ಆಂಧ್ರಪ್ರದೇಶ| ಕಣಿವೆಗೆ ಉರುಳಿಬಿದ್ದ ಬಸ್: 9 ಮಂದಿ ಮೃತ್ಯು, 22 ಜನರಿಗೆ ಗಾಯ
ಹೊಸದಿಲ್ಲಿ: ಆಂಧ್ರಪ್ರದೇಶದಲ್ಲಿ ಬಸ್‌ವೊಂದು ಕಣಿವೆಗೆ ಉರುಳಿಬಿದ್ದ ಪರಿಣಾಮ ಕನಿಷ್ಠ 9 ಮಂದಿ ಮೃತಪಟ್ಟಿದ್ದು, 22 ಜನರು ಗಾಯಗೊಂಡಿದ್ದಾರೆ.
ಚಿತ್ತೂರಿನಿಂದ ತೆಲಂಗಾಣಕ್ಕೆ ತೆರಳುತ್ತಿದ್ದ ಬಸ್ ಮೋತುಗುಡೆಮ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಸ್ತೆಗೆ ಉರುಳಿಬಿದ್ದಿದೆ. ಬಸ್‌ನಲ್ಲಿ ಚಾಲಕ ಮತ್ತು ಕ್ಲೀನರ್ ಸೇರಿದಂತೆ 37 ಜನರು ಪ್ರಯಾಣಿಸುತ್ತಿದ್ದರು. ದಟ್ಟ ಮಂಜು ಆವರಿಸಿದ್ದರಿಂದ ಚಾಲಕನಿಗೆ ತಿರುವು ಕಾಣಿಸದೆ ಅಪಘಾತ ಸಂಭವಿಸಿರಬಹುದು ಎಂದು ಹೇಳಲಾಗಿದೆ.
ಈ ಕುರಿತು ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಬರ್ದಾರ್ ಮಾಹಿತಿ ನೀಡಿದ್ದು, ಚಿಂತೂರು-ಮರೇಡುಮಿಲ್ಲಿ ಘಾಟ್ ರಸ್ತೆಯ ದುರ್ಗಾ ದೇವಸ್ಥಾನದ ಬಳಿ ಬೆಳಿಗ್ಗೆ 4:30ರ ಸುಮಾರಿಗೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಕನಿಷ್ಠ 9 ಜನರು ಮೃತಪಟ್ಟಿದ್ದಾರೆ ಮತ್ತು 22 ಜನರು ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಿದ್ದಾರೆ.
ಪ್ರಯಾಣಿಕರು ಚಿತ್ತೂರಿನಿಂದ ತೆಲಂಗಾಣದ ಭದ್ರಾಚಲಂನಲ್ಲಿರುವ ಶ್ರೀ ರಾಮ ದೇವಸ್ಥಾನಕ್ಕೆ ಹೋಗುತ್ತಿದ್ದರು ಎಂದು ಅಮಿತ್ ಬರ್ದಾರ್ ಹೇಳಿದ್ದಾರೆ.