×
Ad

ಲೋಕಸಭೆಯಲ್ಲಿ ಆಪರೇಷನ್ ಸಿಂಧೂರ್‌, ಪಹಲ್ಗಾಮ್ ದಾಳಿ ಕುರಿತು 16 ಗಂಟೆ ಕಾಲ ಚರ್ಚೆ: ಕೇಂದ್ರ ಸರಕಾರ ಒಪ್ಪಿಗೆ

Update: 2025-07-21 21:38 IST

Photo credit: PTI

ಹೊಸದಿಲ್ಲಿ, ಜು. 21: ಇತ್ತೀಚೆಗಿನ ಆಪರೇಷನ್ ಸಿಂಧೂರ್‌ ಹಾಗೂ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಕುರಿತು ಲೋಕಸಭೆಯಲ್ಲಿ 16 ಗಂಟೆಗಳ ದೀರ್ಘ ಕಾಲ ಚರ್ಚೆ ನಡೆಸಲು ಕೇಂದ್ರ ಸರಕಾರ ಸೋಮವಾರ ಒಪ್ಪಿಕೊಂಡಿದೆ.

ಈ ಚರ್ಚೆಯನ್ನು ಮುಂದಿನ ವಾರ ಕೈಗೆತ್ತಿಕೊಳ್ಳುವ ನಿರೀಕ್ಷೆ ಇದೆ. ಆದರೆ, ಈ ವಾರವೇ ಚರ್ಚೆಯನ್ನು ಆರಂಭಿಸುವಂತೆ ಪ್ರತಿಪಕ್ಷಗಳು ಒತ್ತಾಯಿಸುತ್ತಿವೆ. ಈ ಚರ್ಚೆಯ ಸಂದರ್ಭ ಪ್ರಧಾನಿ ನರೇಂದ್ರ ಮೋದಿ ಅವರು ವೈಯುಕ್ತಿಕವಾಗಿ ಪ್ರತಿಕ್ರಿಯಿಸಬೇಕು ಎಂದು ಕೂಡ ಅವು ಆಗ್ರಹಿಸಿವೆ.

ಈ ವಿಷಯ ಕಲಾಪ ಸಲಹಾ ಸಮಿತಿಯ ಸಭೆಯಲ್ಲಿ ಚರ್ಚೆಯಾಯಿತು. ಈ ಸಂದರ್ಭ ಸರಕಾರದ ಪ್ರತಿನಿಧಿಗಳು ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ ವಾರ ವಿದೇಶಕ್ಕೆ ಪ್ರಯಾಣಿಸಲಿದ್ದಾರೆ. ಆದುದರಿಂದ ಯಾವುದೇ ಚರ್ಚೆ ಅವರ ಉಪಸ್ಥಿತಿಯಲ್ಲಿ ಮುಂದಿನ ವಾರ ಮಾತ್ರ ನಡೆಯಲು ಸಾಧ್ಯ ಎಂದು ಸ್ಪಷ್ಟನೆ ನೀಡಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.

ಸರಕಾರದ ಈ ವಾರದ ಕಾರ್ಯಸೂಚಿಯಲ್ಲಿ ಈ ವಿಷಯದ ಕುರಿತು ಚರ್ಚೆಯ ತಮ್ಮ ಬೇಡಿಕೆಯನ್ನು ಉಲ್ಲೇಖಿಸದೇ ಇರುವುದಕ್ಕೆ ಪ್ರತಿಪಕ್ಷದ ಸದಸ್ಯರು ಪ್ರತಿಭಟನೆ ನಡೆಸಿದರು. ಗೃಹ ಸಚಿವರು ಹಾಗೂ ರಕ್ಷಣಾ ಸಚಿವರು ಕೂಡ ಪಾಲ್ಗೊಳ್ಳಬೇಕು ಎಂದು ಅವರು ಹೇಳಿದರು. ಕೆಲವು ಪ್ರತಿಪಕ್ಷದ ಸದಸ್ಯರು ಬಿಹಾರದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಹಾಗೂ ಮಣಿಪುರದ ಪರಿಸ್ಥಿತಿ ಕುರಿತು ಕೂಡ ಚರ್ಚೆ ನಡೆಸುವಂತೆ ಆಗ್ರಹಿಸಿದರು.

ಆಪರೇಷನ್ ಸಿಂಧೂರ್‌ ಹಾಗೂ ಇತರ ವಿಷಯಗಳ ಕುರಿತ ಚರ್ಚೆ ಆಗ್ರಹಿಸಿ ಪ್ರತಿಪಕ್ಷಗಳ ಗದ್ದಲದ ಪ್ರತಿಭಟನೆಯ ನಡುವೆ ಲೋಕಸಭೆಯ ಕಲಾಪವನ್ನು ಸೋಮವಾರ ಒಂದು ದಿನ ಮುಂದೂಡಲಾಯಿತು. ಮುಂಗಾರು ಅಧಿವೇಶನದ ಮೊದಲ ಕಲಾಪ ಮುಂದೂಡಿಕೆಯಾಗಿರುವುದು ಇದು ನಾಲ್ಕನೇ ಬಾರಿ. ಮೂರನೇ ಮುಂದೂಡಿಕೆಯ ಬಳಿಕ ಕೂಡಲೇ ಸಂಜೆ 4 ಗಂಟೆಗೆ ಸದನ ಮತ್ತೆ ಸೇರಿದಾಗ ಸಭಾಧ್ಯಕ್ಷರಾದ ದಿಲೀಪ್ ಸೈಕಿಯಾ ಅವರು, ಗೋವಾ ವಿಧಾನ ಸಭೆಯ ಸ್ಥಾನಗಳ ಮರು ಹೊಂದಾಣಿಕೆ ಮಸೂದೆಯನ್ನು ಕೈಗೆತ್ತಿಕೊಳ್ಳಲು ಅವಕಾಶ ನೀಡುವಂತೆ ಸದಸ್ಯರನ್ನು ಆಗ್ರಹಿಸಿದರು. ಆದರೆ, ಪ್ರತಿಪಕ್ಷದ ಸದಸ್ಯರು ಆಪರೇಷನ್ ಸಿಂಧೂರ್‌ ನ ಕುರಿತು ಚರ್ಚೆ ನಡೆಸುವ ತಮ್ಮ ಬೇಡಿಕೆಯ ಕುರಿತಂತೆ ಘೋಷಣೆಗಳನ್ನು ಕೂಗುವುದನ್ನು ಮುಂದುವರಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News