×
Ad

ನ.5ರಂದು ವಾದ್ಯ ಕಲಾ ಮೇಳ

Update: 2023-10-31 22:45 IST

ಮಂಗಳೂರು, ಅ.31: ದ.ಕ.ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಾದ್ಯ ಕಲಾವಿದರ ಸಂಘ(ರಿ) ಇದರ ಆಶ್ರಯದಲ್ಲಿ ವಾದ್ಯ ಕಲಾ ಮೇಳ ನ.5ರಂದು ಉರ್ವಸ್ಟೋರ್‌ನ ಡಾ.ಬಿ.ಆರ್. ಅಂಬೇಡ್ಕರ್ ಸಭಾ ಭವನದಲ್ಲಿ ನಡೆಯಲಿದೆ.

ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಸಂಘದ ಗೌರವ ಸಲಹೆಗಾರ ಕೆ.ಕೆ. ಪೇಜಾವರ ಅವರು 2012ರಲ್ಲಿ ಪ್ರಾರಂಭಗೊಂಡ ಸಂಘ ಕಳೆದ 10 ವರ್ಷಗಳಲ್ಲಿ ಸಂಸ್ಥೆಯ ವಾದ್ಯಕಲಾವಿದರ ಬಗ್ಗೆ ವಿಶೇಷ ಕಾಳಜಿ ವಹಿಸಿಕೊಂಡು ಅಶಕ್ತ ಕಲಾವಿದರಿಗೆ ಸಹಕಾರವನ್ನು ನೀಡುತ್ತಾ ಬಂದಿದೆ ಎಂದರು.

ಸಂಘದಲ್ಲಿ 300 ಮಂದಿ ಕಲಾವಿದ ಸದಸ್ಯರಿದ್ದಾರೆ ಅವರೆಲ್ಲ ತುಳುನಾಡಿನ ದೈವ ದೇವರುಗಳ ಕಲಾ ಸೇವೆಯನ್ನು ಮಾಡುತ್ತಿದ್ದಾರೆ. ಇನ್ನಿತರ ಸಮಯದಲ್ಲಿ ಮೇಸ್ತ್ರಿ ಕೆಲಸ , ಕೂಲಿಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ನಾವು ಮಾಡುವ ಕಲಾ ಸೇವೆಯನ್ನು ಸಮಾಜ ಮತ್ತು ಸರಕಾರ ಗುರುತಿಸಬೇಕು ಎಂಬ ಆಶಯದೊಂದಿಗೆ ಒಂದು ದಿನದ ವಾದ್ಯ ಕಲಾ ಮೇಳವನ್ನು ಆಯೋಜಿಸಲಾಗಿದೆ ಎಂದು ಕೆ.ಕೆ. ಪೇಜಾವರ ಮಾಹಿತಿ ನೀಡಿದರು.

ಬೆಳಗ್ಗೆ 8:30ಕ್ಕೆ ಮಂಗಳಾ ಕ್ರೀಡಾಂಗಣದಲ್ಲಿ ಸಂಭ್ರಮದ ಮೆರವಣಿಗೆ ನಡೆಯಲಿದೆ. 10:30ಕ್ಕೆ ವಾದ್ಯ ಕಲಾಮೇಳ ಉದ್ಘಾಟನಾ ಸಮಾರಂಭ ನಡೆಯಲಿದೆ. ವಾದ್ಯ ಕಲಾ ಮೇಳದ ಕಾರ್ಯಕ್ರಮವನ್ನು ವಿಧಾನ ಸಭೆಯ ಸ್ಪೀಕರ್ ಯು.ಟಿ. ಖಾದರ್ ಉದ್ಘಾಟಿಸಲಿದ್ದಾರೆ. ಕಚ್ಚೂರು ಕ್ಷೇತ್ರದ ಧರ್ಮದರ್ಶಿ ಗೋಕುಲ್‌ದಾಸ್ ಬಾರ್ಕೂರು ದೀಪ ಬೆಳಗಿಸಲಿದ್ದಾರೆ. ಚಲನಚಿತ್ರ ನಿರ್ದೇಶಕ ರಾಜ್ ಬಿ. ಶೆಟ್ಟಿ ವಾದ್ಯ ಕಲಾ ಮೇಳ ಉದ್ಘಾಟಿಸಲಿದ್ದಾರೆ. ಸಂಸದ ನಳಿನ್ ಕುಮಾರ್ ಕಟೀಲ್, ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಶಾಸಕ ಡಿ.ವೇದ ವ್ಯಾಸ ಕಾಮತ್, ಮಾಜಿ ಸಚಿವ ಬಿ.ರಮಾನಾಥ ರೈ ಸೇರಿದಂತೆ ನಾನಾ ಕ್ಷೇತ್ರದ ಗಣ್ಯರು ಭಾಗವಹಿಸಲಿದ್ದಾರೆ ಎಂದರು.

ಸುಮಾರು 20 ಮಂದಿ ಹಿರಿಯ ಕಲಾವಿದರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗುವುದು ಎಂದು ಪೇಜಾವರ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಗೌರವಾಧ್ಯಕ್ಷ ಗಿರಿಧರ್ ಶೆಟ್ಟಿ, ಸಂಘದ ಕಾರ್ಯದರ್ಶಿ ಕೃಷ್ಣ ಎಸ್ಕೋಡಿ, ಗೌರವ ಸಲಹೆಗಾರ ಕೆ.ಕೆ. ಪೇಜಾವರ, ಉಪಾಧ್ಯಕ್ಷ ಸದಾಶಿವ ಕುಡುಪು, ಕೋಶಾಧಿಕಾರಿ ಯಶವಂತ ನೀರುಮಾರ್ಗ, ಕೃಷ್ಣ ಫರಂಗಿಪೇಟೆ, ಲಕ್ಷ್ಮಣ ಸಿದ್ದಾರ್ಥನಗರ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News