×
Ad

ಅನ್ನಾ ವಿವಿ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ: ಆರೋಪಿಯು ಉದಯನಿಧಿ ಜೊತೆಗಿರುವ ಚಿತ್ರ ಬಿಡುಗಡೆಮಾಡಿದ ಬಿಜೆಪಿ

Update: 2024-12-26 20:02 IST

ಉದಯನಿಧಿ ಸ್ಟಾಲಿನ್ | PC : NDTV 

ಚೆನ್ನೈ: ಚೆನ್ನೈಯ ಅನ್ನಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿಯ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದ ಬಂಧಿತ ಆರೋಪಿಯು ‘‘ಹಲವು ಅಪರಾಧ ಪ್ರಕರಣಗಳ ಆರೋಪಿ ಮತ್ತು ಡಿಎಂಕೆ ಪಕ್ಷದ ಕಾರ್ಯಕರ್ತ’’ ಎಂದು ಬಿಜೆಪಿ ಆರೋಪಿಸಿದೆ.

ಅನ್ನಾ ವಿಶ್ವವಿದ್ಯಾನಿಲಯ ಆವರಣದ ಸಮೀಪ ಬಿರಿಯಾನಿ ಸ್ಟಾಲ್ ನಡೆಸುತ್ತಿದ್ದ 37 ವರ್ಷದ ಗುಣಶೇಖರನ್‌ನನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ.

ಆರೋಪಿಯು ವಿಶ್ವವಿದ್ಯಾನಿಲಯ ಆವರಣವನ್ನು ಪ್ರವೇಶಿಸಿ, ದ್ವಿತೀಯ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿನಿಯ ಸ್ನೇಹಿತನನ್ನು ಥಳಿಸಿ, ವಿದ್ಯಾರ್ಥಿನಿಯನ್ನು ಪೊದೆಯೊಂದಕ್ಕೆ ಎಳೆದೊಯ್ದು ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.

ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಮತ್ತು ಇತರ ಡಿಎಂಕೆ ನಾಯಕರು ಆರೋಪಿಯೊಂದಿಗೆ ಇರುವುದನ್ನು ತೋರಿಸುವ ಚಿತ್ರವೊಂದನ್ನು ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ.

‘‘ಹಿಂದೆ ನಡೆದ ಇಂಥ ಹಲವಾರು ಪ್ರಕರಣಗಳಿಂದ ಸ್ಪಷ್ಟ ಮಾದರಿಯೊಂದು ಹೊರಹೊಮ್ಮಿದೆ’’ ಎಂದು ಅಣ್ಣಾಮಲೈ ತನ್ನ ಸಂದೇಶದಲ್ಲಿ ಬರೆದಿದ್ದಾರೆ. ಓರ್ವ ಕ್ರಿಮಿನಲ್ ಸ್ಥಳೀಯ ಡಿಎಮ್‌ಕೆ ನಾಯಕರೊಂದಿಗೆ ನಿಕಟ ನಂಟು ಬೆಳೆಸುತ್ತಾನೆ ಮತ್ತು ಬಳಿಕ ಪಕ್ಷದ ಸದಸ್ಯನಾಗುತ್ತಾನೆ’’ ಎಂದು ಅವರು ಆರೋಪಿಸಿದ್ದಾರೆ.

ಪ್ರತಿಭಟನೆ:

ನೊಂದ ವಿದ್ಯಾರ್ಥಿನಿಗೆ ನ್ಯಾಯ ಸಿಗಬೇಕು ಮತ್ತು ವಿಶ್ವವಿದ್ಯಾನಿಲಯಗಳ ಆವರಣದಲ್ಲಿ ವಿದ್ಯಾರ್ಥಿಗಳ ಸುರಕ್ಷತೆಯನ್ನು ಖಾತರಿಪಡಿಸಲು ಸಮರ್ಥ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿ ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (ಎಸ್‌ಎಫ್‌ಐ), ಅಖಿಲ ಭಾರತ ಪ್ರಜಾಸತ್ತಾತ್ಮಕ ಮಹಿಳಾ ಅಸೋಸಿಯೇಶನ್‌ನ ಸದಸ್ಯರು ಸೇರಿದಂತೆ ನೂರಾರು ಕಾಲೇಜು ವಿದ್ಯಾರ್ಥಿಗಳು ಶುಕ್ರವಾರ ವಿಶ್ವವಿದ್ಯಾಲಯದ ಎದುರು ಧರಣಿ ನಡೆಸಿದರು.

ಆರೋಪ ನಿರಾಕರಿಸಿದ ಡಿಎಂಕೆ:

ಆರೋಪಿಯು ಪಕ್ಷದ ನಾಯಕನೊಬ್ಬನ ಜೊತೆಗಿರುವ ಚಿತ್ರದ ಆಧಾರದಲ್ಲಿ, ಆ ಪಕ್ಷವನ್ನು ಅಪರಾಧಿ ಎಂದು ಘೋಷಿಸುವುದು ಸಾಧ್ಯವಿಲ್ಲ ಎಂದು ಡಿಎಂಕೆ ವಕ್ತಾರ ಎ. ಸರವಣನ್ ‘ಎನ್‌ಡಿಟಿವಿ’ಗೆ ಹೇಳಿದ್ದಾರೆ.

‘‘ಆರೋಪಿಯನ್ನು ಬಂಧಿಸಲಾಗಿದೆ. ಅವನು ಡಿಎಂಕೆ ಸರಕಾರದ ಕಾನೂನಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಯಾರೇ ತಪ್ಪು ಮಾಡಿದರು, ತಮಿಳುನಾಡು ಪೊಲೀಸರು ಕ್ರಮ ತೆಗೆದುಕೊಳ್ಳುತ್ತಾರೆ’’ ಎಂದು ಬಳಿಕ ‘ಎಕ್ಸ್’ನಲ್ಲಿ ಹಾಕಿದ ಸಂದೇಶದಲ್ಲಿ ಸರವಣನ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News