×
Ad

10ನೇ ಬಾರಿ ಪ್ರಮಾಣ ವಚನ: ವಿಶ್ವ ದಾಖಲೆ ಪುಸ್ತಕದಲ್ಲಿ ನಿತೀಶ್ ಕುಮಾರ್ ಹೆಸರು ಸೇರ್ಪಡೆ

Update: 2025-12-06 18:17 IST

 ನಿತೀಶ್ ಕುಮಾರ್ | Photo Credit : PTI 

ಪಾಟ್ನಾ: ಸ್ವತಂತ್ರ ಭಾರತದಲ್ಲಿ ರಾಜ್ಯವೊಂದರ ಮುಖ್ಯಮಂತ್ರಿಯಾಗಿ 10ನೇ ಬಾರಿ ಪ್ರಮಾಣ ವಚನ ಸ್ವೀಕರಿಸಿದ ಏಕೈಕ ವ್ಯಕ್ತಿ ಎಂದು ವಿಶ್ವ ದಾಖಲೆಗಳ ಪುಸ್ತಕವು (ಡಬ್ಲ್ಯುಬಿಆರ್) ಪಟ್ಟಿ ಮಾಡುವುದರೊಂದಿಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಜಾಗತಿಕ ಮನ್ನಣೆಯನ್ನು ಪಡೆಯಲು ಸಜ್ಜಾಗಿದ್ದಾರೆ. ದಾಖಲೆಯ ಹತ್ತನೇ ಬಾರಿಗೆ ಬಿಹಾರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಕ್ಕಾಗಿ ಡಬ್ಲ್ಯುಬಿಆರ್ ನಿತೀಶ್ ರನ್ನು ಅಭಿನಂದಿಸಿದೆ.

ನಿತೀಶ್ 1947ರಿಂದ 2025ರವರೆಗಿನ ಅವಧಿಯಲ್ಲಿ ಹತ್ತು ಸಲ ಪ್ರಮಾಣ ವಚನ ಸ್ವೀಕರಿಸಿದ ಏಕೈಕ ವ್ಯಕ್ತಿಯಾಗಿದ್ದಾರೆ ಎಂದು ಅಭಿನಂದನಾ ಪತ್ರದಲ್ಲಿ ತಿಳಿಸಿರುವ ಡಬ್ಲ್ಯುಬಿಆರ್,‌ ಈ ಮೈಲಿಗಲ್ಲು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಂದು ಮಾನದಂಡವೊಂದನ್ನು ಸ್ಥಾಪಿಸಿದ್ದು,ಇದು ನಾಯಕತ್ವದ ಅಪರೂಪದ ನಿರಂತರತೆಯನ್ನು ಪ್ರತಿಬಿಂಬಿಸುತ್ತದೆ. ಇದು ಅವರ ಬದ್ಧತೆ,ದೂರದೃಷ್ಟಿಯ ನಾಯಕತ್ವ ಮತ್ತು ಅವರ ಮೇಲೆ ಬಿಹಾರದ ಜನತೆಯ ಅಚಲ ನಂಬಿಕೆಯನ್ನು ಸೂಚಿಸುತ್ತದೆ. ಹತ್ತು ಬಾರಿ ರಾಜ್ಯವನ್ನು ಮುನ್ನಡೆಸುವುದು ಗಮನಾರ್ಹ ವೈಯಕ್ತಿಕ ಸಾಧನೆ ಮಾತ್ರವಲ್ಲ,ಅದು ಇಡೀ ದೇಶಕ್ಕೆ ಗೌರವದ ಕ್ಷಣವಾಗಿದೆ ಎಂದು ಹೇಳಿದೆ.

ಆಡಳಿತ,ಅಭಿವೃದ್ಧಿ,ಸಮಾಜ ಕಲ್ಯಾಣ ಮತ್ತು ಆಡಳಿತಾತ್ಮಕ ಸ್ಥಿರತೆಯನ್ನು ಕಾಯ್ದುಕೊಳ್ಳುವಲ್ಲಿ ನಿತೀಶ್ ಅವರ ನಿರಂತರ ಪ್ರಯತ್ನಗಳು ದೇಶಾದ್ಯಂತ ಕೋಟ್ಯಂತರ ಜನರಿಗೆ ಸ್ಫೂರ್ತಿಯಾಗಿವೆ ಹಾಗೂ ಪ್ರಸ್ತುತ ಮತ್ತು ಭವಿಷ್ಯದ ಪೀಳಿಗೆಗಳಿಗೆ ಪ್ರೇರಣೆ ನೀಡುವುದನ್ನು ಮುಂದುವರಿಸಲಿವೆ. ಅಪರೂಪದ ಸಾಧನೆಯ ಸಂಕೇತವಾಗಿ ಅವರ ಹೆಸರು ಡಬ್ಲ್ಯುಬಿಆರ್ ಪಟ್ಟಿಯಲ್ಲಿ ಸೇರ್ಪಡೆಗೊಂಡಿದೆ. ಅವರ ದಾಖಲೆಯ ಮೈಲಿಗಲ್ಲನ್ನು ಅಂಗೀಕರಿಸುವ ಅಧಿಕೃತ ಪ್ರಮಾಣ ಪತ್ರವನ್ನು ಸಂಸ್ಥೆಯು ಒದಗಿಸಲಿದೆ ಎಂದು ಪತ್ರದಲ್ಲಿ ಹೇಳಲಾಗಿದೆ.

ನ.20ರಂದು ನಿತೀಶ್ ಕುಮಾರ್ ಬಿಹಾರದ ಮುಖ್ಯಮಂತ್ರಿಯಾಗಿ 10ನೇ ಸಲ ಪ್ರಮಾಣ ವಚನ ಸ್ವೀಕರಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News