Photo Credit : ANI

ಹೊಸದಿಲ್ಲಿ: ಪ್ರತಿಭಟನೆಯಲ್ಲಿ ಪೊಲೀಸರು ವಶಕ್ಕೆ ಪಡೆದರು. ಬಸ್‌ ಗೆ ಹತ್ತಿಸಿದರು. ನಗರದ ಯಾವುದೋ ಅಪರಿಚಿತ ಪೊಲೀಸ್ ಠಾಣೆಗೆ ಕರೆದೊಯ್ದರು. ಕೆಲವೇ ಗಂಟೆಗಳಲ್ಲಿ ಬಿಡುಗಡೆ ಮಾಡಿದರು. ಆದರೆ, ‘ಈಗ ಮನೆಗೆ ಹೇಗೆ ಹೋಗುವುದು?’ ಇದೇ ಪ್ರಶ್ನೆ ಹಲವರ ಮುಂದಿರುತ್ತದೆ.

ಈ ಗೊಂದಲಕ್ಕೆ ತಂತ್ರಜ್ಞಾನದ ನೆರವಿನಿಂದ ಪರಿಹಾರ ಕಂಡುಕೊಳ್ಳಲು ದಿಲ್ಲಿ ಮೂಲದ 25 ವರ್ಷದ ತಂತ್ರಜ್ಞಾನ ಕ್ಷೇತ್ರದ ವೃತ್ತಿಪರ ರಾಜೀವ್ ಚೌಧರಿ ಅವರು ‘ಡಿಟೈನೀ ಘರ್‌ ವಾಪ್ಸಿ ಯೋಜನೆ’ ರೂಪಿಸಿದ್ದಾರೆ.

ಕೃತಕ ಬುದ್ಧಿಮತ್ತೆ (AI), ಖಾಸಗಿ ಡ್ಯಾಶ್ಬೋರ್ಡ್ ಮತ್ತು ಸ್ವಯಂಸೇವಕ ಚಾಲಕರ ಜಾಲದ ನೆರವಿನಿಂದ ಇದು ಕಾರ್ಯನಿರ್ವಹಿಸುತ್ತದೆ. ವಶಕ್ಕೆ ಪಡೆದವರನ್ನು ಕರೆದೊಯ್ಯುವ ಪೊಲೀಸ್ ಬಸ್ ಎಲ್ಲಿದೆ ಎಂಬುದನ್ನು ಪತ್ತೆ ಮಾಡುವುದು, ಹತ್ತಿರದ ಸ್ವಯಂಸೇವಕ ಚಾಲಕರನ್ನು ಹುಡುಕುವುದು ಮತ್ತು ಬಿಡುಗಡೆಗೊಂಡವರನ್ನು ಸುರಕ್ಷಿತವಾಗಿ ಮನೆಗೆ ಕರೆದೊಯ್ಯುವ ವ್ಯವಸ್ಥೆ ಮಾಡುವುದು ಇದರ ಕೆಲಸ.

►ಒಂದೇ ಸಂದೇಶ ಸಾಕು...

ಪ್ರತಿಭಟನಾ ಸ್ಥಳದಲ್ಲಿ ಪೊಲೀಸ್ ಬಸ್‌ ಗೆ ಹತ್ತಿಸಲಾಗುತ್ತಿರುವವರಿಗೆ ಸ್ವಯಂಸೇವಕರು ಕರಪತ್ರ ನೀಡುತ್ತಾರೆ. ಅದರಲ್ಲಿರುವ ‘SOS’ ಸಂಖ್ಯೆಗೆ ಬಿಡುಗಡೆಯಾದ ಬಳಿಕ ಕರೆ ಅಥವಾ ಸಂದೇಶ ಕಳುಹಿಸಬಹುದು. ಅಷ್ಟೇ. ಅಲ್ಲಿಂದ ವ್ಯವಸ್ಥೆ ಕೆಲಸ ಆರಂಭಿಸುತ್ತದೆ.

ಯಾವ ಬಸ್? ಎಲ್ಲಿದೆ? ಯಾವ ಠಾಣೆಗೆ ಹೋಗುತ್ತಿದೆ? ಎಷ್ಟು ಮಂದಿ ಇದ್ದಾರೆ? ಹತ್ತಿರದ ಚಾಲಕ ಯಾರು? ಈ ಎಲ್ಲ ಮಾಹಿತಿಯನ್ನು ಒಂದೇ ಖಾಸಗಿ ಡ್ಯಾಶ್ಬೋರ್ಡ್ನಲ್ಲಿ ಜೋಡಿಸಲಾಗುತ್ತದೆ.

►ವಾಟ್ಸಾಪ್ ಸಂದೇಶದಿಂದ AI ಕೆಲಸ

ಉದಾಹರಣೆಗೆ, “ಬದರ್ಪುರ ಗಡಿಯತ್ತ ಸಾಗುತ್ತಿರುವ ABCD 1234 1245 ಸಂಖ್ಯೆಯ ಬಸ್ಸಿನಲ್ಲಿ 20 ಮಂದಿ ಇದ್ದಾರೆ” ಎಂಬ ಸಂದೇಶ ವಾಟ್ಸಾಪ್ ನಲ್ಲಿ ಬಂದರೆ, ಅದನ್ನು ಡ್ಯಾಶ್ ಬೋರ್ಡ್ ನ ‘ಸ್ಮಾರ್ಟ್ ಪೇಸ್ಟ್’ ವಿಭಾಗದಲ್ಲಿ ನಮೂದಿಸಲಾಗುತ್ತದೆ.

ಇಂಗ್ಲಿಷ್, ಹಿಂದಿ ಅಥವಾ ಹಿಂಗ್ಲಿಷ್ ನಲ್ಲಿರುವ ಅಸಂಘಟಿತ ಸಂದೇಶವನ್ನು AI ವಿಶ್ಲೇಷಿಸುತ್ತದೆ. ಬಸ್ ಸಂಖ್ಯೆ, ಸ್ಥಳ, ಪ್ರಯಾಣಿಕರ ಸಂಖ್ಯೆ ಸೇರಿದಂತೆ ಅಗತ್ಯ ಮಾಹಿತಿಯನ್ನು ಗುರುತಿಸಿ ಸೂಕ್ತ ವಿಭಾಗಗಳಲ್ಲಿ ಭರ್ತಿ ಮಾಡುತ್ತದೆ.

ಅದೇ ಸಂದೇಶದಲ್ಲಿ ವೈದ್ಯಕೀಯ ನೆರವು, ಆಹಾರದ ಅಗತ್ಯ ಅಥವಾ ಮಹಿಳೆಯರನ್ನು ವಶಕ್ಕೆ ಪಡೆದಿರುವುದು ಮುಂತಾದ ತುರ್ತು ಮಾಹಿತಿ ಇದ್ದರೆ, AI ಅದನ್ನೂ ಗುರುತಿಸಿ ಎಚ್ಚರಿಕೆ ನೀಡುತ್ತದೆ. ಮಾಹಿತಿ ಯಾವಾಗ ಬಂದಿದೆ ಮತ್ತು ಅದು ಬಸ್ಸಿನಲ್ಲಿರುವ ಸಂಪರ್ಕ ವ್ಯಕ್ತಿಯಿಂದ, ಸ್ಥಳೀಯ ಸ್ವಯಂಸೇವಕರಿಂದ ಅಥವಾ ಸುದ್ದಿ ಪ್ರಸಾರದಿಂದ ಬಂದಿದೆಯೇ ಎಂಬುದನ್ನೂ ದಾಖಲಿಸಲಾಗುತ್ತದೆ.

►ಬಸ್ ಪತ್ತೆ; ಚಾಲಕನಿಗೆ ಕರೆ

ಡ್ಯಾಶ್ ಬೋರ್ಡ್ ಬಸ್ ನ ಮಾರ್ಗವನ್ನು ನಕ್ಷೆಯಲ್ಲಿ ತೋರಿಸುತ್ತದೆ. ಅದೇ ಪ್ರದೇಶದಲ್ಲಿರುವ ಸ್ವಯಂಸೇವಕ ಚಾಲಕರನ್ನೂ ಪತ್ತೆ ಮಾಡುತ್ತದೆ. ‘ವಾಟ್ಸಾಪ್ ನಲ್ಲಿ ಕೇಳಿ’ ಬಟನ್ ಅಥವಾ ತ್ವರಿತ ಫೋನ್ ಕರೆ ಮೂಲಕ ಹತ್ತಿರದ ಚಾಲಕರನ್ನು ಸಂಪರ್ಕಿಸಲಾಗುತ್ತದೆ. ಚಾಲಕ ವಿನಂತಿ ಸ್ವೀಕರಿಸಿದ ಬಳಿಕ ಅವರ ಸ್ಥಿತಿಯನ್ನು ಹೀಗೆ ದಾಖಲಿಸಲಾಗುತ್ತದೆ:

ಪಿಕ್ಅಪ್ ಗೆ ಹೊರಟಿದೆ → ದಾರಿಯಲ್ಲಿದೆ → ಸ್ಥಳಕ್ಕೆ ತಲುಪಿದೆ → ಮನೆಗೆ ತಲುಪಿಸಲಾಗಿದೆ

ಹತ್ತಿರದ ಮೆಟ್ರೋ ನಿಲ್ದಾಣದಂತಹ ಸುರಕ್ಷಿತ ಸ್ಥಳದಲ್ಲಿ ಇಳಿಸುವ ಆಯ್ಕೆಯೂ ಇದೆ. ಚಾಲಕ ಅಥವಾ ವಶಕ್ಕೆ ಪಡೆದ ವ್ಯಕ್ತಿ ನಿಗದಿತ ಸಮಯದಲ್ಲಿ ಸುರಕ್ಷತೆಯನ್ನು ದೃಢೀಕರಿಸದಿದ್ದರೆ ನಿರ್ವಾಹಕರಿಗೆ ಎಚ್ಚರಿಕೆ ನೀಡುವ ‘ಚೆಕ್ಇನ್ ಟೈಮರ್’ ಕೂಡ ಇದೆ.

“ಇದು ಒಂದು-ನಿಲುಗಡೆ ಪರಿಹಾರ. ಆದ್ದರಿಂದ ನಾನು ಬಹು ಫಾಲೋ-ಅಪ್ ಗಳನ್ನು ಮಾಡಬೇಕಾಗಿಲ್ಲ,” ಎಂದು ಚೌಧರಿ ಹೇಳಿದ್ದಾರೆ.

►700ಕ್ಕೂ ಹೆಚ್ಚು ಮಂದಿ ವಶಕ್ಕೆ

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಹಾಗೂ ಮತದಾರರ ಪಟ್ಟಿಯ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಪ್ರಕ್ರಿಯೆ ವಿರೋಧಿಸಿ ದಿಲ್ಲಿಯಲ್ಲಿ ಅಕ್ಟೋಬರ್ 2, 3 ಮತ್ತು 4ರಂದು ನಡೆದ ಪ್ರತಿಭಟನೆಗಳಲ್ಲಿ 700ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯಲಾಗಿತ್ತು. ಅವರನ್ನು ಬಸ್ ಗಳಲ್ಲಿ ಹತ್ತಿಸಿ ವಿವಿಧ ಪೊಲೀಸ್ ಠಾಣೆಗಳಿಗೆ ಕರೆದೊಯ್ದು ಕೆಲವೇ ಗಂಟೆಗಳಲ್ಲಿ ಬಿಡುಗಡೆ ಮಾಡಲಾಗಿತ್ತು.

ಆದರೆ ವಶಕ್ಕೆ ಪಡೆದ ವ್ಯಕ್ತಿ ಯಾವ ಬಸ್ ನಲ್ಲಿದ್ದಾರೆ, ಬಸ್ ಎಲ್ಲಿಗೆ ಹೋಗುತ್ತಿದೆ, ಯಾವ ಠಾಣೆಯಲ್ಲಿ ಬಿಡುಗಡೆ ಮಾಡಲಾಗುತ್ತದೆ ಮತ್ತು ಅವರನ್ನು ಕರೆದುಕೊಂಡು ಹೋಗಲು ಯಾರು ಲಭ್ಯರಿದ್ದಾರೆ ಎಂಬುದು ಸ್ವಯಂಸೇವಕರಿಗೆ ತಿಳಿಯಬೇಕಾಗುತ್ತಿತ್ತು. ಈ ಸಮಸ್ಯೆಗೇ ‘ಡಿಟೈನೀ ಘರ್‌ ವಾಪ್ಸಿ’ ಪರಿಹಾರ.

►ಗೂಗಲ್ ಶೀಟ್ ನಿಂದ ಆರಂಭ

ಚೌಧರಿ ‘ವೈಬ್-ಕೋಡರ್’. ಈ ವ್ಯವಸ್ಥೆ ಮೊದಲಿಗೆ ಕೇವಲ ಗೂಗಲ್ ಶೀಟ್ ಆಗಿತ್ತು.“ನಾವು ಒಂದು ಗೂಗಲ್ ಶೀಟ್ ಸಿದ್ಧಪಡಿಸಿದೆವು,” ಎಂದು ಅವರು ‘ದಿ ಟೆಲಿಗ್ರಾಫ್ ಆನ್ಲೈನ್’ಗೆ ತಿಳಿಸಿದ್ದಾರೆ.

ಜಂತರ್ ಮಂತರ್ ನಲ್ಲಿ ನಡೆದ ಹಿಂದಿನ ‘ಕಾಕ್ರೋಚ್ ಜನತಾ ಪಾರ್ಟಿ’ ಪ್ರತಿಭಟನೆಯ ವೇಳೆ ಅಗತ್ಯ ಸಾಮಗ್ರಿ ಮತ್ತು ಸ್ವಯಂಸೇವಕರನ್ನು ಸಂಘಟಿಸಿದ ಅನುಭವದಿಂದ ಈ ಕಲ್ಪನೆ ಮೂಡಿತು. “ನಾನು ಅಲ್ಲಿನ ಪರಿಸ್ಥಿತಿಯನ್ನು ನೋಡಿದೆ. ಅದು ಅಂತರ್ಜಾಲದಲ್ಲಿ ನಾನು ಕಂಡಿದ್ದಕ್ಕಿಂತ ತೀರಾ ಭಿನ್ನವಾಗಿತ್ತು. ಆದರೆ ಜನರು ಪರಸ್ಪರ ಸಹಾಯ ಮಾಡುತ್ತಿದ್ದರು,” ಎಂದು ಅವರು ಹೇಳಿದ್ದಾರೆ.

ಮೊದಲಿಗೆ ತಮ್ಮ ಮನೆಯಿಂದಲೇ ಅಗತ್ಯ ಸಾಮಗ್ರಿಗಳನ್ನು ಒದಗಿಸಿದ ಅವರು, ಹೆಚ್ಚಿನ ಜನರಿಗೆ ನೆರವು ಬೇಕಾದಾಗ ಸ್ವಯಂಸೇವಕರ ಜಾಲವನ್ನು ರೂಪಿಸಿದರು. “ಮೊದಲ ದಿನ ಕೇವಲ ಸರಳ ಕೆಲಸಗಳಿದ್ದವು. ಆದರೆ ಐದನೇ ದಿನದ ವೇಳೆಗೆ ನಾನು ಒಂದು ಸಂಪೂರ್ಣ ವ್ಯವಸ್ಥೆಯನ್ನು ಸಿದ್ಧಪಡಿಸಿದೆ,” ಎಂದು ಅವರು ಹೇಳಿದ್ದಾರೆ. ಅವರ ಪ್ರಕಾರ, ಆರಂಭಿಕ ವ್ಯವಸ್ಥೆಯ ಮೂಲಕ 250ಕ್ಕೂ ಹೆಚ್ಚು ಜನರು ಮನೆ ತಲುಪಲು ನೆರವಾಗಿದೆ.

►‘ಮುಂಡ್ಕಾದಿಂದ ಮನೆವರೆಗೆ’

“ದಯವಿಟ್ಟು ಆ ಸ್ವಯಂಸೇವಕ ಚಾಲಕರಿಗೆ ಧನ್ಯವಾದ ಹೇಳುತ್ತೀರಾ? ಅವರು ತುಂಬಾ ವಿನಮ್ರರಾಗಿದ್ದರು. ಅವರು ನಮ್ಮನ್ನು ಮುಂಡ್ಕಾ ಪೊಲೀಸ್ ಠಾಣೆಯಿಂದ ಕರೆದುಕೊಂಡು ನನ್ನ ಸ್ನೇಹಿತನ ಮನೆಯ ಬಳಿ ಬಿಟ್ಟರು,” ಎಂದು ತಡರಾತ್ರಿ ಬಿಡುಗಡೆಯಾದ ಯುವ ಪ್ರತಿಭಟನಾಕಾರರೊಬ್ಬರು ಹೇಳಿದ್ದಾರೆ.

ಈ ವ್ಯವಸ್ಥೆ ಸಂಪೂರ್ಣ ಸ್ವಯಂಚಾಲಿತವಲ್ಲ. ಪೊಲೀಸ್ ಬಸ್ ಗಳನ್ನು ಸ್ವತಃ ಟ್ರ್ಯಾಕ್ ಮಾಡಲು, ಚಾಲಕರಿಗೆ ಸ್ವತಃ ಕರೆ ಮಾಡಲು ಅಥವಾ ಮಾನವ ಇನ್ಪುಟ್ ಇಲ್ಲದೆ ವಶಕ್ಕೆ ಪಡೆದವರನ್ನು ಪತ್ತೆಹಚ್ಚಲು ಡ್ಯಾಶ್ ಬೋರ್ಡ್ ಗೆ ಸಾಧ್ಯವಿಲ್ಲ.

ತಳಮಟ್ಟದಲ್ಲಿರುವವರು ಮಾಹಿತಿ ನೀಡಬೇಕು. ನಿರ್ವಾಹಕರು ಅದನ್ನು ಪರಿಶೀಲಿಸಬೇಕು. ಸ್ವಯಂಸೇವಕರು ಕಾರು ಚಲಾಯಿಸಿ ವ್ಯಕ್ತಿಯನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಬೇಕು. “ಎಲ್ಲವನ್ನೂ ಒಂದೇ ಸ್ಥಳದಲ್ಲಿ ಇರಿಸಲು ನಾನು ಈ ವ್ಯವಸ್ಥೆಯನ್ನು ಮಾಡಿದ್ದೇನೆ,” ಎಂದು ಚೌಧರಿ ಹೇಳಿದ್ದಾರೆ.

ಇಲ್ಲಿಯವರೆಗೆ ಡ್ಯಾಶ್ ಬೋರ್ಡ್ 10ರಿಂದ 15 ಜನರಿಗೆ ನೇರವಾಗಿ ನೆರವಾಗಿದೆ. ಇತರ ಸ್ವಯಂಸೇವಕ ಗುಂಪುಗಳೊಂದಿಗೆ ವೇದಿಕೆಯನ್ನು ಹಂಚಿಕೊಳ್ಳಲು ಹಾಗೂ ಆನ್ಲೈನ್ ನಲ್ಲಿ ಸಂಪರ್ಕಿಸಿರುವ ವೆಬ್ ಡೆವಲಪರ್ ಗಳ ಸಲಹೆ ಪಡೆದು ವ್ಯವಸ್ಥೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಚೌಧರಿ ಸಿದ್ಧರಿದ್ದಾರೆ.

ಆದರೆ ಮುಂದಿನ ಪ್ರಮುಖ ಸವಾಲು ಸ್ವಯಂಸೇವಕ ಚಾಲಕರ ಕೊರತೆ.

“ಸ್ವಯಂಸೇವಕರಾಗಿ ಸೇವೆ ಸಲ್ಲಿಸಲು ಸಿದ್ಧರಿರುವ ಚಾಲಕರು ನಮ್ಮಲ್ಲಿ ಕಡಿಮೆ ಇದ್ದಾರೆ ಎಂದು ನನಗೆ ಅನಿಸುತ್ತದೆ,” ಎಂದು ಅವರು ಹೇಳಿದ್ದಾರೆ.

ಸೌಜನ್ಯ: telegraphindia.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor