Uttar Pradesh | ಯೂಟ್ಯೂಬ್ ನೋಡಿ ‘ಶಸ್ತ್ರಚಿಕಿತ್ಸೆ’ ನಡೆಸಿದ ನಕಲಿ ವೈದ್ಯ; ಮಹಿಳೆ ಮೃತ್ಯು
ಬಾರಾಬಂಕಿ (ಉ.ಪ್ರ.), ಡಿ.12: ಯೂಟ್ಯೂಬ್ ವೀಡಿಯೊಗಳನ್ನು ನೋಡಿ ಶಸ್ತ್ರಚಿಕಿತ್ಸೆ ನಡೆಸಿದ ನಕಲಿ ವೈದ್ಯನ ನಿರ್ಲಕ್ಷ್ಯದಿಂದ 25 ವರ್ಷದ ಮಹಿಳೆಯೊಬ್ಬಳು ಪ್ರಾಣ ಕಳೆದುಕೊಂಡಿರುವ ಘಟನೆ ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ನಡೆದಿದೆ.
ಮೃತರನ್ನು ಮುನಿಶಾರ ಎಂದು ಗುರುತಿಸಲಾಗಿದೆ. ತೀವ್ರ ಹೊಟ್ಟೆನೋವಿನಿಂದ ಬಳಲುತ್ತಿದ್ದ ಮುನಿಶಾರ, ದಸ್ರಾಪುರದಲ್ಲಿರುವ ಜ್ಞಾನಪ್ರಕಾಶ್ ಮಿಶ್ರಾ (48) ನಡೆಸುತ್ತಿದ್ದ ಕ್ಲಿನಿಕ್ ಗೆ ಭೇಟಿ ನೀಡಿದಾಗ, “ಪಿತ್ತಕೋಶದಲ್ಲಿ ಕಲ್ಲುಗಳು ಹೆಚ್ಚಿವೆ, ತಕ್ಷಣ ಶಸ್ತ್ರಚಿಕಿತ್ಸೆ ಅಗತ್ಯ” ಎಂದು ಆತ ವೈದ್ಯನಂತೆ ಹೇಳಿದ್ದಾನೆಂದು ಕುಟುಂಬದವರು ದೂರು ನೀಡಿದ್ದಾರೆ.
ಮುನಿಶಾರ ಪತಿ ತೇಜ್ ಬಹದ್ದೂರ್ ರಾವತ್ ಅವರ ದೂರಿನ ಪ್ರಕಾರ, ಮಿಶ್ರಾ ಮೊದಲು “ಇನ್ನೊಬ್ಬ ವೈದ್ಯರು ಶಸ್ತ್ರಚಿಕಿತ್ಸೆಗೆ ಬರುತ್ತಾರೆ” ಎಂದು ಹೇಳಿದ್ದರೂ, ಕೊನೆಗೆ ಯಾರೂ ಬರಲಿಲ್ಲ. ನಂತರ “ನಾನು ಯೂಟ್ಯೂಬ್ ನೋಡಿದರೆ ಸಾಕು, ವಿಧಾನ ಗೊತ್ತಿದೆ” ಎಂದು ಹೇಳಿ ಸ್ವತಃ ಶಸ್ತ್ರಚಿಕಿತ್ಸೆಗೆ ಮುಂದಾಗಿದ್ದಾನೆಂದು ಆರೋಪಿಸಲಾಗಿದೆ.
ಪ್ರಕ್ರಿಯೆ ತಪ್ಪಾಗಿದ್ದರಿಂದ ಮರುದಿನ ಮುನಿಶಾರ ಸ್ಥಿತಿ ಗಂಭೀರಗೊಂಡಿದ್ದು, ಪತಿ ಕ್ಲಿನಿಕ್ ಗೆ ತಲುಪುವಷ್ಟರಲ್ಲಿ ಆಕೆ ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ.
ಘಟನೆಯ ಬಳಿಕ ವೈದ್ಯಕೀಯ ತಂಡ ನಡೆಸಿದ ಪರಿಶೀಲನೆಯಲ್ಲಿ ಮಿಶ್ರಾಗೆ ಯಾವುದೇ ಮಾನ್ಯ ವೈದ್ಯಕೀಯ ಅರ್ಹತೆ ಇಲ್ಲದಿರುವುದು ಬಹಿರಂಗವಾಗಿದೆ. ಅವನ ಕ್ಲಿನಿಕ್ ಕೂಡ ಆರೋಗ್ಯ ಇಲಾಖೆಯಲ್ಲಿ ನೋಂದಾಯಿಸಿರಲಿಲ್ಲ ಎಂದು ಬಾರಾಬಂಕಿ ಎಸ್‌ಪಿ ಅರ್ಪಿತ್ ವಿಜಯವರ್ಗಿಯ ತಿಳಿಸಿದ್ದಾರೆ.
ಶಸ್ತ್ರಚಿಕಿತ್ಸೆ ವೇಳೆ ಸಹಾಯ ಮಾಡಿದ ಆರೋಪಿಯ ಸೋದರಳಿಯನೂ ಪರಾರಿಯಾಗಿದ್ದು, ಇಬ್ಬರನ್ನು ಪತ್ತೆಹಚ್ಚಲು ವಿಶೇಷ ತಂಡಗಳನ್ನು ರಚಿಸಲಾಗಿದೆ.
ಘಟನೆ ತಿಳಿದ ಗ್ರಾಮಸ್ಥರು ಹಾಗೂ ಮೃತರ ಬಂಧುಗಳು ಕ್ಲಿನಿಕ್ ಎದುರು ಭಾರೀ ಪ್ರತಿಭಟನೆ ನಡೆಸಿದರು. ನಂತರ ಹಿರಿಯ ಅಧಿಕಾರಿಗಳು ತ್ವರಿತ ಕ್ರಮಕ್ಕೆ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲಾಯಿತು.
ಕೋಥಿ ಪೊಲೀಸ್ ಠಾಣೆಯಲ್ಲಿ ಕೊಲೆಗೆ ಸಮಾನವಲ್ಲದ ನರಹತ್ಯೆ ಅಪರಾಧ ಸೇರಿದಂತೆ ಹಲವು ಗಂಭೀರ ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಲಾಗಿದೆ. ತೇಜ್ ಬಹದ್ದೂರ್ ಕಾರ್ಮಿಕರಾಗಿದ್ದು, ದಂಪತಿಗೆ ಮೂವರು ಮಕ್ಕಳು ಇದ್ದಾರೆ ಎಂದು ತಿಳಿದು ಬಂದಿದೆ.