ಮೂವರು ಪತ್ರಕರ್ತೆಯರಿಗೆ ಲೈಂಗಿಕ ಕಿರುಕುಳ ಆರೋಪ | ಜಂತರ್ ಮಂತರ್ ಪ್ರತಿಭಟನೆ ವೇಳೆ ಕರ್ತವ್ಯದಲ್ಲಿದ್ದ ದಿಲ್ಲಿ ಪೊಲೀಸ್ ACPಗೆ DCP ಹುದ್ದೆಗೆ ಭಡ್ತಿ!
Photo Credit : @abhijeet_dipke
ಮೂವರು ಪತ್ರಕರ್ತೆಯರ ಮೆಲೆ ಲೈಂಗಿಕ ಕಿರುಕುಳ ಆರೋಪ | ಜಂತರ್ ಮಂತರ್ ಪ್ರತಿಭಟನೆ ವೇಳೆ ಕರ್ತವ್ಯದಲ್ಲಿದ್ದ ದಿಲ್ಲಿ ಪೊಲೀಸ್ ACPಗೆ DCP ಹುದ್ದೆ ನೀಡಿದ ಸರಕಾರ!
ಹೊಸದಿಲ್ಲಿ: ಜಂತರ್ ಮಂತರ್ ನಲ್ಲಿ ಚುನಾವಣಾ ಆಯೋಗದ (EC) ವಿರುದ್ಧ ಶನಿವಾರ ನಡೆದ ಪ್ರತಿಭಟನೆಯ ವೇಳೆ ಮಹಿಳಾ ಪತ್ರಕರ್ತೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ದಿಲ್ಲಿ ಪೊಲೀಸ್ ACP (ಕನ್ನಾಟ್ ಪ್ಲೇಸ್) ವಿವೇಕ್ ಭಗತ್ ಅವರಿಗೆ ಸೋಮವಾರ ಹೆಚ್ಚುವರಿ DCP (Additional DCP) ಹುದ್ದೆಗೆ ಭಡ್ತಿ ನೀಡಲಾಗಿದೆ.
ಭಗತ್ ಅವರ ವಿರುದ್ಧ ಮೂವರು ಪತ್ರಕರ್ತೆಯರು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದು, ಅವರ ದೂರುಗಳನ್ನು ಸವಿವರ ತನಿಖೆಗಾಗಿ ಕ್ರೈಮ್ ಬ್ರಾಂಚ್ ಗೆ ವರ್ಗಾಯಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಗತ್ ಅವರಿಗೆ ನೀಡಿರುವ ಭಡ್ತಿ ವಾಡಿಕೆಯ ಆದೇಶದ ಭಾಗವಾಗಿದೆ. ಭಡ್ತಿಗೆ ಸಂಬಂಧಿಸಿದ ಪ್ರಸ್ತಾವನೆಯನ್ನು ಬಹಳ ಹಿಂದೆಯೇ ಕಳುಹಿಸಲಾಗಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಭಗತ್ ಅವರಲ್ಲದೆ ಇತರ 11 ಅಧಿಕಾರಿಗಳಿಗೂ ಭಡ್ತಿ ನೀಡಲಾಗಿದೆ.
ಅಕ್ಟೋಬರ್ 3ರಂದು ಜಂತರ್ ಮಂತರ್ ನಲ್ಲಿ EC ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ದಿಲ್ಲಿ ಪೊಲೀಸ್ ನ ಹಿರಿಯ ಅಧಿಕಾರಿಗಳು ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಮೂವರು ಪತ್ರಕರ್ತೆಯರು ಆರೋಪಿಸಿದ್ದಾರೆ.
ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯುತ್ತಿದ್ದಾಗ ಸ್ಥಳದಲ್ಲಿ ಯಾವುದೇ ಮಹಿಳಾ ಪೊಲೀಸ್ ಸಿಬ್ಬಂದಿ ಇರಲಿಲ್ಲ ಎಂದು ಪತ್ರಕರ್ತೆಯೊಬ್ಬರು ಆರೋಪಿಸಿದ್ದಾರೆ.
‘ಮಹಿಳಾ ಪೊಲೀಸ್ ಸಿಬ್ಬಂದಿ ಇಲ್ಲದಿರುವ ಬಗ್ಗೆ ನಾನು ದಿಲ್ಲಿ ಪೊಲೀಸ್ ACP ವಿವೇಕ್ ಭಗತ್ ಅವರನ್ನು ಪ್ರಶ್ನಿಸಿದೆ. ಆಗ ಅವರು ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದರು ಮತ್ತು ನನ್ನನ್ನು ಹಿಂದಕ್ಕೆ ತಳ್ಳಿದರು’ ಎಂದು ಪತ್ರಕರ್ತೆಯೊಬ್ಬರು ಆರೋಪಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ದಿಲ್ಲಿ ಪೊಲೀಸರು ‘ಎಕ್ಸ್’ನಲ್ಲಿ ಈ ಕುರಿತು ಪ್ರತಿಕ್ರಿಯಿಸಿದ್ದು, ‘ಅಕ್ಟೋಬರ್ 3ರಂದು ಹೊಸದಿಲ್ಲಿ ಪ್ರದೇಶದಲ್ಲಿ ಪ್ರತಿಭಟನೆ ನಡೆದ ಸಂದರ್ಭದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಕಾರ್ಯಾಚರಣೆ ನಡೆಯುತ್ತಿದ್ದಾಗ ಮೂವರು ಪತ್ರಕರ್ತೆಯರು ಪೊಲೀಸ್ ಅಧಿಕಾರಿಗಳ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ಹೊಸದಿಲ್ಲಿ ಜಿಲ್ಲಾ ಪೊಲೀಸರು ಅವರ ದೂರುಗಳನ್ನು ಸ್ವೀಕರಿಸಿದ್ದು, ನ್ಯಾಯಯುತ ಮತ್ತು ನಿಷ್ಪಕ್ಷಪಾತ ತನಿಖೆಗಾಗಿ ಪ್ರಕರಣವನ್ನು ಕ್ರೈಮ್ ಬ್ರಾಂಚ್ ಗೆ ವರ್ಗಾಯಿಸಲಾಗಿದೆ’ ಎಂದು ತಿಳಿಸಿದ್ದಾರೆ.
ಶನಿವಾರ ಸಂಜೆ ಹಲವು ಸ್ವತಂತ್ರ ಪತ್ರಕರ್ತರು ಹಾಗೂ ಸಾಮಾಜಿಕ ಜಾಲತಾಣದ ಪ್ರಭಾವಿಗಳು ಸಂಸತ್ ಭವನದ ರಸ್ತೆಯಲ್ಲಿರುವ ಪೊಲೀಸ್ ಠಾಣೆಯ ಹೊರಗೆ ಪ್ರತಿಭಟನೆ ನಡೆಸಿದರು. ACP ಸೇರಿದಂತೆ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳ ವಿರುದ್ಧ FIR ದಾಖಲಿಸುವಂತೆ ಅವರು ಒತ್ತಾಯಿಸಿದರು.
ಈ ಬೆಳವಣಿಗೆಯನ್ನು ‘ಕಾಕ್ರೋಚ್ ಜನತಾ ಪಾರ್ಟಿ’ ಕೂಡ ಟೀಕಿಸಿದೆ. ‘ಲೈಂಗಿಕ ದೌರ್ಜನ್ಯಕ್ಕಾಗಿ ಅವರಿಗೆ ಬಹುಮಾನ ನೀಡಲಾಗುತ್ತಿದೆಯೇ?’ ಎಂದು ಅದು ಪ್ರಶ್ನಿಸಿದೆ.
ಘಟನೆಯನ್ನು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಖಂಡಿಸಿದ್ದಾರೆ. ಪತ್ರಕರ್ತೆಯರ ದೂರಿನ ಕುರಿತು FIR ದಾಖಲಿಸದ ಪೊಲೀಸರ ವಿರುದ್ಧ ಅವರು ವಾಗ್ದಾಳಿ ನಡೆಸಿದ್ದಾರೆ.
‘ಜಂತರ್ ಮಂತರ್ ನಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ದುರ್ವರ್ತನೆ ತೋರಿದ್ದಾರೆ ಎಂದು ಪತ್ರಕರ್ತೆಯೊಬ್ಬರು ಆರೋಪಿಸಿದ್ದಾರೆ. ನೂರಾರು ಪತ್ರಕರ್ತರು ಗಂಟೆಗಟ್ಟಲೆ ಅಲ್ಲಿ ಕುಳಿತು ಒಂದೇ ಬೇಡಿಕೆ ಮುಂದಿಟ್ಟಿದ್ದಾರೆ: FIR ದಾಖಲಿಸಬೇಕು. ಅದು ಪೊಲೀಸರ ಮೂಲಭೂತ ಕರ್ತವ್ಯವಲ್ಲವೇ? ಅವರು ಅದನ್ನೂ ಮಾಡಿಲ್ಲ’ ಎಂದು ರಾಹುಲ್ ಗಾಂಧಿ ‘ಎಕ್ಸ್’ನಲ್ಲಿ ಹೇಳಿದ್ದಾರೆ.
ಪ್ರಿಯಾಂಕಾ ಗಾಂಧಿ, ‘ಜಂತರ್ ಮಂತರ್ ನಲ್ಲಿ ವರದಿ ಮಾಡುವಾಗ ಪತ್ರಕರ್ತೆಯರು ಪೊಲೀಸ್ ಸಿಬ್ಬಂದಿಯ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ಡJನ್ಗಟ್ಟಲೆ ಪತ್ರಕರ್ತರು ಪ್ರತಿಭಟನೆ ನಡೆಸಿದರೂ ಯಾವುದೇ FIR ದಾಖಲಾಗಿಲ್ಲ ಅಥವಾ ಯಾವುದೇ ನಿರ್ದಿಷ್ಟ ಕ್ರಮ ಕೈಗೊಳ್ಳಲಾಗಿಲ್ಲ’ ಎಂದು ಹೇಳಿದ್ದಾರೆ.
ಶಾಂತಿಯುತ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿರುವ ಮಹಿಳೆಯರು ಕೂಡ ಪೊಲೀಸರು ತಮ್ಮೊಂದಿಗೆ ಅತ್ಯಂತ ಅಸಭ್ಯವಾಗಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಭದ್ರತೆ ಒದಗಿಸಬೇಕಾದ ಪೊಲೀಸರೇ ಮಹಿಳೆಯರಲ್ಲಿ ಅಭದ್ರತೆಯ ಭಾವನೆ ಮೂಡಿಸುತ್ತಿದ್ದಾರೆ ಎಂದೂ ಅವರು ಹೇಳಿದ್ದಾರೆ.
‘ಕಾಲೇಜು ವಿದ್ಯಾರ್ಥಿನಿಯರಿಂದ ಹಿಡಿದು ಪತ್ರಕರ್ತೆಯರವರೆಗೆ ಮಹಿಳೆಯರು ಎಲ್ಲೆಡೆ ಅಭದ್ರತೆಯನ್ನು ಎದುರಿಸುತ್ತಿದ್ದಾರೆ’ ಎಂದು ಪ್ರಿಯಾಂಕಾ ಹೇಳಿದ್ದಾರೆ.
ಪ್ರತಿಭಟನೆಯ ವರದಿ ಮಾಡುತ್ತಿದ್ದ ಪತ್ರಕರ್ತರೊಂದಿಗೆ ಪೊಲೀಸರು ನಡೆದುಕೊಂಡ ರೀತಿಗೆ ಪ್ರೆಸ್ ಕ್ಲಬ್ ಆಫ್ ಇಂಡಿಯಾ ಆಘಾತ ಹಾಗೂ ಬೇಸರ ವ್ಯಕ್ತಪಡಿಸಿದೆ. ಪತ್ರಕರ್ತೆಯರು ನೀಡಿರುವ ದೂರಿನ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ದಿಲ್ಲಿ ಪೊಲೀಸರನ್ನು ಒತ್ತಾಯಿಸಿದೆ.
‘ಪ್ರಜಾಪ್ರಭುತ್ವದಲ್ಲಿ ಇಂತಹ ನಡವಳಿಕೆಯನ್ನು ಸಹಜವೆಂದು ಪರಿಗಣಿಸಲು ಸಾಧ್ಯವಿಲ್ಲ. ಪತ್ರಕರ್ತರು ಯಾವುದೇ ಭಯವಿಲ್ಲದೆ ಮುಕ್ತವಾಗಿ ಕೆಲಸ ಮಾಡಲು ಮತ್ತು ವಿವಿಧ ವಿಷಯಗಳನ್ನು ಎತ್ತಿಹಿಡಿಯಲು ಸೇರುವವರ ಚಟುವಟಿಕೆಗಳನ್ನು ದಾಖಲಿಸಲು ಅವಕಾಶ ಇರಬೇಕು. ದೇಶದ ರಾಜಧಾನಿಯ ಹೃದಯಭಾಗದಲ್ಲೇ ಇದಕ್ಕೆ ಅವಕಾಶ ನೀಡದಿರುವುದು ಭಾರತದಲ್ಲಿ ಮಾಧ್ಯಮ ಸ್ವಾತಂತ್ರ್ಯದ ಭವಿಷ್ಯದ ದೃಷ್ಟಿಯಿಂದ ಒಳ್ಳೆಯ ಲಕ್ಷಣವಲ್ಲ’ ಎಂದು ಪ್ರೆಸ್ ಕ್ಲಬ್ ಆಫ್ ಇಂಡಿಯಾ ಹೇಳಿಕೆಯಲ್ಲಿ ತಿಳಿಸಿದೆ.
ಪತ್ರಕರ್ತೆಯ ದೂರಿನ ಕುರಿತು ದಿಲ್ಲಿ ಪೊಲೀಸರು ತಕ್ಷಣ ಕ್ರಮ ಕೈಗೊಳ್ಳಬೇಕು. ಮಾಧ್ಯಮ ಪ್ರತಿನಿಧಿಗಳು ಆಕ್ರಮಣಕಾರಿ ವರ್ತನೆ ಹಾಗೂ ಬೆದರಿಕೆಗಳನ್ನು ಎದುರಿಸದೆ ತಮ್ಮ ಕರ್ತವ್ಯ ನಿರ್ವಹಿಸಲು ಅಗತ್ಯವಾದ ವಾತಾವರಣ ಕಲ್ಪಿಸಬೇಕು ಎಂದು ಅದು ಆಗ್ರಹಿಸಿದೆ.
ಸೌಜನ್ಯ: hindustantimes.com