×
Ad

CRPF ಅಧಿಕಾರಿಗೆ ಶೌರ್ಯ ಚಕ್ರ: ಕುಕಿ-ರೆ ಸಂಘಟನೆಗಳ ವಿರೋಧ

Update: 2026-01-26 21:49 IST

ವಿಪಿನ್ ವಿಲ್ಸನ್|Photo Credit : NDTV  

ಗುವಾಹಟಿ, ಜ.26: ಸಿಆರ್‌ಪಿಎಫ್‌ನ 20ನೇ ಬೆಟಾಲಿಯನ್‌ನ ಸಹಾಯಕ ಕಮಾಂಡಂಟ್ ವಿಪಿನ್ ವಿಲ್ಸನ್ ಅವರಿಗೆ ಶೌರ್ಯ ಚಕ್ರವನ್ನು ಪ್ರದಾನಿಸುವ ನಿರ್ಧಾರಕ್ಕಾಗಿ ಕೇಂದ್ರ ಸರ್ಕಾರವನ್ನು ಜನಾಂಗೀಯ ಹಿಂಸಾಚಾರ ಪೀಡಿತ ಮಣಿಪುರದಲ್ಲಿನ ಕುಕಿ-ರೆ ಸಂಘಟನೆಗಳು ಸೋಮವಾರ ಟೀಕಿಸಿವೆ. ಈ ಪ್ರಶಸ್ತಿಯು ಕಾನೂನುಬಾಹಿರ ಹತ್ಯೆಗಳಿಗೆ ಅನುಮೋದನೆಯಾಗಿದೆ ಎಂದು ಹೇಳಿರುವ ಅವು, ಪ್ರಶಸ್ತಿಯನ್ನು ಹಿಂದಕ್ಕೆ ಪಡೆಯುವಂತೆ ಆಗ್ರಹಿಸಿವೆ.

ಅಧಿಕೃತ ಹೇಳಿಕೆಯಂತೆ, 2024ರ ನ.11ರಂದು ಮಣಿಪುರದ ಜಿರಿಬಾಮ್ ಜಿಲ್ಲೆಯ ಬೊರೊಬೆಕ್ರಾ ಪ್ರದೇಶದಲ್ಲಿ ಸಿಆರ್‌ಪಿಎಫ್ ಠಾಣೆಯ ಮೇಲೆ ಸಶಸ್ತ್ರ ಬಂಡುಕೋರರು ನಡೆಸಿದ್ದ ದಾಳಿಯನ್ನು ವಿಫಲಗೊಳಿಸಿದ್ದಕ್ಕಾಗಿ ವಿಲ್ಸನ್ ಅವರನ್ನು ಈ ಗೌರವಕ್ಕೆ ಆಯ್ಕೆ ಮಾಡಲಾಗಿದೆ. ಸಿಆರ್‌ಪಿಎಫ್ ಅವರ ಅದಮ್ಯ ಚೈತನ್ಯ ಮತ್ತು ಸಾಟಿಯಿಲ್ಲದ ಶೌರ್ಯವನ್ನು ಪ್ರಶಂಸಿಸಿದೆ.

ವಿಲ್ಸನ್ ಅವರಿಗೆ ಶೌರ್ಯ ಚಕ್ರ ಪ್ರಕಟಿಸಿರುವುದು ಕುಕಿ ಆರ್ಗನೈಸೇಷನ್ ಫಾರ್ ಹ್ಯೂಮನ್ ರೈಟ್ಸ್ ಟ್ರಸ್ಟ್ (ಕೊಹುರ್) ಮತ್ತು ಇಂಡಿಜಿನಿಯಸ್ ಟ್ರೈಬಲ್ ಲೀಡರ್ಸ್ ಫೋರಮ್ (ಐಟಿಎಲ್‌ಎಫ್) ಅನ್ನು ಕೆರಳಿಸಿದೆ.

ಈ ಗೌರವವು ರಾಷ್ಟ್ರೀಯ ಹೆಮ್ಮೆಯಲ್ಲ; ಬದಲಿಗೆ ಅದು 10 ಕುಕಿ-ರೆ (ಹಮರ್) ಗ್ರಾಮ ಸ್ವಯಂಸೇವಕರ ಕಾನೂನುಬಾಹಿರ ಹತ್ಯೆಗೆ ಸರ್ಕಾರದ ಅನುಮೋದನೆಯಾಗಿದೆ ಎಂದು ಕೊಹುರ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಸಂಘಟನೆಯ ಪ್ರಕಾರ, ವಿಧಿವಿಜ್ಞಾನ ವರದಿಗಳು ಹಾಗೂ ಪ್ರತ್ಯಕ್ಷದರ್ಶಿಗಳ ಹೇಳಿಕೆಗಳು ಸೇರಿದಂತೆ ವಿಶ್ವಾಸಾರ್ಹ ಪುರಾವೆಗಳು, ಮೃತರು ನಿರಾಯುಧರಾಗಿದ್ದರು ಅಥವಾ ಕನಿಷ್ಠ ಪ್ರಮಾಣದಲ್ಲಿ ಶಸ್ತ್ರಗಳನ್ನು ಹೊಂದಿದ್ದ ನಾಗರಿಕರಾಗಿದ್ದರು ಹಾಗೂ ಜನಾಂಗೀಯ ಹಿಂಸಾಚಾರದ ಅವಧಿಯಲ್ಲಿ ಸಮುದಾಯಗಳನ್ನು ರಕ್ಷಿಸುವ ಕರ್ತವ್ಯ ನಿರ್ವಹಿಸುತ್ತಿದ್ದರು ಎಂಬುದನ್ನು ದೃಢಪಡಿಸಿವೆ.

ಅವರಿಗೆ ಉಗ್ರಗಾಮಿಗಳು ಎಂದು ಹಣೆಪಟ್ಟಿ ಕಟ್ಟುವ ಸರ್ಕಾರದ ನಿರೂಪಣೆಯು ಏಕಪಕ್ಷೀಯವಾಗಿದ್ದು, ಮಾರಕ ಬಲಪ್ರಯೋಗವನ್ನು ಸಮರ್ಥಿಸಿಕೊಳ್ಳಲು ರಚಿಸಿದ ಕಟ್ಟುಕಥೆಯಾಗಿದೆ. ಅದು ಎನ್‌ಕೌಂಟರ್ ಆಗಿರಲಿಲ್ಲ; ಅದು ಮರಣದಂಡನೆಯಾಗಿತ್ತು ಎಂದು ಕೊಹುರ್ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News