ಅರಾವಳಿ: ಸುಸ್ಥಿರ ಗಣಿಗಾರಿಕೆಗೆ ಕೇಂದ್ರದ ನಿರ್ವಹಣಾ ಯೋಜನೆ ಸಿದ್ಧ
ಪರಿಸರ ಸಚಿವ ಭೂಪೇಂದ್ರ ಯಾದವ್ - Photo : ANI
ಹೊಸದಿಲ್ಲಿ: ಅರಾವಳಿ ಪರ್ವತಶ್ರೇಣಿ ಕುರಿತ ಮೋದಿ ಸರಕಾರದ ವ್ಯಾಖ್ಯಾನವನ್ನು ಪರಿಸರ ಸಚಿವ ಭೂಪೇಂದ್ರ ಯಾದವ್ ಸಮರ್ಥಿಸಿಕೊಂಡಿದ್ದಾರೆ.
‘‘ಅರಾವಳಿ ಪರ್ವತಶ್ರೇಣಿಯು ನಾಲ್ಕು ರಾಜ್ಯಗಳ ಒಟ್ಟು 39 ಜಿಲ್ಲೆಗಳಲ್ಲಿ ಹರಡಿದೆ. ಅರಾವಳಿ ಎಂದರೆ ಕೇವಲ ಅರಣ್ಯಭೂಮಿ ಮಾತ್ರವೇ ಅಲ್ಲ, ಅವು ಕೋಟೆಗಳು, ಸರೋವರಗಳು, ಸಂರಕ್ಷಿತ ಅರಣ್ಯ ಪ್ರದೇಶಗಳು, ದೇವಾಲಯಗಳು ಹಾಗೂ ನಗರಗಳನ್ನು ಒಳಗೊಂಡಿದೆ. ಅವು ದೇಶಕ್ಕೆ ಅತ್ಯಗತ್ಯವಾಗಿರುವ ಅಮೂಲ್ಯ ಖನಿಜಗಳ ಆಗರವೂ ಆಗಿದೆ. ಸುಪ್ರೀಂಕೋರ್ಟ್ ತೀರ್ಪಿನ ಭಾಗವಾಗಿ, ಪರಿಸರ ಸಚಿವಾಲಯವು ಸುಸ್ಥಿರವಾದ ಗಣಿಗಾರಿಕೆಗಾಗಿನ ನಿರ್ವಹಣಾ ಯೋಜನೆಯನ್ನು ಸಿದ್ಧಪಡಿಸಿದೆ. ಸದ್ಯಕ್ಕೆ ನ್ಯಾಯಾಲವು ಕೇವಲ ಯೋಜನೆಯ ರೂಪುರೇಷೆಯನ್ನು ಸಿದ್ಧಪಡಿಸುವಂತೆ ಮಾತ್ರವೇ ಕೇಳಿದೆ. ಗಣಿಗಾರಿಕೆಗೆ ಇನ್ನೂ ಅನುಮತಿ ನೀಡಿಲ್ಲವೆಂದು ಅವರು ಹೇಳಿದರು.
ಅರಾವಳಿ ಬೆಟ್ಟಗಳ ಸಂರಕ್ಷಣೆ ಅತ್ಯಗತ್ಯವೆಂದು ಹೇಳಿದ ಸಚಿವರು, ಯದ್ವಾತದ್ವಾ ಗಣಿಗಾರಿಕೆಗೆ ಅವಕಾಶ ನೀಡಲಾಗುವುದಿಲ್ಲವೆಂದು ಹೇಳಿದರು.
ಕಾಂಗ್ರೆಸ್ ಖಂಡನೆ:
ರಾಜಸ್ಥಾನದ ಪ್ರತಿಪಕ್ಷ ನಾಯ, ಕಾಂಗ್ರೆಸ್ ನ ಟಿಕಾ ರಾಮ್ ಜೂಲ್ಲಿ ಅವರು ಸುಪ್ರೀಂಕೋರ್ಟ್ ನಿರ್ಧಾರವನ್ನು ವಿರೋಧಿಸಿದ್ದು, ಇದರಿಂದಾಗಿ ಅರಾವಳಿ ಪರ್ವತಶ್ರೇಣಿಗಳಿಗೆ ಹಾನಿಯಾಗಲಿದೆ ಹಾಗೂ ಅಲ್ಲಿನ ಪ್ರದೇಶವು ಮರುಭೂಮೀಕರಣಗೊಳ್ಳುವುದಕ್ಕೆ ಆಸ್ಪದ ನೀಡಲಿದೆ ಎಂದು ಕಳವಳ ವ್ಯಕ್ಚಪಡಿಸಿದ್ದಾರೆ.
ಒಂದೆಡೆ ಪ್ರಧಾನಿ ಮೋದಿಯವರು ‘ಏಕ್ ಪೇಡ್ ಮಾ ಕೆ ನಾಮ್’ ಆಂದೋಲನವನ್ನು ನಡೆಸುತ್ತಿದ್ದರೆ, ಇನ್ನೊಂದೆಡೆ ಅವರ ಗೆಳೆಯರಿಗಾಗಿ ಲಕ್ಷಾಂತರ ಮರಗಳನ್ನು ಕಡಿದುಹಾಕಲಾಗುತ್ತಿದೆ. ಒಂದು ವೇಳೆ ಅರಾವಳಿ ಪರ್ವತಶ್ರೇಣಿಯು ಇಲ್ಲದೇ ಇದ್ದಲ್ಲಿ ಇಡೀ ದಿಲ್ಲಿಯವರೆಗಿನ ಪ್ರದೇಶವು ಮರುಭೂಮಿಯಾಗಿರುತ್ತಿತ್ತು ಎಂಬ ವಾದವನ್ನು ವಿಜ್ಞಾನಿಗಳು ಕೂಡಾ ಒಪ್ಪಿಕೊಂಡಿದ್ದಾರೆಂದು ಅವರು ಹೇಳಿದ್ದಾರೆ.