ಬಾಂಬೆ ಹೈಕೋರ್ಟ್‌ | Photo : PTI

ಪಣಜಿ: ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಪ್ರಕ್ರಿಯೆಯಡಿ ನಾಗರಿಕರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡುತ್ತಿರುವ ಕ್ರಮವನ್ನು ಬಾಂಬೆ ಹೈಕೋರ್ಟ್ನ ಗೋವಾ ಪೀಠವು ಸೋಮವಾರ ಪ್ರಶ್ನಿಸಿತು.

ಎಲ್ಲ ಭಾರತೀಯ ನಾಗರಿಕರೂ ಅಂತಿಮ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗುವುದನ್ನು ಖಚಿತಪಡಿಸಿಕೊಳ್ಳುವುದು ಭಾರತೀಯ ಚುನಾವಣಾ ಆಯೋಗದ (ECI) ಕರ್ತವ್ಯ ಎಂದು ಸುಪ್ರೀಂ ಕೋರ್ಟ್ ಹೇಳಿರುವುದನ್ನು ನ್ಯಾಯಮೂರ್ತಿ ವಾಲ್ಮೀಕಿ ಮೆನೆಜಸ್ ಮತ್ತು ನ್ಯಾಯಮೂರ್ತಿ ಅಮಿತ್ ಜಮ್ಸಂದೇಕರ್ ಅವರಿದ್ದ ವಿಭಾಗೀಯ ಪೀಠವು ಉಲ್ಲೇಖಿಸಿತು.

“ಸುಪ್ರೀಂ ಕೋರ್ಟ್ನ ತೀರ್ಪನ್ನು ಓದಿ. ಎಲ್ಲ ಭಾರತೀಯ ನಾಗರಿಕರ ಹೆಸರು ಪಟ್ಟಿಯಲ್ಲಿ ಇರುವುದನ್ನು ಖಚಿತಪಡಿಸಿಕೊಳ್ಳುವುದು ECIಯ ಕರ್ತವ್ಯ ಎಂದು ಅದರಲ್ಲಿ ಹೇಳಲಾಗಿದೆ. ನಾಗರಿಕರ ಹೆಸರನ್ನು ಪಟ್ಟಿಯಿಂದ ಕೈಬಿಡುತ್ತಿದ್ದರೆ SIRನಿಂದ ಏನು ಪ್ರಯೋಜನ? ಪಟ್ಟಿಯಿಂದ ತೆಗೆದುಹಾಕುತ್ತಿದ್ದರೆ ಈ ಸಂಪೂರ್ಣ SIR ಪ್ರಕ್ರಿಯೆಯ ಉದ್ದೇಶವೇನು?” ಎಂದು ಪೀಠವು ECIಯನ್ನು ಪ್ರಶ್ನಿಸಿತು.

SIR ಅಡಿಯಲ್ಲಿ ಸಿದ್ಧಪಡಿಸಲಾಗುತ್ತಿರುವ ಕರಡು ಮತದಾರರ ಪಟ್ಟಿ ಅಂತಿಮಗೊಳ್ಳುವವರೆಗೆ ಅಸ್ತಿತ್ವದಲ್ಲಿರುವ ಮತದಾರರ ಪಟ್ಟಿಯೇ ಜಾರಿಯಲ್ಲಿರುತ್ತದೆ ಎಂದು ‘ಮತದಾರರ ನೋಂದಣಿ ನಿಯಮಗಳು, 1960’ರ ನಿಬಂಧನೆಗಳು ಸ್ಪಷ್ಟಪಡಿಸುತ್ತವೆ ಎಂದು ನ್ಯಾಯಪೀಠ ಹೇಳಿತು.

ಹೀಗಾಗಿ, SIR ಪ್ರಕ್ರಿಯೆಯಲ್ಲಿ ಭರ್ತಿ ಮಾಡಿದ ‘ಎನ್ಯುಮರೇಷನ್ ಫಾರ್ಮ್’ ಸಲ್ಲಿಸದ ಕಾರಣಕ್ಕೆ ಅಸ್ತಿತ್ವದಲ್ಲಿರುವ ಮತದಾರರ ಪಟ್ಟಿಯಿಂದಲೇ ನಾಗರಿಕರ ಹೆಸರುಗಳನ್ನು ಕೈಬಿಡುತ್ತಿರುವ ಕ್ರಮವನ್ನು ನ್ಯಾಯಾಲಯ ಪ್ರಶ್ನಿಸಿತು.

“SIR ಮೂಲಕ ನೀವು ಮಾಡುತ್ತಿರುವುದು ಕೇವಲ ಕರಡು ಮತದಾರರ ಪಟ್ಟಿಯಿಂದ ಜನರನ್ನು ತೆಗೆದುಹಾಕುವುದಲ್ಲ; ಅಸ್ತಿತ್ವದಲ್ಲಿರುವ ಪಟ್ಟಿಯಿಂದಲೇ ಜನರನ್ನು ತೆಗೆದುಹಾಕುತ್ತಿದ್ದೀರಿ. SIR ನಡೆಯುತ್ತಿರುವುದರಿಂದ ಅಸ್ತಿತ್ವದಲ್ಲಿರುವ ಪಟ್ಟಿಯನ್ನು ಪರಿಗಣಿಸದೆ ಕೇವಲ ಕರಡು ಪಟ್ಟಿಯತ್ತ ಗಮನಹರಿಸಬೇಕು ಎಂಬುದು ನಿಮ್ಮ ವಾದ. ಆದರೆ ಅಸ್ತಿತ್ವದಲ್ಲಿರುವ ಪಟ್ಟಿಯನ್ನು ನಾವು ನಿರ್ಲಕ್ಷಿಸಲು ಸಾಧ್ಯವಿಲ್ಲ,” ಎಂದು ಪೀಠವು ಹೇಳಿತು.

ಸಲ್ಗಾಂವ್ಕರ್ ಕುಟುಂಬವೊಂದು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿತು. ಕುಟುಂಬದ ಸದಸ್ಯರು ವಿಳಾಸ ಬದಲಾವಣೆಗಾಗಿ ‘ಫಾರ್ಮ್ 8’ ಸಲ್ಲಿಸಿದ್ದರೂ, ಕರಡು ಮತದಾರರ ಪಟ್ಟಿಯಿಂದ ತಮ್ಮ ಹೆಸರುಗಳನ್ನು ಕೈಬಿಡಲಾಗಿದೆ ಎಂದು ಅರ್ಜಿಯಲ್ಲಿ ಆರೋಪಿಸಿದ್ದಾರೆ.

ಇದೇ ವೇಳೆ ECI ಪರ ವಕೀಲ ಗೌರೀಶ್ ಅಗ್ನಿSIR ಮಾರ್ಗಸೂಚಿಗಳಡಿ ಮತದಾರರು ಭರ್ತಿ ಮಾಡಿದ ಎನ್ಯುಮರೇಷನ್ ಫಾರ್ಮ್ ಸಲ್ಲಿಸುವುದು ಕಡ್ಡಾಯ ಎಂದು ವಾದ ಮಂಡಿಸಿದರು. ಆದರೆ, ಇಂತಹ ಎನ್ಯುಮರೇಷನ್ ಫಾರ್ಮ್ ದೇಶದ ಚುನಾವಣಾ ಇತಿಹಾಸದಲ್ಲಿ ಈ ಹಿಂದೆ ಅಸ್ತಿತ್ವದಲ್ಲಿರಲಿಲ್ಲ ಎಂದು ನ್ಯಾಯಪೀಠವು ಉಲ್ಲೇಖಿಸಿತು.

ವಿಳಾಸ ಬದಲಾಯಿಸಿಕೊಳ್ಳಲು ಬಯಸುವ ಮತದಾರರು ಹೊಸ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗಾಗಿ ‘ಫಾರ್ಮ್ 8’ ಜತೆಗೆ ಎನ್ಯುಮರೇಷನ್ ಫಾರ್ಮ್ ಸಲ್ಲಿಸಬೇಕು. ಯಾರಾದರೂ ಎನ್ಯುಮರೇಷನ್ ಫಾರ್ಮ್ ಸಲ್ಲಿಸಲು ವಿಫಲರಾದರೆ, ಅವರು ‘ಫಾರ್ಮ್ 6’ (ಹೊಸದಾಗಿ ಹೆಸರು ಸೇರ್ಪಡೆ) ಸಲ್ಲಿಸಬೇಕು ಎಂಬುದು ECIಯ ವಾದವಾಗಿತ್ತು.

ಎನ್ಯುಮರೇಷನ್ ಫಾರ್ಮ್ ಜತೆಗೆ ಘೋಷಣಾ ಪತ್ರವೂ ಇರುತ್ತದೆ. ಅದರಲ್ಲಿ ಸಹಿ ಮಾಡುವ ಮತದಾರರು ಅಸ್ತಿತ್ವದಲ್ಲಿರುವ ಮತದಾರರ ಪಟ್ಟಿಯಲ್ಲಿ ನಮೂದಿಸಿರುವ ಪ್ರದೇಶದಲ್ಲಿಯೇ ವಾಸಿಸುತ್ತಿದ್ದಾರೆ ಎಂದು ದೃಢೀಕರಿಸಬೇಕು. ಆದರೆ, ಮತದಾರರು ತಮ್ಮ ನಿವಾಸವನ್ನು ಬದಲಾಯಿಸಿದ್ದರೆ ಅಂತಹ ಘೋಷಣೆಗೆ ಸಹಿ ಮಾಡುವಂತೆ ಅವರನ್ನು ಒತ್ತಾಯಿಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಮೆನೆಜಸ್ ಹೇಳಿದರು.

“ಒಬ್ಬ ಮತದಾರರು ತಮ್ಮ ವಿಳಾಸ ಬದಲಾಗಿದೆ ಎಂದು ಹೇಳಿ ‘ಫಾರ್ಮ್ 8’ನೊಂದಿಗೆ ನಿಮ್ಮ ಬಳಿ ಬಂದಾಗ, ‘ಕರಡು ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿಲ್ಲ. ಆದ್ದರಿಂದ ನೀವು ‘ಫಾರ್ಮ್ 6’ ಭರ್ತಿ ಮಾಡಬೇಕು’ ಎಂದು ಹೇಳಲು ಸಾಧ್ಯವಿಲ್ಲ. ಎನ್ಯುಮರೇಷನ್ ಫಾರ್ಮ್ ನಲ್ಲಿ ವ್ಯಕ್ತಿಯು ಅಸ್ತಿತ್ವದಲ್ಲಿರುವ ಮತದಾರರ ಪಟ್ಟಿಯಲ್ಲಿ ನಮೂದಿಸಿರುವ ವಿಳಾಸದಲ್ಲಿಯೇ ವಾಸಿಸುತ್ತಿದ್ದಾರೆ ಎಂಬ ಘೋಷಣೆ ಇರುತ್ತದೆ,” ಎಂದು ಅವರು ಹೇಳಿದರು.

“ಯಾರಾದರೂ ತಮ್ಮ ನಿವಾಸವನ್ನು ಬದಲಾಯಿಸಿದ್ದರೆ, ಮೊದಲೇ ಭರ್ತಿ ಮಾಡಿದ ಎನ್ಯುಮರೇಷನ್ ಫಾರ್ಮ್ ಸಲ್ಲಿಸುವ ಮೂಲಕ ಸುಳ್ಳು ಘೋಷಣೆ ಮಾಡುವಂತೆ ಅವರನ್ನು ಒತ್ತಾಯಿಸಲು ಸಾಧ್ಯವೇ? ಆ ವ್ಯಕ್ತಿ ಸರಳವಾಗಿ ‘ಫಾರ್ಮ್ 8’ ಸಲ್ಲಿಸಬಾರದೇ? ಅವರ ಹೆಸರು ಈಗಾಗಲೇ ಅಸ್ತಿತ್ವದಲ್ಲಿರುವ ಪಟ್ಟಿಯಲ್ಲಿದೆ ಮತ್ತು ಅವರು ಕೇವಲ ವಿಳಾಸ ಬದಲಾಯಿಸಿಕೊಳ್ಳಲು ಬಯಸುತ್ತಿದ್ದಾರೆ. ಹಾಗಿದ್ದರೆ ಎನ್ಯುಮರೇಷನ್ ಫಾರ್ಮ್ ಅನ್ನು ಕಡ್ಡಾಯಗೊಳಿಸುವ ಅಗತ್ಯವೇನು?” ಎಂದು ಅವರು ಪ್ರಶ್ನಿಸಿದರು.

ನಿಯಮ 12ರ ಅಡಿಯಲ್ಲಿ ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ ಎಂಬುದನ್ನೂ ಪೀಠವು ಗಮನಿಸಿತು. ಹೀಗಿರುವಾಗ, ಮೊದಲೇ ಭರ್ತಿ ಮಾಡಿದ ಎನ್ಯುಮರೇಷನ್ ಫಾರ್ಮ್ ಕಡ್ಡಾಯವಾಗಿ ಸಲ್ಲಿಸುವ ಬದಲು ನಾಗರಿಕರು ನೇರವಾಗಿ ‘ಫಾರ್ಮ್ 8’ ಸಲ್ಲಿಸಲು ಏಕೆ ಅವಕಾಶ ನೀಡಬಾರದು ಎಂದು ಪ್ರಶ್ನಿಸಿತು.

“ಯಾರಾದರೂ ನಿರ್ದಿಷ್ಟ ವಿಳಾಸದಲ್ಲಿ ವಾಸಿಸುತ್ತಿಲ್ಲ ಎಂದಾದರೆ, ಮೊದಲೇ ಭರ್ತಿ ಮಾಡಿದ ಎನ್ಯುಮರೇಷನ್ ಫಾರ್ಮ್ ಸಲ್ಲಿಸಿ ಏಕೆ ಸುಳ್ಳು ಘೋಷಣೆ ಮಾಡಬೇಕು? ಆ ನಮೂನೆಯಲ್ಲಿ ‘X ವ್ಯಕ್ತಿಯು ಇಲ್ಲಿಯೇ ವಾಸಿಸುತ್ತಿದ್ದಾರೆ’ ಎಂಬ ಘೋಷಣೆ ಇರುತ್ತದೆ. ಅಂತಹ ಸುಳ್ಳು ಘೋಷಣೆ ಮಾಡುವಂತೆ ಯಾರನ್ನೂ ಒತ್ತಾಯಿಸಲು ಸಾಧ್ಯವಿಲ್ಲ,” ಎಂದು ಪೀಠವು ಹೇಳಿತು.

“ಯಾವುದೇ ನಾಗರಿಕರು ನಿಮ್ಮ ಎನ್ಯುಮರೇಷನ್ ಫಾರ್ಮ್ ಗೆ ಸಹಿ ಹಾಕಬಾರದು. ಅವರು ಸಹಿ ಹಾಕಲೇಬಾರದು. ನಿರ್ದಿಷ್ಟ ಕ್ಷೇತ್ರ ಅಥವಾ ವಾರ್ಡ್ನಲ್ಲಿ ವಾಸಿಸದ ವ್ಯಕ್ತಿಯೊಬ್ಬರು ಆ ಕ್ಷೇತ್ರದ ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳಲು ಹೇಗೆ ಅರ್ಜಿ ಸಲ್ಲಿಸಲು ಸಾಧ್ಯ?” ಎಂದು ನ್ಯಾಯಪೀಠ ಪ್ರಶ್ನಿಸಿತು.

ECI ಪರ ವಕೀಲ ಗೌರೀಶ್ ಅಗ್ನಿ ವಾದ ಮಂಡಿಸುತ್ತಿದ್ದ ಸಂದರ್ಭದಲ್ಲಿ ನ್ಯಾಯಾಲಯ ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿತು. ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳಿಸಿಕೊಳ್ಳಲು ಮತದಾರರು ಎನ್ಯುಮರೇಷನ್ ಫಾರ್ಮ್ ಸಲ್ಲಿಸುವುದು ಕಡ್ಡಾಯ ಎಂದು ECI ಪ್ರತಿಪಾದಿಸಿತು.

ಪ್ರಕರಣದ ವಿಚಾರಣೆಯನ್ನು ಮಂಗಳವಾರ ಅಕ್ಟೋಬರ್ 6ಕ್ಕೆ ಮುಂದೂಡಲಾಗಿದೆ.

ಸೌಜನ್ಯ: livelaw.in

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor