ಉಳ್ಳಾಲ | ಪ.ಪಂ. ಸಾಮಾನ್ಯ ಸಭೆಯಲ್ಲಿ ಅಸಮರ್ಪಕ ಪೈಪ್ ಲೈನ್ ಕಾಮಗಾರಿಯ ಚರ್ಚೆ
ಉಳ್ಳಾಲ : ಅಮೃತ್ 2.0 ಕುಡಿಯುವ ನೀರು ಯೋಜನೆ ಅಸಮರ್ಪಕ ಪೈಪ್ ಲೈನ್ ಕಾಮಗಾರಿ ಬಗೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರ ಶ್ರೀಕಾಂತ್ ರನ್ನು ತರಾಟೆ ತೆಗೆದುಕೊಂಡ ಘಟನೆ ಕೋಟೆಕಾರ್ ಪ.ಪಂ. ಸಾಮಾನ್ಯ ಸಭೆಯಲ್ಲಿ ನಡೆಯಿತು.
ಕೋಟೆಕಾರ್ ಪ.ಪಂ. ಅಧ್ಯಕ್ಷ ದಿವ್ಯ ಸತೀಶ್ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಆಡಳಿತ ಪಕ್ಷದ ಸದಸ್ಯ ಸುಜಿತ್ ಮಾಡೂರು ಅವರು, ಕುಡಿಯುವ ನೀರಿನ ಕಾಮಗಾರಿಯನ್ನು ಸಮರ್ಪಕವಾಗಿ ಮಾಡಿ. ಕೆಲವು ಕಡೆ ರಸ್ತೆ ಅಗೆದು ಹಾಗೆ ಬಿಟ್ಟಿದ್ದೀರಿ. ಈ ರೀತಿ ಮಾಡುವುದು ಬೇಡ ಎಂದರು. ಇದಕ್ಕೆ ಧ್ವನಿ ಗೂಡಿಸಿದ ಕೌನ್ಸಿಲರ್ ಅಹ್ಮದ್ ಅಜ್ಜಿನಡ್ಕ ಅವರು ಒಂದು ವಾರ್ಡ್ ನ ಕಾಮಗಾರಿ ಪೂರ್ಣಗೊಳಿಸಿದ ಬಳಿಕ ಇನ್ನೊಂದು ವಾರ್ಡ್ ನ ಕಾಮಗಾರಿ ಮಾಡಿ ಎಂದರು. ಇದೇ ವೇಳೆ ಸದಸ್ಯ ಹರೀಶ್ ಅವರು ಎಲ್ಲಾ ಮನೆಗಳಿಗೆ ಪೈಪ್ ಲೈನ್ ಕಾಮಗಾರಿ ಯಾಕೆ ಮಾಡಿಲ್ಲ ಎಂದು ಪ್ರಶ್ನಿಸಿ ತರಾಟೆಗೈದರು.
ಅಧ್ಯಕ್ಷ ದಿವ್ಯ ಸತೀಶ್ ಮಾತನಾಡಿ, ಅರ್ಧಂಬರ್ಧ ಕಾಮಗಾರಿ ಮಾಡುವುದು ಬೇಡ. ಒಂದೆಡೆ ಆರಂಭಿಸಿದ ಕಾಮಗಾರಿ ಪೂರ್ಣ ಆದ ಬಳಿಕ ಇನ್ನೊಂದು ವಾರ್ಡ್ ನ ಕಾಮಗಾರಿ ಆರಂಭಿಸಿ. ಪೈಪ್ ಲೈನ್ ಅನ್ನು ಅಗೆದು ಚರಂಡಿ ಮುಚ್ಚುವುದು ಬೇಡ. ಕಾಮಗಾರಿ ಆದ ಬಳಿಕ ಕಾಂಕ್ರೀಟ್ ನಿಂದ ಹೊಂಡ ಮುಚ್ಚಬೇಕು ಎಂದು ಸೂಚನೆ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರ ಶ್ರೀಕಾಂತ್ ಅವರು, ಮಳೆಗಾಲದಲ್ಲಿ ಹೊಂಡ ಮುಚ್ಚಲು ಕಷ್ಟಕರವಾಗುತ್ತದೆ. ಆಕ್ಷೇಪ ಇದ್ದ ಮನೆಗಳಿಗೆ ಮಾತ್ರ ಪೈಪ್ ಲೈನ್ ಕಾಮಗಾರಿ ಮಾಡಿಲ್ಲ. ಉಳಿದ ಮನೆಗಳಿಗೆ ಸಂಪರ್ಕ ನೀಡಲಾಗುವುದು. ಜನವರಿ ತಿಂಗಳಿಗೆ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದರು.
ಸಾಮಾನ್ಯ ಸಭೆಗೆ ಅಧಿಕಾರಿಗಳು ಗೈರು ಹಾಜರಿ ಬಗೆ ಸಭೆಯಲ್ಲಿ ಪ್ರಸ್ತಾಪಿಸಿದ ಸುಜಿತ್ ಮಾಡೂರು ಅವರು, ಇಲಾಖಾಧಿಕಾರಿಗಳು ಗೈರು ಆದರೆ ಸಮಸ್ಯೆಗಳನ್ನು ಯಾರಲ್ಲಿ ಚರ್ಚಿಸಬೇಕು ಎಂದು ಪ್ರಶ್ನಿಸಿದರು. ಇದಕ್ಕೆ ಧ್ವನಿ ಗೂಡಿಸಿದ ಕೌನ್ಸಿಲರ್ ಅಹ್ಮದ್ ಅಜ್ಜಿನಡ್ಕ ಮನೆಹಾನಿ, ಪರಿಹಾರ ಬಗೆ ಚರ್ಚಿಸಲು ಗ್ರಾಮಕರಣಿಕರು ಬೇಕು ಎಂದರು.
ಸದಸ್ಯರ ಒತ್ತಡ ಮೇರೆಗೆ ಸಭೆಗೆ ಹಾಜರಾದ ಗ್ರಾಮಕರಣಿಕ ನವ್ಯ ಅವರು, ಮನೆಹಾನಿ ಹಾಗೂ ಪರಿಹಾರ ಮೊತ್ತದ ಬಗ್ಗೆ ಸಭೆಯಲ್ಲಿ ಮಾಹಿತಿ ನೀಡಿದರು.
15ನೇ ಹಣಕಾಸು ಯೋಜನೆಯಡಿ ಐವರು ಮುಸ್ಲಿಮರು ಕೌನ್ಸಿಲರ್ ಗಳ ವಾರ್ಡ್ ಗಳಿಗೆ ಅನುದಾನ ನೀಡದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅಹ್ಮದ್ ಅಜ್ಜಿನಡ್ಕ ಅವರು, ಅನುದಾನ ನೀಡುವುದರಲ್ಲಿ ಸಮಾನತೆ ಪಾಲಿಸಿ. ಎಲ್ಲಾ ವಾರ್ಡ್ ಗಳಿಗೆ ಅನುದಾನ ನೀಡಿ ಐದು ವಾರ್ಡ್ ಗಳನ್ನು ಕಡೆಗಣಿಸಿರುವುದಕ್ಕೆ ನಮ್ಮ ಆಕ್ಷೇಪ ಇದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ದಿವ್ಯ ಸತೀಶ್ ಅವರು, ಐದು ವಾರ್ಡ್ ಗಳಿಗೆ ಅನುದಾನ ಒದಗಿಸುವುದಾಗಿ ಭರವಸೆ ನೀಡಿದರು.
ಕೋಟೆಕಾರ್ ಪ.ಪಂ.ವ್ಯಾಪ್ತಿಯಲ್ಲಿ ಪ್ರಗತಿಯಲ್ಲಿರುವ ಇಂದಿರಾ ಕ್ಯಾಂಟೀನ್ ಕಟ್ಟಡಕ್ಕೆ ಆವರಣ ಗೋಡೆ, ಸಿ.ಸಿ.ಟಿವಿ ಅಳವಡಿಕೆ ಕಾಮಗಾರಿಯನ್ನು ಪ.ಪಂ.ಉದ್ಯಮ ನಿಧಿಯಡಿ ನಿರ್ವಹಿಸಲು 15 ಲಕ್ಷ ರೂ. ಮಂಜೂರು ಮಾಡುವ ಬಗ್ಗೆ ಅಧ್ಯಕ್ಷ ದಿವ್ಯ ಸತೀಶ್ ಸಭೆಯಲ್ಲಿ ಪ್ರಸ್ತಾಪಿಸಿದಾಗ ಸಹಮತ ವ್ಯಕ್ತಪಡಿಸಿದ ಸದಸ್ಯರು ಕಾಮಗಾರಿಗೆ ಪ.ಪಂ.ಹೆಸರು ಇಡಬೇಕು ಎಂದರು.
ಸಭೆಯಲ್ಲಿ ಉಪಾಧ್ಯಕ್ಷ ಪ್ರವೀಣ್, ಸ್ಥಾಯಿ ಸಮಿತಿ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ, ಮುಖ್ಯಾಧಿಕಾರಿ ಮಾಲಿನಿ ಉಪಸ್ಥಿತರಿದ್ದರು.