SIR ವಿವಾದ | ‘ಎಲ್ಲೆ ಮೀರಿದ ಮಾತು’: ನ್ಯಾ. ಉಜ್ಜಲ್ ಭುಯಾನ್ ಹೇಳಿಕೆಗೆ ಮಾಜಿ CJI ಗವಾಯಿ, ನಿವೃತ್ತ ನ್ಯಾಯಾಧೀಶರ ಆಕ್ಷೇಪ
ಉಜ್ಜಲ್ ಭುಯಾನ್ | Photo Credit : PTI
ಹೊಸದಿಲ್ಲಿ: ಮತಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ವಿವಾದ ಸುಪ್ರೀಂ ಕೋರ್ಟ್ ನ ವಿಚಾರಣೆಯಲ್ಲಿರುವಾಗಲೇ, ಈ ಕುರಿತು ಸುಪ್ರೀಂ ಕೋರ್ಟ್ನ ಹಾಲಿ ನ್ಯಾಯಾಧೀಶ ಉಜ್ಜಲ್ ಭುಯಾನ್ ನೀಡಿರುವ ಹೇಳಿಕೆಗೆ ಮಾಜಿ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಹಾಗೂ ದಿಲ್ಲಿ ಹೈಕೋರ್ಟ್ ನ ನಿವೃತ್ತ ನ್ಯಾಯಾಧೀಶರು ಸೋಮವಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
SIR ಪ್ರಕರಣ ನ್ಯಾಯಾಲಯದ ಮುಂದಿರುವಾಗ ಹಾಲಿ ನ್ಯಾಯಾಧೀಶರೊಬ್ಬರು ಅದರ ಕುರಿತು ಸಾರ್ವಜನಿಕವಾಗಿ ಹೇಳಿಕೆ ನೀಡುವುದು ನ್ಯಾಯಾಂಗ ಔಚಿತ್ಯಕ್ಕೆ ವಿರುದ್ಧವಾಗಿದೆ ಎಂದು ಗವಾಯಿ ಹೇಳಿದ್ದಾರೆ.
“ನ್ಯಾಯಾಲಯದ ಮುಂದಿರುವ ವಿಷಯದ ಕುರಿತು ಯಾವುದೇ ಬಗೆಯ ಹೇಳಿಕೆ ನೀಡಲು ನ್ಯಾಯಾಂಗ ಔಚಿತ್ಯ ಅನುಮತಿಸುವುದಿಲ್ಲ” ಎಂದು ಗವಾಯಿ PTI ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ನ್ಯಾ. ಉಜ್ಜಲ್ ಭುಯಾನ್ ಅವರ ಹೇಳಿಕೆಯನ್ನು ದಿಲ್ಲಿ ಹೈಕೋರ್ಟ್ನ ನಿವೃತ್ತ ನ್ಯಾಯಾಧೀಶರಾದ ಎಸ್.ಎನ್. ಧಿಂಗ್ರಾ ಹಾಗೂ ಆರ್.ಎಸ್. ಸೋಧಿ ಕೂಡ ಪ್ರಶ್ನಿಸಿದ್ದಾರೆ.
“ಸುಪ್ರೀಂ ಕೋರ್ಟ್ನ ಹಾಲಿ ನ್ಯಾಯಾಧೀಶರ ಹೇಳಿಕೆ ಎಲ್ಲೆ ಮೀರಿದೆ. ಅದೇ ನ್ಯಾಯಾಲಯದ ಮುಂದೆ ವಿಚಾರಣೆಗೆ ಬಾಕಿ ಇರುವ ವಿಷಯದ ಕುರಿತು ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಇಂತಹ ಹೇಳಿಕೆ ನೀಡಬಾರದಿತ್ತು” ಎಂದು ನ್ಯಾ. ಎಸ್.ಎನ್. ಧಿಂಗ್ರಾ ಹೇಳಿದ್ದಾರೆ.
“ಅವರು ಇಂತಹ ಹೇಳಿಕೆ ನೀಡುವ ಮೊದಲು ಸಾವಿರ ಬಾರಿ ಯೋಚಿಸಬೇಕಿತ್ತು. ಉಜ್ಜಲ್ ಭುಯಾನ್ ಅವರಿಗೆ ವಿಷಯದ ಸಂಪೂರ್ಣ ವಾಸ್ತವ ತಿಳಿದಿಲ್ಲ” ಎಂದೂ ಅವರು ಆಕ್ಷೇಪಿಸಿದ್ದಾರೆ.
‘ಮತದಾನದ ಹಕ್ಕು ಶಾಸನಕ್ಕೆ ಒಳಪಟ್ಟಿದೆ’
SIR ಅಭಿಯಾನವು ಮತದಾನದ ಹಕ್ಕನ್ನು ಕಸಿಯುವ ಪ್ರಕ್ರಿಯೆ ಎಂಬ ನ್ಯಾ. ಉಜ್ಜಲ್ ಭುಯಾನ್ ಅವರ ಹೇಳಿಕೆಯನ್ನು ನಿವೃತ್ತ ನ್ಯಾ. ಆರ್.ಎಸ್. ಸೋಧಿ ಟೀಕಿಸಿದ್ದಾರೆ. ಮತದಾನದ ಹಕ್ಕು ಶಾಸನಾತ್ಮಕ ಚೌಕಟ್ಟಿಗೆ ಒಳಪಟ್ಟಿದೆ ಎಂದು ಅವರು ಹೇಳಿದ್ದಾರೆ.
“ನಿಮಗೆ ಮತದಾನದ ಹಕ್ಕಿದೆಯೇ ಅಥವಾ ಇಲ್ಲವೇ ಎಂಬುದು ಶಾಸನದ ಮೇಲೆ ಅವಲಂಬಿತವಾಗಿದೆ. ನೀವು ಶಾಸನದ ಮಾನದಂಡದ ವ್ಯಾಪ್ತಿಯಲ್ಲಿದ್ದರೆ ನಿಮಗೆ ಮತದಾನದ ಹಕ್ಕಿರುತ್ತದೆ. ಒಂದು ವೇಳೆ ನೀವು ಶಾಸನದ ಮಾನದಂಡದ ವ್ಯಾಪ್ತಿಯೊಳಗೆ ಇಲ್ಲದಿದ್ದರೆ, ನಿಮಗೆ ಮತದಾನದ ಹಕ್ಕಿರುವುದಿಲ್ಲ” ಎಂದು ಸೋಧಿ ಹೇಳಿದ್ದಾರೆ.
ಉಜ್ಜಲ್ ಭುಯಾನ್ ಹೇಳಿದ್ದೇನು?
SIR ಕುರಿತು ನ್ಯಾ. ಉಜ್ಜಲ್ ಭುಯಾನ್ ಅವರು, “ಲಕ್ಷಾಂತರ ಜನರ ಮತದಾನದ ಹಕ್ಕನ್ನು ಕಸಿದುಕೊಳ್ಳುವ ಯಾವುದೇ ಪ್ರಕ್ರಿಯೆ ನಿರಂಕುಶ ಸ್ವರೂಪದ್ದಾಗಿದೆ. ಇಂತಹ ಪ್ರಕ್ರಿಯೆ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ” ಎಂದು ಹೇಳಿದ್ದರು.