×
Ad

ಉತ್ತರ ಪ್ರದೇಶ| ಹೊಸ ಯುಜಿಸಿ ನೀತಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ರಾಜೀನಾಮೆ ನೀಡಿದ ಮ್ಯಾಜಿಸ್ಟ್ರೇಟ್ ವಿರುದ್ಧವೇ ತನಿಖೆಗೆ ಆದೇಶಿಸಿದ ಸರಕಾರ

Update: 2026-01-27 10:35 IST

Photo| NDTV

ಬರೇಲಿ: ಸರಕಾರದ ನೀತಿಗಳ ಬಗ್ಗೆ ತೀವ್ರ ಟೀಕೆ ಮತ್ತು ಆಡಳಿತಾತ್ಮಕ ಒತ್ತಡ ಆರೋಪಿಸಿ ಸೇವೆಗೆ ರಾಜೀನಾಮೆ ನೀಡಿದ ಬರೇಲಿ ನಗರ ಮ್ಯಾಜಿಸ್ಟ್ರೇಟ್ ಅಲಂಕಾರ್ ಅಗ್ನಿಹೋತ್ರಿ ಅವರನ್ನು ಉತ್ತರ ಪ್ರದೇಶ ಸರಕಾರ ಸೋಮವಾರ ಅಮಾನತುಗೊಳಿಸಿ ಅವರ ವಿರುದ್ಧ ಇಲಾಖಾ ತನಿಖೆಗೆ ಆದೇಶಿಸಿದೆ.

ಜನವರಿ 26ರಂದು ರಾಜ್ಯ ಸರಕಾರ ಹೊರಡಿಸಿದ ಅಧಿಕೃತ ಆದೇಶದ ಪ್ರಕಾರ, ಬರೇಲಿಯ ಜಿಲ್ಲಾ ಮ್ಯಾಜಿಸ್ಟ್ರೇಟ್ ಸಲ್ಲಿಸಿದ ವರದಿಯ ಆಧಾರದಲ್ಲಿ ಅಗ್ನಿಹೋತ್ರಿ ಅವರು ಪ್ರಾಥಮಿಕವಾಗಿ ತಪ್ಪಿತಸ್ಥರೆಂದು ಕಂಡು ಬಂದಿದೆ. ಆದ್ದರಿಂದ ಅವರನ್ನು ತಕ್ಷಣದಿಂದಲೇ ಅಮಾನತುಗೊಳಿಸಿ, ವಿವರವಾದ ತನಿಖೆ ನಡೆಸಲು ಬರೇಲಿ ವಿಭಾಗದ ಆಯುಕ್ತರನ್ನು ವಿಚಾರಣಾಧಿಕಾರಿಯಾಗಿ ನೇಮಕ ಮಾಡಿದೆ.

ಸರಕಾರದ ನೀತಿಗಳೊಂದಿಗೆ, ವಿಶೇಷವಾಗಿ ಹೊಸ ಯುಜಿಸಿ ನಿಯಮಗಳ ಬಗ್ಗೆ ಭಿನ್ನಾಭಿಪ್ರಾಯವನ್ನು ಉಲ್ಲೇಖಿಸಿ ಬರೇಲಿ ನಗರ ಮ್ಯಾಜಿಸ್ಟ್ರೇಟ್ ಅಲಂಕಾರ್ ಅಗ್ನಿಹೋತ್ರಿ ಸೋಮವಾರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು.

ಅಲಂಕಾರ್ ಅಗ್ನಿಹೋತ್ರಿ ಯುಜಿಸಿಯ ಹೊಸ ನಿಯಮಗಳನ್ನು "ಕರಾಳ ಕಾನೂನು" ಎಂದು ಬಣ್ಣಿಸಿದ್ದು, ಅವು ಕಾಲೇಜುಗಳಲ್ಲಿನ ಶೈಕ್ಷಣಿಕ ವಾತಾವರಣವನ್ನು ಹಾಳು ಮಾಡುತ್ತಿವೆ ಮತ್ತು ಅವುಗಳನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಆಗ್ರಹಿಸಿದ್ದರು.

2019ರ ಬ್ಯಾಚ್‌ನ ನಾಗರಿಕ ಸೇವಾ ಅಧಿಕಾರಿಯಾಗಿರುವ ಅಗ್ನಿಹೋತ್ರಿ, ತಮ್ಮ ರಾಜೀನಾಮೆಯನ್ನು ಉತ್ತರ ಪ್ರದೇಶ ರಾಜ್ಯಪಾಲೆ ಆನಂದಿಬೆನ್ ಪಟೇಲ್ ಮತ್ತು ಬರೇಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವಿನಾಶ್ ಸಿಂಗ್ ಅವರಿಗೆ ಇಮೇಲ್ ಮೂಲಕ ಕಳುಹಿಸಿದ್ದಾರೆ.

ಈ ಬೆಳವಣಿಗೆಗೆ ಪ್ರತಿಕ್ರಿಯಿಸಿದ ರಾಜಕೀಯ ನಾಯಕರು, ರಾಜೀನಾಮೆಯು ಆಡಳಿತಾತ್ಮಕ ಒತ್ತಡದ ಗಂಭೀರ ಸೂಚಕವಾಗಿದೆ ಎಂದು ಆರೋಪಿಸಿದ್ದಾರೆ. 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News