×
Ad

ISI ಪರವಾಗಿ ಬೇಹುಗಾರಿಕೆ ಆರೋಪ: ನೌಕಾಪಡೆಯ ಲ್ಯಾನ್ಸ್ ನಾಯಕ್ ಆದರ್ಶ್ ಕುಮಾರ್ ಬಂಧನ

Update: 2026-03-11 07:37 IST

PC: x.com/IndiaToday

ಲಕ್ನೋ, ಮಾ. 11: ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಪರವಾಗಿ ಬೇಹುಗಾರಿಕೆ ನಡೆಸಿ ಭಾರತೀಯ ನೌಕಾಪಡೆಯ ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಂಡ ಆರೋಪದ ಮೇಲೆ ಭಾರತೀಯ ನೌಕಾಪಡೆಯಲ್ಲಿ ಸೇವೆ ಸಲ್ಲಿಸುತ್ತಿರುವ ಲ್ಯಾನ್ಸ್ ನಾಯಕ್ ಆದರ್ಶ್ ಕುಮಾರ್ ನನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ನೌಕಾಪಡೆ ಸಿಬ್ಬಂದಿಗೆ ಸಂಬಂಧಿಸಿದ ಶಂಕಿತ ಬೇಹುಗಾರಿಕೆ ಚಟುವಟಿಕೆಗಳ ಕುರಿತು ಗುಪ್ತಚರ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಬಂಧನ ಕ್ರಮ ಕೈಗೊಂಡಿದೆ.

ಬಂಧಿತ ಆದರ್ಶ್ ಕುಮಾರ್ (ಲಕ್ಕಿ) ಉತ್ತರ ಪ್ರದೇಶದ ಆಗ್ರಾ ಜಿಲ್ಲೆಯ ಕಗರೋಲ್ ನಿವಾಸಿ. ಆತ ಕೇರಳದ ಕೊಚ್ಚಿಯಲ್ಲಿರುವ ಭಾರತೀಯ ನೌಕಾಪಡೆಯ ದಕ್ಷಿಣ ಕಮಾಂಡ್ ನೆಲೆಯಲ್ಲಿ ನಿಯೋಜಿಸಲ್ಪಟ್ಟಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತನಿಖಾಧಿಕಾರಿಗಳ ಪ್ರಕಾರ, ಆದರ್ಶ್ ಕುಮಾರ್ ಪಾಕಿಸ್ತಾನದ ಇಂಟರ್–ಸರ್ವೀಸಸ್ ಇಂಟೆಲಿಜೆನ್ಸ್ (ISI) ಗೆ ಸಂಪರ್ಕ ಹೊಂದಿರುವ ಹ್ಯಾಂಡ್ಲರ್‌ ಗಳಿಗೆ ನೌಕಾಪಡೆಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಯನ್ನು ರವಾನಿಸುತ್ತಿದ್ದನೆಂದು ಆರೋಪಿಸಲಾಗಿದೆ.

ಡಿಜಿಟಲ್ ಸಂವಹನದ ಮೂಲಕ ಆತ ಪ್ರಮುಖ ನೌಕಾ ಮಾಹಿತಿಯ ಛಾಯಾಚಿತ್ರಗಳು ಮತ್ತು ವಿವರಗಳನ್ನು ಹಂಚಿಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದಲ್ಲದೆ, ಆತ ಸಂಪರ್ಕದಲ್ಲಿದ್ದ ಹ್ಯಾಂಡ್ಲರ್‌ ಗೆ ತನ್ನ ವೈಯಕ್ತಿಕ ಬ್ಯಾಂಕ್ ಖಾತೆಯಿಂದ ಹಣವನ್ನು ವರ್ಗಾಯಿಸಿದ್ದಾನೆ ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ.

ನೌಕಾಪಡೆ ಸಿಬ್ಬಂದಿಯನ್ನು ಒಳಗೊಂಡ ಬೇಹುಗಾರಿಕೆ ಚಟುವಟಿಕೆಗಳ ಬಗ್ಗೆ ನಿರ್ದಿಷ್ಟ ಮಾಹಿತಿ ದೊರೆತ ನಂತರ ಉತ್ತರ ಪ್ರದೇಶ ಎಟಿಎಸ್ ಪರಿಶೀಲನೆ ನಡೆಸಿ ಕ್ರಮ ಕೈಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಾಹಿತಿಯ ಪರಿಶೀಲನೆಯ ಬಳಿಕ ಸಂಸ್ಥೆಯು ಆದರ್ಶ್ ಕುಮಾರ್ ನನ್ನು ಬಂಧಿಸಿ, ಆತನ ಸಂಪರ್ಕಗಳು ಹಾಗೂ ಹಂಚಿಕೊಳ್ಳಲ್ಪಟ್ಟಿರಬಹುದಾದ ಮಾಹಿತಿಯ ಕುರಿತು ವಿಚಾರಣೆ ಆರಂಭಿಸಿದೆ.

ಆಪಾದಿತ ಬೇಹುಗಾರಿಕೆ ಚಟುವಟಿಕೆಯ ಅವಧಿಯಲ್ಲಿ ಆದರ್ಶ್ ಕುಮಾರ್ ಕೊಚ್ಚಿಯಲ್ಲಿರುವ ಭಾರತೀಯ ನೌಕಾಪಡೆಯ ದಕ್ಷಿಣ ಕಮಾಂಡ್ ನೆಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಎಂದು ತಿಳಿದುಬಂದಿದೆ.

ಬೇರೆ ಯಾರಾದರೂ ಈ ಬೇಹುಗಾರಿಕೆ ಜಾಲದಲ್ಲಿ ಭಾಗಿಯಾಗಿರಬಹುದೇ ಎಂಬುದನ್ನು ಪತ್ತೆಹಚ್ಚಲು ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆದರ್ಶ್ ಕುಮಾರ್ ನ ಸಂರ್ಕು, ಹಣಕಾಸಿನ ವಹಿವಾಟುಗಳು ಹಾಗೂ ಪಾಕಿಸ್ತಾನದ ಗುಪ್ತಚರ ವ್ಯವಸ್ಥೆಯೊಂದಿಗೆ ಸಂಪರ್ಕ ಹೊಂದಿರುವ ಶಂಕಿತ ಹ್ಯಾಂಡ್ಲರ್‌ ಗಳೊಂದಿಗಿನ ಸಂಪರ್ಕಗಳನ್ನು ಭದ್ರತಾ ಸಂಸ್ಥೆಗಳು ಪರಿಶೀಲಿಸುತ್ತಿವೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News