ಕೇಂದ್ರ ಸರಕಾರ ದಲಿತರ ಬಗ್ಗೆ ದ್ವೇಷ ಧೋರಣೆಯನ್ನು ಅನುಸರಿಸುತ್ತಿದೆ : ಪಿಣರಾಯಿ ಆರೋಪ
ಪಿಣರಾಯಿ ವಿಜಯನ್ | Photo: PTI
ಕಣ್ಣೂರು : ಬಿಜೆಪಿ ನೇತೃತ್ವದ ಕೇಂದ್ರವು ದೇಶದಲ್ಲಿಯ ದಲಿತ ಸಮುದಾಯದ ಬಗ್ಗೆ ದ್ವೇಷ ಧೋರಣೆಯನ್ನು ಅನುಸರಿಸುತ್ತಿದೆ ಎಂದು ಶನಿವಾರ ಇಲ್ಲಿ ಆರೋಪಿಸಿದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು, ದುರ್ಬಲ ವರ್ಗಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನಗಳನ್ನು ನಿಲ್ಲಿಸಿರುವುದು ಇದಕ್ಕೆ ಸ್ಪಷ್ಟ ಉದಾಹರಣೆಗಳಲ್ಲೊಂದಾಗಿದೆ ಎಂದು ಹೇಳಿದರು.
ಸಾಮಾಜಿಕ ನ್ಯಾಯವನ್ನು ಹಾಗೂ ದಲಿತ ಮತ್ತು ಬುಡಕಟ್ಟು ಸಮುದಾಯಗಳ ಸಾಮಾಜಿಕ-ಸಾಂಸ್ಕೃತಿಕ ಮತ್ತು ಆರ್ಥಿಕ ಏಳಿಗೆಯನ್ನು ಖಚಿತಪಡಿಸಲು ರಾಜ್ಯದ ಎಡರಂಗ ಸರಕಾರವು ಹಲವಾರು ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಿದೆ ಎಂದ ಅವರು, ಹಿಂದುಳಿದ ಸಮುದಾಯಗಳ ಜೀವನಮಟ್ಟವನ್ನು ಉತ್ತಮಗೊಳಿಸುವ ಜೊತೆಗೆ ಸಮಾಜದಲ್ಲಿ ಅಸ್ತಿತ್ವದಲ್ಲಿರುವ ಅಮಾನವೀಯ ಜಾತಿ ವ್ಯವಸ್ಥೆಯನ್ನು ಬೇರುಸಹಿತ ಕಿತ್ತೆಸೆಯಲು ರಾಜ್ಯ ಸರಕಾರವು ಪ್ರಯತ್ನಿಸುತ್ತಿದೆ ಎಂದು ಹೇಳಿದರು.
ವಿಜಯನ್ ಜಿಲ್ಲೆಯ ಬುಡಕಟ್ಟು ಮತ್ತು ದಲಿತ ಸಮುದಾಯಗಳಿಗೆ ಸೇರಿದ ಜನರೊಂದಿಗೆ ಮುಖಾಮುಖಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಹಿಂದುಳಿದ ವರ್ಗಗಳ ಮಕ್ಕಳ ಅಭ್ಯುದಯಕ್ಕಾಗಿ ತನ್ನ ಸರಕಾರವು ಜಾರಿಗೊಳಿಸುತ್ತಿರುವ ವಿವಿಧ ಯೋಜನೆಗಳನ್ನು ವಿವರಿಸಿದ ಅವರು, ಕೇಂದ್ರವು ಅವರನ್ನು ನಿರ್ಲಕ್ಷಿಸುತ್ತಿದೆ ಎಂದು ಆರೋಪಿಸಿದರು. ಕೇಂದ್ರವು ದುರ್ಬಲ ವರ್ಗಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನಗಳನ್ನು ಸ್ಥಗಿತಗೊಳಿಸಿದ್ದರೂ ರಾಜ್ಯ ಸರಕಾರವು ಈ ಯೋಜನೆಯನ್ನು ನಿಲ್ಲಿಸಿಲ್ಲ ಎಂದು ಬೆಟ್ಟು ಮಾಡಿದ ಅವರು, ಬದಲಾಗಿ 2.5 ಲಕ್ಷ ರೂ.ಗಳಿಗಿಂತ ಹೆಚ್ಚಿನ ಆದಾಯವನ್ನು ಹೊಂದಿರುವ ಕುಟುಂಬಗಳಿಗೆ ಸೇರಿದ ಎಸ್ಸಿ/ಎಸ್ಟಿ ವಿದ್ಯಾರ್ಥಿಗಳಿಗೆ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನದ ಸಂಪೂರ್ಣ ಮೊತ್ತವನ್ನು ಪಾವತಿಸಲು ಮತ್ತು ಎಂಟನೇ ತರಗತಿವರೆಗಿನ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನಗಳನ್ನು ಒದಗಿಸಲು ರಾಜ್ಯ ಸರಕಾರವು ನಿರ್ಧರಿಸಿದೆ. ಇದು ಸಾಮಾಜಿಕ ಬದ್ಧತೆಯಾಗಿದೆ. ಇವೆಲ್ಲವೂ ಸಮುದಾಯದ ದುರ್ಬಲ ವರ್ಗಗಳ ಬಗ್ಗೆ ರಾಜ್ಯಸರಕಾರವು ಹೊಂದಿರುವ ಕಾಳಜಿಯ ಪುರಾವೆಯಾಗಿವೆ ಎಂದರು.
ಐತಿಹಾಸಿಕ ಕಾರಣಗಳಿಂದಾಗಿ ಎಸ್ಸಿ/ಎಸ್ಟಿ ಸಮುದಾಯಗಳು ಸಾಮಾಜಿಕ ಪ್ರಗತಿಯಲ್ಲಿ ತೀರ ಹಿಂದುಳಿದಿದ್ದಾರೆ ಎಂದು ಬೆಟ್ಟು ಮಾಡಿದ ವಿಜಯನ್, ಪಟ್ಟಭದ್ರ ಹಿತಾಸಕ್ತಿಗಳೊಂದಿಗೆ ‘ಚಾತುರ್ವರ್ಣ’ ಮತ್ತು ಪುರೋಹಿತಶಾಹಿ ವ್ಯವಸ್ಥೆಗಳು ಈ ಕಾರಣಗಳನ್ನು ಸಮಾಜದ ಮೇಲೆ ಹೇರಿದ್ದವು ಎಂದು ಹೇಳಿದರು. ಈ ಅಸಮಾನತೆಗಳನ್ನು ನಿವಾರಿಸುವುದು ಆಧುನಿಕ ಸಮಾಜದ ಬಹು ದೊಡ್ಡ ಜವಾಬ್ದಾರಿಯಾಗಿದೆ ಮತ್ತು ಇದನ್ನು ಬಹುಮಟ್ಟಿಗೆ ಸಾಧಿಸಲು ಕೇರಳಕ್ಕೆ ಸಾಧ್ಯವಾಗಿದೆ ಎಂದರು.