×
Ad

Parliament Budget Session | ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಪದಚ್ಯುತಿಗೆ ಆಗ್ರಹಿಸಿ ನಿರ್ಣಯ ಮಂಡಿಸಿದ ಕಾಂಗ್ರೆಸ್

ಸಂವಿಧಾನ, ಸದನದ ಘನತೆ ಉಳಿಸಲು ಸ್ಪೀಕರ್ ವಿರುದ್ಧ ನಿರ್ಣಯ ಮಂಡನೆ : ಗೌರವ್‌ ಗೊಗೊಯ್

Update: 2026-03-10 16:11 IST

ಲೋಕಸಭಾ ಸ್ಪೀಕರ್ ಆಗಿರುವ ಓಂ ಬಿರ್ಲಾ (Photo: PTI)

ಹೊಸದಿಲ್ಲಿ : ಲೋಕಸಭಾ ಸ್ಪೀಕರ್ ಆಗಿರುವ ಓಂ ಬಿರ್ಲಾ ಅವರನ್ನು ಪದಚ್ಯುತಿಗೆ ಆಗ್ರಹಿಸಿ ಕಾಂಗ್ರೆಸ್ ಮಂಗಳವಾರ ನಿರ್ಣಯವನ್ನು ಮಂಡಿಸಿದೆ. ಅವರು ಪಕ್ಷಪಾತೀಯ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿರುವ ಕಾಂಗ್ರೆಸ್, ಅವರ ಕ್ರಮಗಳು ಸದನದ ಕಾರ್ಯನಿರ್ವಹಣೆಗೆ ಗಂಭೀರ ಅಪಾಯ ಉಂಟುಮಾಡುತ್ತವೆ ಎಂದು ಹೇಳಿದೆ.

ಈ ಕುರಿತು ನಿರ್ಣಯ ಮಂಡಿಸಿದ ಸಂಸದ ಮುಹಮ್ಮದ್‌ ಜಾವೇದ್, ಸ್ಪೀಕರ್ ಬಿರ್ಲಾ ಅವರು ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರಿಗೆ ಲೋಕಸಭೆಯಲ್ಲಿ ಮಾತನಾಡಲು ಅವಕಾಶ ನೀಡಲಿಲ್ಲ. ಮಹಿಳಾ ಸಂಸದೆಯರ ವಿರುದ್ಧ ಅನಾವಶ್ಯಕ ಆರೋಪಗಳನ್ನು ಮಾಡಿದ್ದಾರೆ ಹಾಗೂ ಸಾರ್ವಜನಿಕ ಹಿತಾಸಕ್ತಿಯ ವಿಷಯಗಳ ಬಗ್ಗೆ ಧ್ವನಿ ಎತ್ತಿದ ವಿರೋಧ ಪಕ್ಷದ ಶಾಸಕರನ್ನು ಅಧಿವೇಶನದ ಪೂರ್ಣ ಅವಧಿಗೆ ಅಮಾನತುಗೊಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ನಿರ್ಣಯಕ್ಕೆ 118 ವಿರೋಧ ಪಕ್ಷದ ಸದಸ್ಯರು ಸಹಿ ಹಾಕಿದ್ದಾರೆ ಎಂದು ʼದಿ ಇಂಡಿಯನ್ ಎಕ್ಸ್‌ಪ್ರೆಸ್ʼ ವರದಿ ಮಾಡಿದೆ.

ನಿರ್ಣಯದ ಮೇಲಿನ ಚರ್ಚೆಯ ಸಂದರ್ಭದಲ್ಲಿ ಎಐಎಂಐಎಂ ಸಂಸದ ಅಸದುದ್ದೀನ್ ಉವೈಸಿ, ಕಲಾಪದ ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಸಂಸದ ಜಗದಾಂಬಿಕಾ ಪಾಲ್ ಅವರಿಗೆ ಸ್ಪೀಕರ್‌ ಸ್ಥಾನದಲ್ಲಿ ಕುಳಿತುಕೊಳ್ಳಲು ಅಧಿಕಾರವಿಲ್ಲ ಎಂದು ವಾದಿಸಿದರು.

ಕೇಂದ್ರ ಸರಕಾರ ಸುಮಾರು ಏಳು ವರ್ಷಗಳ ಕಾಲ ಲೋಕಸಭೆಯಲ್ಲಿ ಉಪಸಭಾಪತಿಯನ್ನು ಏಕೆ ನೇಮಿಸಲಿಲ್ಲ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಇದೇ ವೇಳೆ ಪ್ರಶ್ನಿಸಿದರು.

ಅವಿಶ್ವಾಸ ಪ್ರಸ್ತಾವನೆಗೆ ಸಂಬಂಧಿಸಿದ ಚರ್ಚೆಯ ವೇಳೆ ಸದನದ ಅಧ್ಯಕ್ಷತೆ ವಹಿಸಲು ಜಗದಾಂಬಿಕ ಪಾಲ್ ಅವರನ್ನು ಹೇಗೆ ಆಯ್ಕೆ ಮಾಡಲಾಯಿತು ಎಂದು ಪ್ರಶ್ನಿಸಿದ ಗೌರವ್‌ ಗೊಗೊಯ್, ಸ್ಪೀಕರ್ ಮೊದಲು ಪ್ಯಾನೆಲ್ ಅನ್ನು ರಚಿಸಬೇಕು. ಆ ಪ್ಯಾನೆಲ್ ಸದಸ್ಯರೇ ಅವಿಶ್ವಾಸ ನಿರ್ಣಯದ ಕುರಿತು ನಡೆಯುವ ಚರ್ಚೆಯ ವೇಳೆ ಸ್ಪೀಕರ್ ಕುರ್ಚಿಯಲ್ಲಿ ಕುಳಿತು ಸಭೆ ನಡೆಸುವವರು ಯಾರು ಎಂಬುದನ್ನು ನಿರ್ಧರಿಸಬೇಕು. ಸಂವಿಧಾನ ಮತ್ತು ಸದನದ ಘನತೆ ಉಳಿಸಲು ಲೋಕಸಭಾ ಸ್ಪೀಕರ್ ವಿರುದ್ಧ ನಿರ್ಣಯ ಮಂಡಿಸಲಾಗಿದೆ ಎಂದು ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News