×
Ad

ಗಣರಾಜ್ಯೋತ್ಸವ ಪರೇಡ್ | ಖರ್ಗೆ–ರಾಹುಲ್‌ಗೆ ಮೂರನೇ ಸಾಲಿನಲ್ಲಿ ಆಸನ!

‘ಪ್ರೋಟೋಕಾಲ್ ಅವ್ಯವಸ್ಥೆ’ ಎಂದು ಕಾಂಗ್ರೆಸ್ ಆರೋಪ

Update: 2026-01-27 00:01 IST

Photo:X/@VTankha

ಹೊಸದಿಲ್ಲಿ: ಗಣರಾಜ್ಯೋತ್ಸವದ ಮೆರವಣಿಗೆಯ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರಿಗೆ ಮುಂದಿನ ಸಾಲಿನಲ್ಲಿ ಆಸನ ನೀಡದೆ ಮೂರನೇ ಸಾಲಿನಲ್ಲಿ ಕುಳ್ಳಿರಿಸಲಾಗಿದ್ದು, ಇದನ್ನು ‘ಪ್ರೋಟೋಕಾಲ್ ಅವ್ಯವಸ್ಥೆ’ ಎಂದು ಕಾಂಗ್ರೆಸ್ ಸೋಮವಾರ ಆರೋಪಿಸಿದೆ.

ಆಡಳಿತಾರೂಢ ಬಿಜೆಪಿ ಶಿಷ್ಟಾಚಾರ ಉಲ್ಲಂಘಿಸಿದೆ ಎಂದು ಕಾಂಗ್ರೆಸ್ ಟೀಕಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ವಿರೋಧ ಪಕ್ಷದ ನಾಯಕರನ್ನು ಉದ್ದೇಶಪೂರ್ವಕವಾಗಿ ಅವಮಾನಿಸಲು ಬಯಸಿದ್ದಾರೆಯೇ ಎಂಬ ಪ್ರಶ್ನೆಯನ್ನು ಅದು ಎತ್ತಿದೆ.

ಕರ್ತವ್ಯ ಪಥದಲ್ಲಿ ನಡೆದ ಗಣರಾಜ್ಯೋತ್ಸವ ಮೆರವಣಿಗೆಯ ವಿಐಪಿ ಗ್ಯಾಲರಿಯಲ್ಲಿ ಖರ್ಗೆ ಹಾಗೂ ರಾಹುಲ್ ಇಬ್ಬರೂ ಮೂರನೇ ಸಾಲಿನಲ್ಲಿ ಆಸನ ಪಡೆದಿದ್ದರು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರಿಂದ ತೀವ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

2014ರಲ್ಲಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ನಡೆದ ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಮುಂದಿನ ಸಾಲಿನಲ್ಲಿ ಕುಳಿತಿದ್ದ ಚಿತ್ರವನ್ನು ಹಂಚಿಕೊಂಡ ಕಾಂಗ್ರೆಸ್ ಲೋಕಸಭಾ ಸಚೇತಕ ಮಾಣಿಕ್ಕಂ ಟ್ಯಾಗೋರ್, “ಇದನ್ನು ಪ್ರೋಟೋಕಾಲ್ ಅವ್ಯವಸ್ಥೆ ಎಂದು ಕರೆಯಬೇಕಲ್ಲವೇ?” ಎಂದು ಪ್ರಶ್ನಿಸಿದ್ದಾರೆ.

“ಇದು 2014ರ ದೃಶ್ಯ. ಆಗ ಅಡ್ವಾಣಿಯವರು ಮುಂದಿನ ಸಾಲಿನಲ್ಲಿ ಕುಳಿತಿದ್ದರು. ಈಗ ಈ ಶಿಷ್ಟಾಚಾರದ ಅವ್ಯವಸ್ಥೆ ಏಕೆ? ಮೋದಿ ಮತ್ತು ಶಾ ಖರ್ಗೆ ಹಾಗೂ ರಾಹುಲ್ ರನ್ನು ಅವಮಾನಿಸಲು ಬಯಸುತ್ತಾರೆಯೇ? ವಿರೋಧ ಪಕ್ಷದ ನಾಯಕರನ್ನು ಈ ರೀತಿಯಲ್ಲಿ ನಡೆಸಿಕೊಳ್ಳಲು ಸಾಧ್ಯವಿಲ್ಲ, ವಿಶೇಷವಾಗಿ ಗಣರಾಜ್ಯೋತ್ಸವದ ದಿನದಂದು,” ಎಂದು ಅವರು ಹೇಳಿದ್ದಾರೆ.

ಮೆರವಣಿಗೆ ಮುಗಿದ ಬಳಿಕ ಖರ್ಗೆ ಕೆಲ ಕ್ಷಣಗಳ ಕಾಲ ಮುಂದಿನ ಸಾಲಿನಲ್ಲಿ ಕುಳಿತಿರುವುದು ಕಂಡುಬಂತು. ರಾಷ್ಟ್ರಗೀತೆ ಇನ್ನೂ ನುಡಿಸಬೇಕಿದೆ ಎಂಬ ಮಾಹಿತಿ ದೊರಕಿದಾಗ ಖರ್ಗೆ ಹಾಗೂ ರಾಹುಲ್ ಸ್ಥಳದಿಂದ ಹೊರಡುವ ಹಂತದಲ್ಲಿದ್ದರು ಎಂದು ಮೂಲಗಳು ತಿಳಿಸಿವೆ. ಈ ವೇಳೆ ರಾಹುಲ್ ಖರ್ಗೆ ಅವರಿಗೆ ಕುಳಿತುಕೊಳ್ಳುವಂತೆ ಸೂಚಿಸಿದ್ದು, ನಂತರ ಕಾಂಗ್ರೆಸ್ ಅಧ್ಯಕ್ಷರು ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಅವರ ಪಕ್ಕದಲ್ಲಿ ಆಸನ ಪಡೆದರು.

ಈ ಕುರಿತು ಪ್ರತಿಕ್ರಿಯಿಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕದ ಉಸ್ತುವಾರಿ ರಣದೀಪ್ ಸುರ್ಜೇವಾಲಾ, ಪ್ರಜಾಪ್ರಭುತ್ವದಲ್ಲಿ ಭಿನ್ನಾಭಿಪ್ರಾಯಗಳು ಸಹಜವಾಗಿದ್ದರೂ ವಿರೋಧ ಪಕ್ಷದ ನಾಯಕನೊಂದಿಗೆ ಈ ರೀತಿಯ ವರ್ತನೆ “ಸ್ವೀಕಾರಾರ್ಹವಲ್ಲ” ಎಂದು ಹೇಳಿದ್ದಾರೆ.

“ದೇಶದಲ್ಲಿ ವಿರೋಧ ಪಕ್ಷದ ನಾಯಕನನ್ನು ಈ ರೀತಿಯಲ್ಲಿ ನಡೆಸಿಕೊಳ್ಳುವುದು ಸಭ್ಯತೆ, ಸಂಪ್ರದಾಯ ಹಾಗೂ ಶಿಷ್ಟಾಚಾರದ ಮಾನದಂಡಗಳಿಗೆ ತಕ್ಕುದೇ? ಇದು ಸರ್ಕಾರದ ಕೀಳರಿಮೆ ಮತ್ತು ಹತಾಶೆಯನ್ನು ಬಹಿರಂಗಪಡಿಸುತ್ತದೆ,” ಎಂದು ಅವರು ಸಾಮಾಜಿಕ ಜಾಲತಾಣ X ನಲ್ಲಿ ಪೋಸ್ಟ್ ಮಾಡಿದ್ದಾರೆ.

ರಾಜ್ಯಸಭೆಯ ಹಿರಿಯ ಸಂಸದ ವಿವೇಕ್ ತಂಖಾ ಅವರು ಸಹ X ನಲ್ಲಿ, “ಇದು ಶಿಷ್ಟಾಚಾರ ಮತ್ತು ಕೃಪೆಯ ಕೊರತೆ. ಬಹುಶಃ ಇಂದಿನ ಕಾಲದಲ್ಲಿ ಇದನ್ನು ನಿರೀಕ್ಷಿಸುವುದೇ ಹೆಚ್ಚು!” ಎಂದು ಅಭಿಪ್ರಾಯಪಟ್ಟಿದ್ದಾರೆ.

ಹಿರಿಯ ಲೋಕಸಭಾ ಸಂಸದ ತಾರಿಕ್ ಅನ್ವರ್ ಈ ಘಟನೆಯನ್ನು “ತೀವ್ರ ದುರದೃಷ್ಟಕರ” ಎಂದು ಹೇಳಿದ್ದಾರೆ. ವಿರೋಧ ಪಕ್ಷದ ನಾಯಕನಿಗೆ ಸಾಂಪ್ರದಾಯಿಕವಾಗಿ ವಿಶೇಷ ಸ್ಥಾನಮಾನವಿದೆ. ವೆಸ್ಟ್‌ಮಿನಿಸ್ಟರ್ ಮಾದರಿಯ ಸರ್ಕಾರ ವ್ಯವಸ್ಥೆಯಲ್ಲಿ ಈ ಹುದ್ದೆಯನ್ನು ಸಾಮಾನ್ಯವಾಗಿ ‘shadow PM’ ಸ್ಥಾನಕ್ಕೆ ಸಮಾನವಾಗಿ ಪರಿಗಣಿಸಲಾಗುತ್ತದೆ ಎಂದರು.

2024ರ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಲ್ಲಿ ರಾಹುಲ್ ಆರನೇ ಸಾಲಿನಲ್ಲಿ ಕುಳಿತಿದ್ದರು. ಕಳೆದ ವರ್ಷ ಖರ್ಗೆ ಹಾಗೂ ರಾಹುಲ್ ಇಬ್ಬರೂ ಕೆಂಪು ಕೋಟೆಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮಕ್ಕೆ ಹಾಜರಾಗಿರಲಿಲ್ಲ.

ಇದಲ್ಲದೆ, 2018ರ ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿಯೂ ಆಗ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ರಾಹುಲ್ ಅವರಿಗೆ ಆರನೇ ಸಾಲಿನ ಆಸನ ನೀಡಲಾಗಿದ್ದುದರಿಂದ ವಿವಾದ ಉಂಟಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News