಇಸ್ಮಾಯಿಲ್ ಕೋಡಿ, ಸದಸ್ಯರಾದ ರಫೀಕ್ ಕೋಡಿ, ನಿಝಾರ್, ಅಝ್ವೀಲ್, ಹನೀಫ್ ಕೋಟೆಪುರ, ಪೈಲಟ್ಗಳಾದ ಇಸ್ಮಾಯೀಲ್, ಜಮಾಲ್, ಇಕ್ಬಾಲ್, ಸಲೀಂ ಮೊದಲಾದವರು ಉಪಸ್ಥಿತರಿದ್ದರು.

ಸೈಯದ್‌ ಮದನಿ ದರ್ಗಾದ ಮಾಜಿ ಅಧ್ಯಕ್ಷ ಅಬ್ದುಲ್ ರಶೀದ್ ಸ್ವಾಗತಿಸಿದರು. ಮೋಹನ್ ಶಿರ್ಲಾಲ್ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದ ವಿಶೇಷತೆ :

ಪ್ರಥಮ ಬಾರಿಗೆ ನಿರ್ಮಿಸಲಾದ ‘ಬೋಟ್ ಆ್ಯಂಬುಲೆನ್ಸ್’ ಮೀನುಗಾರರ ಪಾಲಿಗೆ ಅತ್ಯಂತ ಸ್ಮರಣೀಯಗೊಳಿಸಲು ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ನದಿತಟದಲ್ಲಿ ‘ಬೋಟ್ ಆಂಬ್ಯುಲೆನ್ಸ್’ ಲೋಕಾರ್ಪಣೆಗೊಳಿಸಿದ ಖಾದರ್, ವಿದಾನಪರಿಷತ್ ಸದಸ್ಯ ಬಿ.ಎಂ.ಫಾರೂಕ್ ಜೊತೆ ಅದೇ ಬೋಟ್ ನಲ್ಲಿ ತೆರಳಿ ನದಿಮಧ್ಯೆ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿದರು. ಬಳಿಕ ಸೈರನ್ ಮೊಳಗಿಸುತ್ತಾ ತೆರಳಿದ ಬೋಟ್ ನಲ್ಲಿ ಖಾದರ್ ಹಾಗೂ ಗಣ್ಯರು ಒಂದು ಸುತ್ತು ಪ್ರಯಾಣಿಸಿದರು.

ಈ ಸಂದರ್ಭದಲ್ಲಿ ಕೇರಳ ಮೂಲದ ಯುವಕರ ಕೋಲಾಟ ನೃತ್ಯ ವಿಶೇಷ ಮನರಂಜನೆ ನೀಡಿತು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News