ಭಾರತೀಯರು ಈ ವರ್ಷ ಗೂಗಲ್ ನಲ್ಲಿ ಅತಿ ಹೆಚ್ಚು ಹುಡುಕಾಡಿದ ವಿಷಯಗಳು ಯಾವುವು ಗೊತ್ತೆ?
ʼಮಹಾಕುಂಭʼದಿಂದ ʼಆಪರೇಶನ್ ಸಿಂಧೂರ್ʼ ವರೆಗೆ ಭಾರತೀಯರು ಕುತೂಹಲದಿಂದ ಹುಡುಕಿದ ವಿಷಯಗಳ ವಿವರ ಇಲ್ಲಿದೆ…
ಸಾಂದರ್ಭಿಕ ಚಿತ್ರ | Photo Credit : freepik
ಗೂಗಲ್ ಪ್ರತಿ ವರ್ಷ ವಾರ್ಷಿಕ ಹುಡುಕಾಟದ ವಿಷಯಗಳನ್ನು ಬಿಡುಗಡೆ ಮಾಡುತ್ತದೆ. ಟ್ರೆಂಡಿಂಗ್ ಇರುವ ಸುದ್ದಿಗಳು ಮತ್ತು ಯಾರು ಯಾವುದನ್ನು ಹೆಚ್ಚು ಹುಡುಕಾಡಿದ್ದಾರೆ ಎನ್ನುವ ವರದಿಯನ್ನು 2025ನೇ ವರ್ಷಕ್ಕೂ ಗೂಗಲ್ ಬಿಡುಗಡೆ ಮಾಡಿದೆ. ಭಾರತೀಯರ ಕುತೂಹಲದ ವಿಷಯಗಳಲ್ಲಿ ವೈವಿಧ್ಯಮಯವಾದ ಹುಡುಕಾಟದ ಪ್ರವೃತ್ತಿ ಕಂಡುಬಂದಿದೆ. ಧರ್ಮೇಂದ್ರರಿಂದ ಹಿಡಿದು ಮಹಾ ಕುಂಭದವರೆಗೆ ಭಾರತೀಯರು ಜನರು, ಘಟನೆಗಳು, ಸಾಂಸ್ಕೃತಿಕ ಕ್ಷಣಗಳನ್ನು ಹುಡುಕಾಡಿದ್ದಾರೆ.
ಸಿನಿಮಾ ವಿಚಾರಕ್ಕೆ ಬಂದಲ್ಲಿ, ಬಾಲಿವುಡ್ ಸಿನಿಮಾ ತಾರೆಗಳಾದ ಅನೀತ್ ಪಡ್ಡಾ ಮತ್ತು ಅಹಾನ್ ಪಾಂಡೆ ಗೂಗಲ್ ಹುಡುಕಾಟದಲ್ಲಿ ಟ್ರೆಂಡಿಂಗ್ ಆಗಿರುವ ತಾರೆಗಳಾಗಿದ್ದಾರೆ. ಅವರನ್ನು ಹೊರತುಪಡಿಸಿದರೆ ‘ಫೈನಲ್ ಡೆಸ್ಟಿನೇಶನ್’, ‘ಕಾಂತಾರ’ ಮತ್ತು ‘ಸ್ಕ್ವಿಡ್ ಗೇಮ್’ಗಳನ್ನು ಭಾರತೀಯರು ಹುಡುಕಾಡಿದ್ದಾರೆ. ಧರ್ಮೇಂದ್ರ ಮತ್ತು ಜುಬೀಹ್ ಗಾರ್ಗ್ ಅಂತಿಮ ನಮನ ಸಲ್ಲಿಸುತ್ತಿರುವುದೂ ಟ್ರೆಂಡ್ ಆಗಿದೆ.
ಚಾಟ್ಜಿಪಿಟಿ ಜನಪ್ರಿಯವಾಗಿರುವ ಹೊರತಾಗಿಯೂ ಜನರು ತಮ್ಮ ಕುತೂಹಲವನ್ನು ತಣಿಸಲು ಗೂಗಲ್ ಅನ್ನೇ ಬಳಸಿದ್ದಾರೆ. ಗೂಗಲ್ನ ‘ಜೆಮಿನಿ’ ಹುಡುಕಾಟದ ತಾಣವಾಗಿ ಮೊದಲ ಸ್ಥಾನ ಪಡೆದಿದೆ. ಆದರೆ ‘ಡೀಪ್ಸೀಕ್’ ಮತ್ತು ‘ಪರ್ಪ್ಲೆಕ್ಸಿಟಿ’ ಮೊದಲಾದ ಚಾಟ್ ಇಂಜಿನ್ ಗಳನ್ನೂ ಭಾರತೀಯರು ಬಳಸಿದ್ದಾರೆ.
ಕ್ರೀಡೆಯ ವಿಚಾರಕ್ಕೆ ಬಂದರೆ ‘ಐಪಿಎಲ್’ ಮತ್ತೊಮ್ಮೆ ಅತಿ ಹೆಚ್ಚು ಹುಡುಕಾಟದ ಕ್ರೀಡಾ ಪಂದ್ಯಾವಳಿಯಾಗಿದೆ. ಬಹಳಷ್ಟು ಮಂದಿ ವೈಭವ್ ಸೂರ್ಯವಂಶಿ ಮತ್ತು ಜೆಮಿಮಾ ರಾಡ್ರಿಗಸ್ ಮೊದಲಾದ ಕ್ರೀಡಾಪಟುಗಳನ್ನು ಹುಡುಕಾಡಿದ್ದಾರೆ. ಇತರ ಮಹಿಳಾ ಕ್ರೀಡಾಪಟುಗಳೂ ಹುಡುಕಾಟದಲ್ಲಿ ಸ್ಥಾನ ಪಡೆದಿದ್ದಾರೆ.
ವಿಯೆಟ್ನಾಂನ ‘ಫೂ ಕ್ಯುವೊಕ್’ ಜನರು ಅತಿ ಹೆಚ್ಚು ಹುಡುಕಾಡಿದ ಪ್ರಯಾಣದ ಸ್ಥಳವಾಗಿದೆ. ‘ಪಾಂಡಿಚೇರಿ’, ‘ಪುಕೆಟ್’ ಮತ್ತು ʼಫಿಲಿಪ್ಪೀನ್ಸ್’ ಅನ್ನೂ ಜನರು ಹುಡುಕಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅರಶಿನ ನೀರು ಟ್ರೆಂಡ್ (ಒಂದು ಗ್ಲಾಸ್ ನಲ್ಲಿ ಅರಿಶಿಣ ನೀರು ತೆಗೆದುಕೊಂಡು ಮೊಬೈಲ್ ಬೆಳಕು ಹರಿಸುವುದು) ಅತಿ ಹೆಚ್ಚು ಮೀಮ್ ಗಳನ್ನು ಕಂಡಿದೆ. ಅರ್ಜುನ್ ಕಪೂರ್ ಮತ್ತು ವಿಶಾಲ್ ಮೆಗಾ ಮಾರ್ಟ್ ಭದ್ರತಾ ಸಿಬ್ಬಂದಿ ಮೀಮ್ ಗಳೂ ಜನಪ್ರಿಯವಾಗಿದ್ದವು,
ಗಂಭೀರ ವಿಷಯಗಳನ್ನು ತೆಗೆದುಕೊಂಡರೆ ಭಾರತದ ‘ಆಪರೇಶನ್ ಸಿಂಧೂರ್’, ‘ಪಹಲ್ಗಾಮ್ ದಾಳಿ’ ಮತ್ತು “ಕದನ ವಿರಾಮ ಎಂದರೇನು” ಮೊದಲಾದ ವಿಷಯಗಳು 2025ರ ಟ್ರೆಂಡಿಂಗ್ ಪದಗಳಾಗಿದ್ದವು.