×
Ad

ತೆಲಂಗಾಣ : ಮುಂದುವರಿದ ಬೀದಿ ನಾಯಿಗಳ ಹತ್ಯೆ: ಸಾವಿರ ದಾಟಿದ ಸಾವಿನ ಸಂಖ್ಯೆ

ಒಂದು ತಿಂಗಳಲ್ಲಿ 200 ಕ್ಕೂ ಹೆಚ್ಚು ನಾಯಿಗಳ ಸಾವು

Update: 2026-01-27 08:00 IST

PC: x.com/ttindia

ಹೈದರಾಬಾದ್: ತೆಲಂಗಾಣದಲ್ಲಿ ಬೀದಿನಾಯಿಗಳ ಸಾಮೂಹಿಕ ಹತ್ಯೆ ಪ್ರಕರಣಗಳು ಮುಂದುವರಿದಿದ್ದು, 200ಕ್ಕೂ ಹೆಚ್ಚು ನಾಯಿಗಳನ್ನು ಹನುಮಕೊಂಡ ಜಿಲ್ಲೆಯ ಪಥಿಪಾಕ ಗ್ರಾಮದಲ್ಲಿ ವಿಷವಿಟ್ಟು ಕೊಲ್ಲಲಾಗಿದೆ ಎಂದು ಆಪಾದಿಸಲಾಗಿದೆ. ಪ್ರಾಣಿ ಹಕ್ಕು ಹೋರಾಟಗಾರರ ಪ್ರಕಾರ ಒಂದು ತಿಂಗಳ ಹಿಂದೆ ಅಂದರೆ ಗ್ರಾಮಪಂಚಾಯ್ತಿ ಸರಪಂಚ್ ಚುನಾವಣೆಯ ಸಂದರ್ಭದಲ್ಲಿ ಈ ಸಾಮೂಹಿಕ ಹತ್ಯೆ ನಡೆದಿದ್ದು, ಜನವರಿ 25ರಂದು ಗ್ರಾಮದ ಸಮೀಪದಲ್ಲಿ ನಾಯಿಗಳನ್ನು ಹೂತುಹಾಕಿದ ಸ್ಥಳದ ಬಗ್ಗೆ ಗ್ರಾಮಸ್ಥರು ಮಾಹಿತಿ ನೀಡಿದ ಬಳಿಕ ಬೆಳಕಿಗೆ ಬಂದಿದೆ.

ಶ್ಯಾಮ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮದಲ್ಲಿ ಬೆಳಕಿಗೆ ಬಂದ ಇಂಥ ಎರಡನೇ ಪ್ರಕರಣ ಇದಾಗಿದೆ. ಜನವರಿ 9ರಂದು ಇಂಥದ್ದೇ ಘಟನೆ ಅರೇಪಲ್ಲಿ ಗ್ರಾಮದಲ್ಲಿ ವರದಿಯಾಗಿದ್ದು, 300 ಶ್ವಾನಗಳ ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

"ಎರಡೂ ಪ್ರಕರಣಗಳು ನಮ್ಮ ಠಾಣೆಯ ವ್ಯಾಪ್ತಿಯಲ್ಲೇ ಬರುವ ಹಿನ್ನೆಲೆಯಲ್ಲಿ, ಅದೇ ವ್ಯಕ್ತಿಗಳು ಎರಡೂ ಕಡೆಗಳಲ್ಲಿ ಈ ಕೃತ್ಯ ಎಸಗಿರಬೇಕು ಎಂದು ಅಂದಾಜಿಸಲಾಗಿದೆ. ಆದ್ದರಿಂದ ಎಫ್ಐಆರ್ ಬದಲಿಸಲು ನಿರ್ಧರಿಸಲಾಗಿದ್ದು, ಈ ಪ್ರಕರಣದ ವಿವರಗಳನ್ನೂ ಸೇರಿಸಲಾಗುವುದು ಎಂದು ಠಾಣಾಧಿಕಾರಿ ಜಕ್ಕುಲ ಪರಮೇಶ್ವರ ಹೇಳಿದ್ದಾರೆ. ಹೂತುಹಾಕಲಾಗಿದ್ದ ನಾಯಿಗಳ ಕಳೇಬರವನ್ನು ಮರಣೋತ್ತರ ಪರೀಕ್ಷೆಗಾಗಿ ಮಂಗಳವಾರ ಬೆಳಿಗ್ಗೆ ಕಳುಹಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಪೊಲೀಸರು ಗ್ರಾಮಪಂಚಾಯ್ತಿ ಸರಪಂಚರು ಮತ್ತು ಕಾರ್ಯದರ್ಶಿ ವಿರುದ್ಧ ಭಾರತೀಯ ನ್ಯಾಯಸಂಹಿತೆಯ ಸೆಕ್ಷನ್ 325 ಮತ್ತ 3(5), ಪ್ರಾಣಿಗಳ ವಿರುದ್ಧದ ಕ್ರೌರ್ಯ ತಡೆ ಕಾಯ್ದೆ-1960ಯ ಸೆಕ್ಷನ್ 11(1)(ಎ) ಅನ್ವಯ ಪ್ರಕರಣ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News