×
Ad

ತಿರುಪತಿ ಲಡ್ಡಿಗೆ ಪ್ರಾಣಿಗಳ ಕೊಬ್ಬು ಬಳಕೆ: ಚಂದ್ರಬಾಬು ನಾಯ್ಡು ಆರೋಪ

Update: 2024-09-19 10:43 IST

ಸಾಂದರ್ಭಿಕ ಚಿತ್ರ (Photo: newindianexpress.com)

ಆಂಧ್ರಪ್ರದೇಶ: ತಿರುಪತಿಯಲ್ಲಿ ಪ್ರಸಾದವಾಗಿ ನೀಡುವ ಲಡ್ಡು ತಯಾರಿಕೆಗೆ ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂದು ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಆರೋಪಿಸಿದ್ದು, ಈ ಆರೋಪವನ್ನು ವೈಎಸ್ಆರ್ ಕಾಂಗ್ರೆಸ್ ನಿರಾಕರಿಸಿದೆ.

ಆಂಧ್ರಪ್ರದೇಶದಲ್ಲಿ ಈ ಹಿಂದೆ ಇದ್ದ ಜಗಮೋಹನ್ ನೇತೃತ್ವದ ವೈಎಸ್‌ಆರ್ ಕಾಂಗ್ರೆಸ್ ಸರ್ಕಾರವು ಪ್ರಸಿದ್ಧ ಶ್ರೀ ವೆಂಕಟೇಶ್ವರ ದೇವಸ್ಥಾನದ ಪ್ರಸಾದವಾಗಿ ನೀಡುವ ತಿರುಪತಿ ಲಡ್ಡುಗಳನ್ನು ತಯಾರಿಸಲು ಪ್ರಾಣಿಗಳ ಕೊಬ್ಬು ಮತ್ತು ಗುಣಮಟ್ಟವಿಲ್ಲದ ಪದಾರ್ಥಗಳನ್ನು ಬಳಸಿದೆ ಎಂದು ಆಂಧ್ರಪ್ರದೇಶ ಸಿಎಂ ಎನ್ ಚಂದ್ರಬಾಬು ನಾಯ್ಡು ಗಂಭೀರವಾದ ಆರೋಪ ಮಾಡಿದ್ದಾರೆ.

ಅಮರಾವತಿಯಲ್ಲಿ ಎನ್‌ಡಿಎ ಶಾಸಕಾಂಗ ಪಕ್ಷದ ಸಭೆಯಲ್ಲಿ ಮಾತನಾಡಿದ ನಾಯ್ಡು, ತಿರುಮಲದಲ್ಲಿ ಲಡ್ಡನ್ನು ಗುಣಮಟ್ಟವಿಲ್ಲದ ಪದಾರ್ಥಗಳಿಂದ ತಯಾರಿಸಲಾಗಿದೆ. ತುಪ್ಪದ ಬದಲು ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ. ಈಗ ಪ್ರಸಾದ ತಯಾರಿಕೆಗೆ ಶುದ್ಧ ತುಪ್ಪವನ್ನು ಮಾತ್ರ ಬಳಸಲಾಗುತ್ತಿದೆ ಎಂದು ಹೇಳಿದ್ದಾರೆ.

ಚಂದ್ರಬಾಬು ನಾಯ್ಡು ಅವರ ಆರೋಪದ ನಂತರ ಆಂಧ್ರಪ್ರದೇಶದ ಐಟಿ ಸಚಿವ ನಾರಾ ಲೋಕೇಶ್ ಕೂಡ ಈ ಬಗ್ಗೆ ಜಗನ್ ಮೋಹನ್ ರೆಡ್ಡಿ ಸರ್ಕಾರದ ವಿರುದ್ಧ ಟೀಕೆ ಮಾಡಿದ್ದಾರೆ.

ತಿರುಮಲದಲ್ಲಿರುವ ವೆಂಕಟೇಶ್ವರ ಸ್ವಾಮಿ ದೇವಾಲಯವು ನಮ್ಮ ಅತ್ಯಂತ ಪವಿತ್ರ ದೇವಾಲಯವಾಗಿದೆ. ವೈಎಸ್ ಜಗನ್ ಮೋಹನ್ ರೆಡ್ಡಿ ಆಡಳಿತವು ತಿರುಪತಿ ಪ್ರಸಾದದಲ್ಲಿ ತುಪ್ಪದ ಬದಲಿಗೆ ಪ್ರಾಣಿಗಳ ಕೊಬ್ಬನ್ನು ಬಳಸಿದೆ ಎಂದು ತಿಳಿದು ನನಗೆ ಆಘಾತವಾಗಿದೆ ಎಂದು ನಾರಾ ಲೋಕೇಶ್ ಎಕ್ಸ್ ನಲ್ಲಿ ಮಾಡಿದ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ವೈಎಸ್‌ಆರ್‌ಸಿಪಿ ಪಕ್ಷ, ನಾಯ್ಡು ಅವರ ಆರೋಪ ದುರುದ್ದೇಶಪೂರಿತವಾಗಿದೆ. ನಾಯ್ಡು ರಾಜಕೀಯ ಲಾಭಕ್ಕಾಗಿ ಯಾವ ಮಟ್ಟಕ್ಕೂ ಇಳಿಯುತ್ತಾರೆ ಎಂದು ಹೇಳಿಕೊಂಡಿದೆ.

ನಾಯ್ಡು ಅವರ ಹೇಳಿಕೆಯಿಂದ ಪವಿತ್ರ ತಿರುಮಲದ ಪಾವಿತ್ರ್ಯತೆ ಮತ್ತು ಕೋಟ್ಯಂತರ ಹಿಂದೂಗಳ ನಂಬಿಕೆಗೆ ಧಕ್ಕೆಯುಂಟಾಗಿದೆ ಎಂದು ವೈಎಸ್‌ಆರ್‌ಸಿಪಿ ನಾಯಕ ಮತ್ತು ರಾಜ್ಯಸಭಾ ಸದಸ್ಯ ಸುಬ್ಬಾ ರೆಡ್ಡಿ ಆರೋಪಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News