×
Ad

ಮಧ್ಯಪ್ರದೇಶ | ತಾಯಿಯ ಕಣ್ಣಿಗೆ ಕಾರದ ಪುಡಿ ಎರಚಿ ಸಕ್ಕರೆ ವರ್ತಕನ ಪುತ್ರನನ್ನು ಅಪಹರಿಸಿದ ದುಷ್ಕರ್ಮಿಗಳು

Update: 2025-02-13 19:27 IST

Photo Credit : freepik

ಗ್ವಾಲಿಯರ್: ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ತಾಯಿಯ ಕಣ್ಣಿಗೆ ಕಾರದ ಪುಡಿ ಎರಚಿ ಉದ್ಯಮಿಯೊಬ್ಬರ ಆರು ವರ್ಷದ ಪುತ್ರನನ್ನು ಅಪಹರಿಸಿರುವ ಘಟನೆ ಗುರುವಾರ ಗ್ವಾಲಿಯರ್ ನಲ್ಲಿ ನಡೆದಿದೆ. ಅಪಹರಣಕ್ಕೀಡಾಗಿರುವ ಬಾಲಕನೊಂದಿಗೆ ಆತನ ತಾಯಿಯು ಶಾಲೆಯ ಬಸ್ ಗಾಗಿ ಕಾಯುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಘಟನೆಯು ಗ್ವಾಲಿಯರ್ ನ ಮೊರಾರ್ ಪ್ರದೇಶದಲ್ಲಿ ಇಂದು ಬೆಳಗ್ಗೆ ನಡೆದಿದೆ ಎಂದು ಅವರು ಹೇಳಿದ್ದಾರೆ.

“ಮೋಟಾರ್ ಬೈಕ್ ನಲ್ಲಿ ಬಂದಿರುವ ಇಬ್ಬರು, ಬಾಲಕನ ತಾಯಿಯ ಕಣ್ಣಿಗೆ ಕಾರದ ಪುಡಿ ಎರಚಿ, ಆತನನ್ನು ತಮ್ಮ ಮೋಟಾರ್ ಬೈಕ್ ನಲ್ಲಿ ಅಪಹರಿಸಿದ್ದಾರೆ. ಅಪಹರಣಕ್ಕೀಡಾಗಿರುವ ಬಾಲಕನ ತಂದೆಯು ಸಕ್ಕರೆ ವರ್ತಕರಾಗಿದ್ದಾರೆ” ಎಂದು ಗ್ವಾಲಿಯರ್ ವಲಯದ ಪೊಲೀಸ್ ಮಹಾನಿರೀಕ್ಷಕ ಅರವಿಂದ್ ಸಕ್ಸೇನಾ ತಿಳಿಸಿದ್ದಾರೆ.

“ಬೆಳಗ್ಗೆ ಸುಮಾರು 8.10ರ ವೇಳೆಗೆ ಘಟನೆಯ ಕುರಿತು ಮಾಹಿತಿ ದೊರೆತ ನಂತರ, ಆರೋಪಿಗಳನ್ನು ಬಂಧಿಸಲು ಹಾಗೂ ಬಾಲಕನನ್ನು ರಕ್ಷಿಸಲು ಸಾಧ್ಯವಾಗುವಂಥ ಯಾವುದೇ ಮಾಹಿತಿ ನೀಡುವವರಿಗೆ 30,000 ರೂ. ಬಹುಮಾನವನ್ನು ಘೋಷಿಸಲಾಗಿದೆ” ಎಂದು ಅವರು ಹೇಳಿದ್ದಾರೆ.

ಅಪಹೃತ ಬಾಲಕನು ಮುರಾರ್ ಪ್ರದೇಶದ ಸಿ.ಪಿ.ಕಾಲನಿಯಲ್ಲಿ ತಮ್ಮ ಕುಟುಂಬದೊಂದಿಗೆ ವಾಸಿಸುತ್ತಿರುವ ರಾಹುಲ್ ಗುಪ್ತ ಎಂಬುವವರ ಪುತ್ರ. ದೈನಂದಿನ ಅಭ್ಯಾಸದಂತೆ ಶಾಲಾ ಬಸ್ ಪಿಕಪ್ ಮಾಡುವ ಸ್ಥಳಕ್ಕೆ ತಮ್ಮ ಪುತ್ರನನ್ನು ಬಿಟ್ಟು ಬರಲು ಗುಪ್ತಾ ಅವರ ಪತ್ನಿ ತೆರಳಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಅಪಹರಣದ ನಡೆದ ಪ್ರದೇಶದಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಇಡೀ ಘಟನೆ ಸೆರೆಯಾಗಿದೆ ಎಂದೂ ಅವರು ಹೇಳಿದ್ದಾರೆ.

ಘಟನೆಯ ಬೆನ್ನಿಗೇ ಸ್ಥಳಕ್ಕೆ ಧಾವಿಸಿದ ಹಿರಿಯ ಪೊಲೀಸ್ ಅಧಿಕಾರಿಗಳು, ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News