ಮುಂಬೈ ಉತ್ತರ ಸೆಂಟ್ರಲ್ ಅಭ್ಯರ್ಥಿಯಾಗಿ ವಕೀಲ ಉಜ್ವಲ್ ನಿಕಮ್ ಆಯ್ಕೆ ಮಾಡಿದ ಬಿಜೆಪಿ

Update: 2024-04-27 13:58 GMT

ಉಜ್ವಲ್ ದೇವರಾಯ್ ನಿಕಮ್ | PC: X \ ANI 

ಮುಂಬೈ : ಮುಂಬೈ ಉತ್ತರ ಸೆಂಟ್ರಲ್ ಲೋಕಸಭಾ ಸ್ಥಾನಕ್ಕೆ ಕೇಂದ್ರದ ಮಾಜಿ ಸಚಿವ ದಿವಂಗತ ಪ್ರಮೋದ್ ಮಹಾಜನ್ ಅವರ ಪುತ್ರಿ, ಹಾಲಿ ಲೋಕಸಭಾ ಸಂಸದೆ ಪೂನಂ ಮಹಾಜನ್ ಬದಲಿಗೆ ವಕೀಲ ಉಜ್ವಲ್ ದೇವರಾಯ್ ನಿಕಮ್ ಅವರನ್ನು ಬಿಜೆಪಿ ಆಯ್ಕೆ ಮಾಡಿದೆ.

2014ರಿಂದ ಈ ಕ್ಷೇತ್ರದಲ್ಲಿ ಪೂನಂ ಮಹಾಜನ್ ಸಂಸದೆಯಾಗಿದ್ದರು. 2014ರಲ್ಲಿ ಕಾಂಗ್ರೆಸ್‌ ನ ಪ್ರಿಯಾ ದತ್ ಸೋಲಿಸಿದ್ದ ಅವರು 2019ರಲ್ಲೂ ಜಯಭೇರಿ ಬಾರಿಸಿದ್ದರು. ಮುಂಬೈ ದಾಳಿ ಪ್ರಕರಣದಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿದ್ದ ಉಜ್ವಲ್ ನಿಕಮ್ ಅವರನ್ನು ಈ ಬಾರಿ ಬಿಜೆಪಿ ಆಯ್ಕೆ ಮಾಡಿದೆ. ದಾಳಿಯಲ್ಲಿ ಉಗ್ರರಿಗೆ ಕಠಿಣ ಶಿಕ್ಷೆ ವಿಧಿಸಿದ ನಂತರ, ನಿಕಮ್ ಅವರು ಹೆಚ್ಚು ಪ್ರಖ್ಯಾತಿ ಪಡೆದಿದ್ದರು. ಈ ಹಿಂದೆ ಅವರು ಬಿಜೆಪಿ ಯುವ ಘಟಕದ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದರು.

ಹಾಲಿ ಸಂಸದೆ ಪೂನಂ ಮಹಾಜನ್ ಅವರನ್ನು ಬದಲಾಯಿಸುವ ಕುರಿತು ಊಹಾಪೋಹಗಳು ಹರಿದಾಡುತ್ತಿತ್ತು ಎನ್ನಲಾಗಿದೆ. ಅಭ್ಯರ್ಥಿಯ ಹುಡುಕಾಟದಲ್ಲಿದ್ದ ಬಿಜೆಪಿ ಪಕ್ಷವು ನಿಕಮ್ ಅವರನ್ನು ಆಯ್ಕೆ ಮಾಡಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಕಾಂಗ್ರೆಸ್ ಪಕ್ಷವು ತನ್ನ ಮುಂಬೈ ಘಟಕದ ಮುಖ್ಯಸ್ಥೆ ಮತ್ತು ಧಾರವಿ ಶಾಸಕಿ ವರ್ಷಾ ಗಾಯಕ್ವಾಡ್ ಅವರನ್ನು ಮಹಾ ವಿಕಾಸ್ ಅಘಾಡಿ (ಎಂವಿಎ) ಅಭ್ಯರ್ಥಿಯಾಗಿ ನಾಮನಿರ್ದೇಶನ ಮಾಡಿದ ಎರಡು ದಿನಗಳ ನಂತರ, ಬಿಜೆಪಿ ತನ್ನ ಅಭ್ಯರ್ಥಿಯನ್ನು ಘೋಷಿಸಿದೆ.

ಮಹಾರಾಷ್ಟ್ರವು 48 ಸಂಸದರನ್ನು ಲೋಕಸಭೆಗೆ ಕಳುಹಿಸುತ್ತದೆ. 80 ಸಂಸದನ್ನು ಲೋಕಸಭೆಗೆ ಕಳುಹಿಸುವ ಉತ್ತರ ಪ್ರದೇಶದ ನಂತರ ಇದು ಅತಿ ದೊಡ್ಡ ಸಂಖ್ಯೆಯಾಗಿದೆ. ಮಹಾರಾಷ್ಟ್ರಕ್ಕೆ ಮೊದಲ ಮತ್ತು ಎರಡನೇ ಹಂತದ ಲೋಕಸಭಾ ಚುನಾವಣೆಗಳಲ್ಲಿ 13 ಸ್ಥಾನಗಳಿಗೆ ಮತದಾನ ಈಗಾಗಲೇ ನಡೆದಿದೆ. ಮೇ 7 ಮತ್ತು ಮೇ 20 ರ ನಡುವೆ ರಾಜ್ಯದಲ್ಲಿ ಇನ್ನೂ ಮೂರು ಹಂತಗಳಲ್ಲಿ ಮತದಾನ ನಡೆಯಲಿದೆ. ಮುಂಬೈನಲ್ಲಿ ಮತದಾನವು ಮೇ 20 ಕ್ಕೆ ನಿಗದಿಯಾಗಿದೆ.

2019ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ 25 ಸ್ಥಾನಗಳಲ್ಲಿ ಬಿಜೆಪಿ 23 ಸ್ಥಾನಗಳನ್ನು ಗೆದ್ದಿದ್ದರೆ, ಅವಿಭಜಿತ ಶಿವಸೇನೆ 23ರಲ್ಲಿ 18 ಸ್ಥಾನಗಳನ್ನು ತನ್ನದಾಗಿಸಿಕೊಂಡಿತ್ತು.

ಸೌಜನ್ಯ : thehindu.com

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News