ಆರ್ಚರಿ ವಿಶ್ವಕಪ್: ಮೂರು ಚಿನ್ನ ಬಾಚಿಕೊಂಡ ಭಾರತ

Update: 2024-04-27 14:56 GMT

PC: X \ @airnewsalerts

ಶಾಂಘೈ : ಈಗ ನಡೆಯುತ್ತಿರುವ ಆರ್ಚರಿ ವಿಶ್ವಕಪ್ ಒಂದನೇ ಹಂತದಲ್ಲಿ ಭಾರತದ ಪ್ರಾಬಲ್ಯದ ನೇತೃತ್ವವಹಿಸಿದ ಏಶ್ಯನ್ ಗೇಮ್ಸ್ ಚಾಂಪಿಯನ್ ಜ್ಯೋತಿ ಸುರೇಖಾ ಭಾರತವು ಹ್ಯಾಟ್ರಿಕ್ ಚಿನ್ನದ ಪದಕಗಳನ್ನು ಜಯಿಸುವಲ್ಲಿ ನೆರವಾಗಿದ್ದಾರೆ.

ವಿಶ್ವದ ನಂ.3ನೇ ಆಟಗಾರ್ತಿ ಜ್ಯೋತಿ ಅಗ್ರ ಶ್ರೇಯಾಂಕದ ಮೆಕ್ಸಿಕೊದ ಆ್ಯಂಡ್ರಿಯ ಬೆಸೆರಾರನ್ನು ಶೂಟ್‌ಆಫ್‌ನಲ್ಲಿ 146-146 ಅಂತರದಿಂದ ಮಣಿಸಿ ಅಪರೂಪದ ಸಾಧನೆ ಮಾಡಿದರು.

ವಿಜಯವಾಡದ 27ರ ಹರೆಯದ ಬಿಲ್ಗಾರ್ತಿ ಸುರೇಖಾ ಕಳೆದ ವರ್ಷದ ಹಾಂಗ್‌ಝೌ ಏಶ್ಯನ್ ಗೇಮ್ಸ್‌ನಲ್ಲಿ ವೈಯಕ್ತಿಕ, ಮಹಿಳೆಯರ ಟೀಮ್ ಹಾಗೂ ಮಿಕ್ಸೆಡ್ ಟೀಮ್ ಇವೆಂಟ್‌ಗಳಲ್ಲಿ ಚಿನ್ನದ ಪದಕ ಜಯಿಸಿ ಹ್ಯಾಟ್ರಿಕ್ ದಾಖಲಿಸಿದ್ದರು.

ಶನಿವಾರ ಬೆಳಗ್ಗಿನ ಅವಧಿಯಲ್ಲಿ ಭಾರತವು ಕಾಂಪೌಂಡ್ ವಿಭಾಗದಲ್ಲಿ ಟೀಮ್ ಇವೆಂಟ್‌ಗಳಲ್ಲಿ ಕ್ಲೀನ್‌ಸ್ವೀಪ್ ಸಾಧಿಸಿದೆ. ಪುರುಷರ ಟೀಮ್, ಮಹಿಳೆಯರ ಟೀಮ್ ಹಾಗೂ ಮಿಕ್ಸೆಡ್ ಟೀಮ್ ಸ್ಪರ್ಧೆಗಳಲ್ಲಿ ಜಯ ಸಾಧಿಸಿದ್ದು, ಎರಡು ಸ್ಪರ್ಧೆಗಳಲ್ಲಿ ಜ್ಯೋತಿ ಭಾಗವಹಿಸಿದ್ದರು.

ಮಹಿಳೆಯರ ಕಾಂಪೌಂಡ್ ಟೀಮ್ ಸ್ಪರ್ಧೆಯಲ್ಲಿ ಜ್ಯೋತಿ, ಅದಿತಿ ಸ್ವಾಮಿ ಹಾಗೂ ಪರಿಣಿತಿ ಕೌರ್ ಇಟಲಿ ತಂಡವನ್ನು 236-225 ಅಂತರದಿಂದ ಮಣಿಸಿ ಚಿನ್ನದ ಪದಕದ ಖಾತೆ ತೆರೆದಿದ್ದಾರೆ.

ಪುರುಷರ ಟೀಮ್ ಸ್ಪರ್ಧೆಯಲ್ಲಿ ಅಭಿಷೇಕ್ ವರ್ಮಾ, ಪ್ರಿಯಾಂಶ್ ಹಾಗೂ ಪ್ರಥಮೇಶ್ ನೆದರ್‌ಲ್ಯಾಂಡ್ಸ್‌ನ ಮೈಕ್ ಸ್ಕ್ಲೊಸರ್, ಸಿಲ್ ಪ್ಯಾಟರ್ ಹಾಗೂ ಸ್ಟೆಫ್ ವಿಲಿಯಮ್ಸ್‌ರನ್ನು 238-231 ಅಂತರದಿಂದ ಮಣಿಸಿದರು.

2ನೇ ಶ್ರೇಯಾಂಕದ ಜ್ಯೋತಿ ಹಾಗೂ ಅಭಿಷೇಕ್ ಒಳಗೊಂಡ ಮಿಕ್ಸೆಡ್ ಟೀಮ್ ಎಸ್ಟೋನಿಯದ ಎದುರಾಳಿ ಲಿಸೆಲ್ ಜಾಟ್ಮಾ ಹಾಗೂ ರಾಬಿನ್ ಜಾಟ್ಮಾರನ್ನು 158-157 ಅಂತರದಿಂದ ರೋಚಕವಾಗಿ ಮಣಿಸಿ ಕ್ಲೀನ್‌ಸ್ವೀಪ್ ಸಾಧಿಸಿದರು.

ರಿಕರ್ವ್ ವಿಭಾಗದಲ್ಲಿ ಪದಕ ಸುತ್ತು ರವಿವಾರ ನಡೆಯಲಿದ್ದು, ಭಾರತವು ಎರಡು ಚಿನ್ನದ ಪದಕದ ಮೇಲೆ ಕಣ್ಣಿಟ್ಟಿದೆ. ಭಾರತೀಯ ಪುರುಷರ ತಂಡವು ಚಿನ್ನದ ಪದಕ ಸುತ್ತಿನಲ್ಲಿ ಒಲಿಂಪಿಕ್ಸ್ ಚಾಂಪಿಯನ್ ದಕ್ಷಿಣ ಕೊರಿಯಾವನ್ನು ಎದುರಿಸಲಿದೆ.

ವೈಯಕ್ತಿಕ ವಿಭಾಗದಲ್ಲಿ ಸೆಣಸಾಡಲಿರುವ ದೀಪಿಕಾ ಕುಮಾರಿ ಮಹಿಳೆಯರ ರಿಕರ್ವ್ ವಿಭಾಗದ ಸೆಮಿ ಫೈನಲ್‌ನಲ್ಲಿ ದಕ್ಷಿಣ ಕೊರಿಯಾದ ಎದುರಾಳಿಯನ್ನು ಎದುರಿಸಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News