2030ರ ವೇಳೆಗೆ ಭಾರತದಲ್ಲಿ 35 ಶತಕೋಟಿ ಡಾಲರ್ ಹೂಡಿಕೆ ಮಾಡಲಿರುವ Amazon
Photo Credit : PTI
ಹೊಸದಿಲ್ಲಿ,ಡಿ.10: ಅಮೆಜಾನ್ 2030ರ ವೇಳೆಗೆ ಭಾರತದಲ್ಲಿ ತನ್ನ ಎಲ್ಲ ವ್ಯವಹಾರಗಳಲ್ಲಿ 35 ಶತಕೋಟಿ ಡಾ.ಗೂ(ಸುಮಾರು 3.15 ಲ.ಕೋ.ರೂ.) ಹೆಚ್ಚಿನ ಹೂಡಿಕೆಯನ್ನು ಮಾಡುವ ತನ್ನ ಯೋಜನೆಯನ್ನು ಬುಧವಾರ ಪ್ರಕಟಿಸಿದೆ. ತನ್ಮೂಲಕ ದೇಶದ ಡಿಜಿಟಲ್ ಆರ್ಥಿಕತೆ,ಕೃತಕ ಬುದ್ಧಿಮತ್ತೆ (ಎಐ) ನೇತೃತ್ವದ ರೂಪಾಂತರ ಮತ್ತು ಉದ್ಯೋಗ ಸೃಷ್ಟಿಗೆ ತನ್ನ ದೀರ್ಘಕಾಲೀನ ಬದ್ಧತೆಯನ್ನು ಹೆಚ್ಚಿಸುವುದಾಗಿ ಅದು ತಿಳಿಸಿದೆ.
ಅಮೆಜಾನ್ ಈಗಾಗಲೇ ಕಳೆದ 15 ವರ್ಷಗಳಲ್ಲಿ ಭಾರತದಲ್ಲಿ ಸುಮಾರು 40 ಶತಕೋಟಿ ಡಾ.ಗಳನ್ನು(ಸುಮಾರು 3.60 ಲ.ಕೋ.ರೂ.) ಹೂಡಿಕೆ ಮಾಡಿದೆ.
ದಿಲ್ಲಿಯಲ್ಲಿ ಬುಧವಾರ ನಡೆದ ಆರನೇ ಅಮೆಜಾನ್ ಸಂಭವ್ ಶೃಂಗಸಭೆಯಲ್ಲಿ ಈ ಘೋಷಣೆಯನ್ನು ಮಾಡಲಾಗಿದ್ದು,ಇದೇ ವೇಳೆ ಸಲಹಾ ಸಂಸ್ಥೆ ಕೀಸ್ಟೋನ್ ಸಟ್ಯೆಾಟಜಿಯ ಆರ್ಥಿಕ ಪರಿಣಾಮಗಳ ವರದಿಯನ್ನೂ ಬಿಡುಗಡೆಗೊಳಿಸಲಾಯಿತು.
ಮೂಲಸೌಕರ್ಯ ಅಭಿವೃದ್ಧಿ ಮತ್ತು ಉದ್ಯೋಗಿ ಪರಿಹಾರ ಸೇರಿದಂತೆ ಅಮೆಜಾನ್‌ನ ಸಂಚಿತ ಹೂಡಿಕೆಗಳು ಅದನ್ನು ಭಾರತದ ಅತಿ ದೊಡ್ಡ ವಿದೇಶಿ ಹೂಡಿಕೆದಾರ,ಇ-ವಾಣಿಜ್ಯ ರಫ್ತುಗಳ ಅತ್ಯಂತ ದೊಡ್ಡ ಪ್ರೋತ್ಸಾಹಕನನ್ನಾಗಿ ಮಾಡಿದ್ದು,ದೇಶದ ಉನ್ನತ ಉದ್ಯೋಗ ಸೃಷ್ಟಿಕರ್ತರಲ್ಲಿ ಒಂದಾಗಿಸಿದೆ ಎಂದು ವರದಿಯು ಹೇಳಿದೆ.
ತನ್ನ ಭವಿಷ್ಯದ ಹೂಡಿಕೆಯು ಭಾರತದ ವಿಶಾಲ ಡಿಜಿಟಲ್ ಮತ್ತು ಆರ್ಥಿಕ ಆದ್ಯತೆಗಳಿಗೆ ಅನುಗುಣವಾಗಿ ಎಐ-ಚಾಲಿತ ಡಿಜಿಟಲೀಕರಣ,ರಫ್ತು ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿಯನ್ನು ಕೇಂದ್ರೀಕರಿಸಲಿವೆ ಎಂದು ಕಂಪನಿಯು ಹೇಳಿದೆ.
ಪೂರೈಕೆ ಕೇಂದ್ರಗಳು,ಸಾಗಾಟ ಜಾಲ,ಡೇಟಾ ಸೆಂಟರ್‌ಗಳು, ಡಿಜಿಟಲ್ ಪಾವತಿ ಮೂಲಸೌಕರ್ಯ ಮತ್ತು ತಂತ್ರಜ್ಞಾನ ವೇದಿಕೆಗಳು ಸೇರಿದಂತೆ ಭಾರತದಾದ್ಯಂತ ಭೌತಿಕ ಮತ್ತು ಡಿಜಿಟಲ್ ಮೂಲಸೌಕರ್ಯ ನಿರ್ಮಾಣದಲ್ಲಿ ತಾನು ದೊಡ್ಡ ಮೊತ್ತದ ಹೂಡಿಕೆಯನ್ನು ಮಾಡಿರುವುದಾಗಿ ಅಮೆಜಾನ್ ತಿಳಿಸಿದೆ.
ಕೀಸ್ಟೋನ್ ವರದಿಯ ಪ್ರಕಾರ ಅಮೆಜಾನ್ ಈವರೆಗೆ 1.2 ಕೋಟಿಗೂ ಹೆಚ್ಚಿನ ಸಣ್ಣ ಉದ್ಯಮಗಳನ್ನು ಡಿಜಿಟಲೀಕರಿಸಿದೆ,20 ಬಿಲಿಯನ್ ಡಾ.ಗಳ (ಸುಮಾರು 1.80 ಲ.ಕೋ.ರೂ.) ಸಂಚಿತ ಇ-ಕಾಮರ್ಸ್ ರಫ್ತುಗಳನ್ನು ಸಾಧ್ಯವಾಗಿಸಿದೆ ಮತ್ತು ಸುಮಾರು 28 ಲಕ್ಷ ನೇರ,ಪರೋಕ್ಷ ಉದ್ಯೋಗಗಳನ್ನು ಬೆಂಬಲಿಸಿದೆ.
ಈ ಉದ್ಯೋಗಗಳು ತಂತ್ರಜ್ಞಾನ, ಕಾರ್ಯಾಚರಣೆಗಳು, ಲಾಜಿಸ್ಟಿಕ್ಸ್ ಮತ್ತು ಗ್ರಾಹಕ ಬೆಂಬಲ ಕ್ಷೇತ್ರಗಳಲ್ಲಿ ಹರಡಿಕೊಂಡಿದ್ದು,ಸ್ಪರ್ಧಾತ್ಮಕ ವೇತನ,ಆರೋಗ್ಯ ರಕ್ಷಣೆ ಮತ್ತು ಔಪಚಾರಿಕ ತರಬೇತಿಯಂತಹ ಪ್ರಯೋಜನಗಳನ್ನು ಒಳಗೊಂಡಿವೆ.
2030ರ ವೇಳೆಗೆ ಭಾರತದಲ್ಲಿ ಹೆಚ್ಚುವರಿಯಾಗಿ 10 ಲಕ್ಷ ನೇರ ಮತ್ತು ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸಲು ತಾನು ಯೋಜಿಸಿರುವುದಾಗಿ ಅಮೆಜಾನ್ ತಿಳಿಸಿದೆ.