×
Ad

2020ರ ದಿಲ್ಲಿ ಗಲಭೆಗಳು | ನ.25ರಂದು ದಿಲ್ಲಿ ಹೈಕೋರ್ಟ್‌ನಲ್ಲಿ ಉಮರ್ ಖಾಲಿದ್, ಶಾರ್ಜೀಲ್ ಇಮಾಮ್ ಜಾಮೀನು ಅರ್ಜಿಗಳ ವಿಚಾರಣೆ

Update: 2024-10-07 21:13 IST

ಉಮರ್ ಖಾಲಿದ್ ,  ಶಾರ್ಜೀಲ್ ಇಮಾಮ್ | PC : PTI 

ಹೊಸದಿಲ್ಲಿ : ಇಲ್ಲಿ 2020ರಲ್ಲಿ ನಡೆದಿದ್ದ ಕೋಮು ಗಲಭೆಗಳ ಹಿಂದಿನ ವ್ಯಾಪಕ ಪಿತೂರಿ ಆರೋಪಕ್ಕೆ ಸಂಬಂಧಿಸಿದ ಯುಎಪಿಎ ಪ್ರಕರಣದಲ್ಲಿ ಮಾಜಿ ಜೆಎನ್‌ಯು ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ಮತ್ತು ವಿದ್ಯಾರ್ಥಿ ಕಾರ್ಯಕರ್ತ ಶಾರ್ಜೀಲ್ ಇಮಾಮ್ ಅವರ ಜಾಮೀನು ಅರ್ಜಿಗಳ ವಿಚಾರಣೆಯನ್ನು ದಿಲ್ಲಿ ಉಚ್ಚ ನ್ಯಾಯಾಲಯವು ನ.25ರಂದು ನಡೆಸಲಿದೆ.

ಇವರಿಬ್ಬರ ಅರ್ಜಿಗಳ ಜೊತೆ ಪ್ರಕರಣದ ಸಹ ಆರೋಪಿ ‘ಯುನೈಟೆಡ್ ಅಗೇನ್‌ಸ್ಟ್ ಹೇಟ್’ನ ಸ್ಥಾಪಕ ಖಾಲಿದ್ ಸೈಫಿ ಮತ್ತು ಇತರರ ಜಾಮೀನು ಅರ್ಜಿಗಳನ್ನೂ ಸೋಮವಾರ ನ್ಯಾಯಮೂರ್ತಿಗಳಾದ ನವೀನ ಚಾವ್ಲಾ ಮತ್ತು ಶೈಲೇಂದ್ರ ಅವರ ಪೀಠದೆದುರು ವಿಚಾರಣೆಗೆ ಪಟ್ಟಿ ಮಾಡಲಾಗಿತ್ತು.

ಆದರೆ ಸೋಮವಾರ ಪೀಠವು ಸೇರಲಿಲ್ಲ. ಪ್ರಕರಣಗಳು ಈ ಮೊದಲು ನ್ಯಾ.ಸುರೇಶ ಕುಮಾರ ಕೈಟ್ ನೇತೃತ್ವದ ಪೀಠದ ಮುಂದಿದ್ದವು. ಆದರೆ ಕೈಟ್ ಇತ್ತೀಚಿಗೆ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗಿ ವರ್ಗಾವಣೆಗೊಂಡಿದ್ದರು.

ಫೆಬ್ರವರಿ 2020ರಲ್ಲಿ ಸಿಎಎ ಮತ್ತು ಎನ್‌ಆರ್‌ಸಿ ವಿರುದ್ಧ ಪ್ರತಿಭಟನೆ ಸಂದರ್ಭದಲ್ಲಿ ನಡೆದಿದ್ದ ಗಲಭೆಗಳ ‘ರೂವಾರಿ’ಗಳಾಗಿದ್ದ ಆರೋಪದಲ್ಲಿ ಖಾಲಿದ್,ಇಮಾಮ್ ಮತ್ತು ಇತರ ಹಲವರ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ (ಯುಎಪಿಎ)ಯಡಿ ಪ್ರಕರಣ ದಾಖಲಾಗಿದೆ. ಈ ಗಲಭೆಗಳಲ್ಲಿ 53 ಜನರು ಮೃತಪಟ್ಟು, 700ಕ್ಕೂ ಅಧಿಕ ಜನರು ಗಾಯಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News