ಮುಂಬೈ ಜಾಹೀರಾತು ಫಲಕ ಬಿದ್ದ ಸ್ಥಳದಲ್ಲಿ ಕಾರಿನಲ್ಲಿ ದಂಪತಿಯ ಮೃತದೇಹ ಪತ್ತೆ
ಮುಂಬೈ: ಮುಂಬೈಗೆ ಅಪ್ಪಳಿಸಿದ ಭಾರಿ ಪ್ರಮಾಣದ ದೂಳಿನ ಬಿರುಗಾಳಿಯಿಂದಾಗಿ ಸೋಮವಾರ ಉರುಳಿ ಬಿದ್ದಿದ್ದ 250 ಟನ್ ತೂಕದ ಜಾಹೀರಾತು ಫಲಕದಡಿ ಸಿಲುಕಿ ಮೃತಪಟ್ಟಿರುವ 16 ಮಂದಿಯ ಪೈಕಿ ನಿವೃತ್ತ ವಾಯು ಸಂಚಾರ ನಿಯಂತ್ರಣ ವ್ಯವಸ್ಥಾಪಕ ಹಾಗೂ ಅವರ ಪತ್ನಿಯೂ ಸೇರಿದ್ದಾರೆ.
ಬುಧವಾರ ರಾತ್ರಿ ನಿವೃತ್ತ ವಾಯು ಸಂಚಾರ ನಿಯಂತ್ರಣ ವ್ಯವಸ್ಥಾಪಕ ಮನೋಜ್ ಚಾಂಸೋರಿಯ (60) ಹಾಗೂ ಅವರ ಪತ್ನಿ ಅನಿತಾ (59) ಮೃತದೇಹಗಳು ಪತ್ತೆಯಾಗಿವೆ. ಸೋಮವಾರ ಪೂರ್ವ ಮುಂಬೈನಲ್ಲಿನ ಪೆಟ್ರೋಲ್ ಪಂಪ್ ಒಂದರ ಮೇಲೆ ಉರುಳಿಬಿದ್ದಿದ್ದ 100 ಅಡಿ ಎತ್ತರದ ಜಾಹೀರಾತು ಫಲಕದಡಿ ಈ ದಂಪತಿಗಳು ಸಿಲುಕಿಕೊಂಡಿದ್ದರು.
ಪೆಟ್ರೋಲ್ ಪಂಪ್ ಮೇಲೆ ಉರುಳಿ ಬಿದ್ದ ಭಾರಿ ತೂಕದ ಜಾಹೀರಾತು ಫಲಕದ ಅವಶೇಷಗಳಡಿ ಸಿಲುಕಿಕೊಂಡಿದ್ದ 100 ಮಂದಿಯ ಪೈಕಿ ಅವರೂ ಸೇರಿದ್ದರು.
ಈ ವರ್ಷದ ಮಾರ್ಚ್ ತಿಂಗಳಲ್ಲಿ ಚಾನ್ಸೋರಿಯ ವಾಯು ಸಂಚಾರ ನಿಯಂತ್ರಣ ಪ್ರಧಾನ ವ್ಯವಸ್ಥಾಪಕ ಹುದ್ದೆಯಿಂದ ನಿವೃತ್ತರಾಗಿದ್ದರು ಹಾಗೂ ದಂಪತಿ ಜಬಲ್ಪುರ್ ಗೆ ಸ್ಥಳಾಂತರಗೊಂಡಿದ್ದರು.
ಚಾನ್ಸೋರಿಯರ ವೀಸಾ ಔಪಚಾರಿಕತೆಯನ್ನು ಪೂರೈಸಲು ದಂಪತಿಗಳು ಕಳೆದ ಕೆಲವು ದಿನಗಳಿಂದ ಮುಂಬೈನಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ತಮ್ಮ ಕೆಲಸವು ಪೂರ್ಣಗೊಂಡ ನಂತರ ಜಬಲ್ಪರ್ ಗೆ ಮರಳುತ್ತಿದ್ದ ದಂಪತಿ, ಬಿರುಗಾಳಿ ಅಪ್ಪಳಿಸಿದ ಸಂದರ್ಭದಲ್ಲಿ ಪೆಟ್ರೋಲ್ ತುಂಬಿಸಿಕೊಳ್ಳಲು ಘಾಟ್ಕೊಪುರ್ ಪೆಟ್ರೋಲ್ ಪಂಪ್ ಬಳಿ ಇದ್ದರು ಎಂದೂ ಅವರು ಹೇಳಿದ್ದಾರೆ.
ಅವರಿಗೆ ಕರೆ ಮಾಡಿದಾಗ ಯಾವುದೇ ಉತ್ತರ ಬಾರದಿದ್ದುರಿಂದ, ಅಮೆರಿಕಾದಲ್ಲಿ ವಾಸಿಸುತ್ತಿರುವ ಅವರ ಪುತ್ರ ನೆರವಿಗಾಗಿ ಮುಂಬೈನಲ್ಲಿರುವ ತಮ್ಮ ಸ್ನೇಹಿತರನ್ನು ಸಂಪರ್ಕಿಸಿದ್ದರು. ನಂತರ ಅವರ ಸ್ನೇಹಿತರು ನಾಪತ್ತೆ ದೂರನ್ನು ದಾಖಲಿಸಿದ್ದರು. ಆ ದೂರನ್ನು ಆಧರಿಸಿ, ಪೊಲೀಸರು ದಂಪತಿಗಳ ಮೊಬೈಲ್ ಫೋನ್ ನ ಕೊನೆಯ ತಾಣವನ್ನು ಪರಿಶೀಲಿಸಿದಾಗ, ಅದು ಘಟ್ಕೋಪುರ್ ಪೆಟ್ರೋಲ್ ಪಂಪ್ ಬಳಿ ಕಂಡು ಬಂದಿತ್ತು.
ಸುದ್ದಿ ತಿಳಿದ ದಂಪತಿಯ ಸ್ನೇಹಿತರು ಹಾಗೂ ಸಂಬಂಧಿಕರು, ಅವರನ್ನು ಅವಶೇಷಗಳಡಿಯಿಂದ ಸುರಕ್ಷಿತವಾಗಿ ಹೊರ ತೆಗೆಯಬಹುದು ಎಂಬ ಆಶಾವಾದದಿಂದ ಸ್ಥಳಕ್ಕೆ ಧಾವಿಸಿದ್ದರು. ಆದರೆ, ಕಾರಿನಲ್ಲೇ ದಂಪತಿಗಳು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.
ಇಲ್ಲಿಯವರೆಗೆ, ಈ ದುರ್ಘಟನೆಯಲ್ಲಿ 16 ಮಂದಿ ಮೃತಪಟ್ಟಿದ್ದು, 41 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.