ಭಾರತದ 5,149 ಶಾಲೆಗಳಲ್ಲಿ ಅಧ್ಯಾಪಕರು ಮತ್ತು ಕಟ್ಟಡವಿದ್ದರೂ ವಿದ್ಯಾರ್ಥಿಗಳಿಲ್ಲ!
ಸಾಂದರ್ಭಿಕ ಚಿತ್ರ | Photo Credit : PTI
ದೇಶದ 64,054 ಶಾಲೆಗಳಲ್ಲಿ 10ಕ್ಕಿಂತ ಕಡಿಮೆ ಮಕ್ಕಳ ದಾಖಲಾತಿಯಿದೆ. ಊರಿನಿಂದ ದೂರ ಇರುವುದು, ಕಳಪೆ ಶಾಲೆಗಳು ಮತ್ತು ವಲಸೆ ಮೊದಲಾದ ಕಾರಣಗಳಿಂದ ಸಾವಿರಾರು ಸರಕಾರಿ ಶಾಲೆಗಳಲ್ಲಿ ಕಟ್ಟಡ, ಅಧ್ಯಾಪಕರು ಇದ್ದರೂ ಮಕ್ಕಳ ದಾಖಲಾತಿ ಶೂನ್ಯ!
ಸಂಸತ್ತಿನ ಮುಂದೆ ಇತ್ತೀಚೆಗೆ ಇಡಲಾದ ಮಾಹಿತಿಗಳ ಪ್ರಕಾರ ದೇಶದ 5,149 ಸರಕಾರಿ ಶಾಲೆಗಳಲ್ಲಿ ಮಕ್ಕಳೇ ಇಲ್ಲ. ಈ ಪಾಳುಬಿದ್ದ ಶಾಲೆಗಳು ಕಾಗದದಲ್ಲಿ ಮಾತ್ರ ಇವೆ. ಸಣ್ಣ ಪಟ್ಟಣಗಳಲ್ಲಿ ಮತ್ತು ನಗರಗಳಲ್ಲಿ ಕಟ್ಟಡಗಳು ಇವೆ. ಅಧ್ಯಾಪಕರು ಇದ್ದಾರೆ ಮತ್ತು ಅನುದಾನಗಳನ್ನೂ ನೀಡಲಾಗುತ್ತಿದೆ. ಆದರೆ ಬಹುತೇಕ ಬಳಸದ ಕೋಣೆಗಳು, ಮಕ್ಕಳೇ ಇಲ್ಲ!
ದೇಶಾದ್ಯಂತ ಒಟ್ಟು 10.13 ಲಕ್ಷ ಸರಕಾರಿ ಶಾಲೆಗಳು ಇವೆ. ದತ್ತಾಂಶಗಳ ಪ್ರಕಾರ ಪಾಳುಬಿದ್ದ ಶಾಲೆಗಳಲ್ಲಿ ಶೇ 70ರಷ್ಟು ಶಾಲೆಗಳು ತೆಲಂಗಾಣ ಮತ್ತು ಪಶ್ಚಿಮ ಬಂಗಾಳದಲ್ಲಿವೆ. 10.13 ಲಕ್ಷ ಶಾಲೆಗಳಲ್ಲಿ 64,054 ಶಾಲೆಗಳಲ್ಲಿ 10ಕ್ಕಿಂತ ಕಡಿಮೆ ಮಕ್ಕಳ ದಾಖಲಾತಿಯಿದೆ. 1.44 ಲಕ್ಷ ಅದ್ಯಾಪಕರು ಈ ಶಾಲೆಗಳಲ್ಲಿ ಕೆಲಸ ಮಾಡುತ್ತಿದ್ದರೂ, ಶೂನ್ಯ ಅಥವಾ ಶೂನ್ಯಕ್ಕೆ ಸಮೀಪದ ದಾಖಲಾತಿಯಿದೆ.
ಕಳಪೆ ಗುಣಮಟ್ಟ, ವಲಸೆ ಮುಖ್ಯ ಕಾರಣ
2022-23ರ ನಡುವೆ 52,309 ಶಾಲೆಗಳಲ್ಲಿ 10 ಅಥವಾ ಶೂನ್ಯ ವಿದ್ಯಾರ್ಥಿಗಳಿದ್ದರು. 2024-25ರಲ್ಲಿ ಈ ಸಂಖ್ಯೆ 65,054ಕ್ಕೇರಿದೆ. ಅಂದರೆ ಶೇ 24ರಷ್ಟು ಏರಿಕೆಯಾಗಿದೆ. ಶಾಲೆಗಳು ವಸತಿ ಪ್ರದೇಶಗಳಿಂದ ದೂರವಿರುವುದು, ಗುಣಮಟ್ಟ ಇಲ್ಲದಿರುವುದು, ವಲಸೆ ಅಥವಾ ಆಡಳಿತ ಸರಿಯಾಗಿಲ್ಲದಿರುವುದೇ ಪೋಷಕರು ಮಕ್ಕಳನ್ನು ಸೇರಿಸದೆ ಇರಲು ಮುಖ್ಯ ಕಾರಣ. ಕೆಲವೆಡೆ ಶಾಲೆಗಳಿದ್ದರೆ ಮಕ್ಕಳು ಬರುವುದಿಲ್ಲ. ಇನ್ನು ಕೆಲವಡೆ ಮಕ್ಕಳಿದ್ದರೂ ಶಾಲೆ ದೂರವಿದೆ, ಕಳಪೆ ಅಥವಾ ಆದ್ಯತೆಗೆ ತಕ್ಕಂತಿಲ್ಲ.
ಶೂನ್ಯ ಮಕ್ಕಳಿರುವ 5,149 ಶಾಲೆಗಳಲ್ಲಿ ಸುಮಾರು 3,600-3,700ರಷ್ಟು ಪಶ್ಚಿಮ ಬಂಗಾಳ ಮತ್ತು ತೆಲಂಗಾಣದಲ್ಲಿವೆ. ಭಾರತಾದ್ಯಂತ ಕನಿಷ್ಠ 100 ಜಿಲ್ಲೆಗಳಲ್ಲಿ 10 ಅಥವಾ ಶೂನ್ಯದ ನಡುವೆ ಮಕ್ಕಳಿರುವ ಶಾಲೆಗಳಿವೆ. ಇವುಗಳಲ್ಲಿ 33 ಜಿಲ್ಲೆಗಳು ತೆಲಂಗಾಣದಲ್ಲಿವೆ. 22 ಜಿಲ್ಲೆಗಳು ಪಶ್ಚಿಮ ಬಂಗಾಳದಲ್ಲಿವೆ.
ಐದು ರಾಜ್ಯಗಳ ಪಾಳುಬಿದ್ದ ಶಾಲೆಗಳು
ಪಶ್ಚಿಮ ಬಂಗಾಳದಲ್ಲಿ 6,703 ಶಾಲೆಗಳಲ್ಲಿ ಹತ್ತು ಅಥವಾ ಅದಕ್ಕಿಂತ ಕಡಿಮೆ ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಆದರೆ ಈ ಶಾಲೆಗಳಲ್ಲಿ 27,348 ಅದ್ಯಾಪಕರು ಕರ್ತವ್ಯದಲ್ಲಿದ್ದಾರೆ! ಗ್ರಾಮೀಣ ಮತ್ತು ಅರೆನಗರ ಜಿಲ್ಲೆಗಳಲ್ಲಿ ಅತಿಯಾದ ವಿದ್ಯಾರ್ಥಿಗಳು ಇರುವುದು, ಕುಟುಂಬಗಳು ಖಾಸಗಿ ಅಥವಾ ಅನುದಾನಿತ ಶಾಲೆಗಳಿಗೆ ಮಕ್ಕಳನ್ನು ಸೇರಿಸುತ್ತಿರುವುದು ಮುಖ್ಯ ಕಾರಣವಾಗಿದೆ.
ಉತ್ತರ ಪ್ರದೇಶದಲ್ಲಿ 6,561 ಶಾಲೆಗಳಲ್ಲಿ ಹತ್ತು ಅಥವಾ ಅದಕ್ಕಿಂತ ಕಡಿಮೆ ವಿದ್ಯಾರ್ಥಿಗಳಿದ್ದಾರೆ. ಆದರೆ ಈ ಶಾಲೆಗಳಲ್ಲಿ 22,166 ಅದ್ಯಾಪಕರು ಕರ್ತವ್ಯದಲ್ಲಿದ್ದಾರೆ! ಸರ್ಕಾರಿ ಶಾಲೆಗಳು ಒಂದೆಡೆ ಗುಂಪುಗೂಡಿರುವುದು ಕಾರಣ. ರಾಜ್ಯದ 1.37 ಲಕ್ಷ ಸರಕಾರಿ ಶಾಲೆಗಳ ಕ್ರೂಢೀಕರಣವೇ ದೊಡ್ಡ ಸಮಸ್ಯೆ.
ಮಹಾರಾಷ್ಟ್ರದಲ್ಲಿ 6,552 ಶಾಲೆಗಳಲ್ಲಿ ಹತ್ತು ಅಥವಾ ಅದಕ್ಕಿಂತ ಕಡಿಮೆ ವಿದ್ಯಾರ್ಥಿಗಳಿದ್ದಾರೆ. ಆದರೆ ಈ ಶಾಲೆಗಳಲ್ಲಿ 11,056 ಅದ್ಯಾಪಕರು ಕರ್ತವ್ಯದಲ್ಲಿದ್ದಾರೆ! ವಲಸೆಯಿಂದಾಗಿ ಬುಡಕಟ್ಟು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಮಕ್ಕಳು ಕಡಿಮೆಯಾಗಿದ್ದಾರೆ. ಹಲವು ಜಿಲ್ಲೆಗಳು ಶೂನ್ಯ ದಾಖಲಾತಿ ಶಾಲೆಗಳನ್ನು ವರದಿ ಮಾಡಿದ್ದರೂ ಒಟ್ಟಾರೆ ದಾಖಲಾತಿ ಹೆಚ್ಚಾಗಿದೆ. ಈ ಪ್ರವೃತ್ತಿ ಅಗತ್ಯವಿಲ್ಲದೆಡೆ ಶಾಲೆಗಳು ಇರುವುದನ್ನು ಸೂಚಿಸುತ್ತದೆ.
ರಾಜಸ್ಥಾನದಲ್ಲಿ 5,235 ಶಾಲೆಗಳಲ್ಲಿ ಹತ್ತು ಅಥವಾ ಅದಕ್ಕಿಂತ ಕಡಿಮೆ ವಿದ್ಯಾರ್ಥಿಗಳಿದ್ದಾರೆ. ಆದರೆ ಈ ಶಾಲೆಗಳಲ್ಲಿ 11,620 ಅದ್ಯಾಪಕರು ಕರ್ತವ್ಯದಲ್ಲಿದ್ದಾರೆ! ಸರಕಾರಿ ಶಾಲೆಗಳು ವಸತಿ ಪ್ರದೇಶದಿಂದ ದೂರವಿರುವುದು, ವಲಸೆ ಮುಖ್ಯ ಕಾರಣ. ಆದರೆ ಇತ್ತೀಚೆಗಿನ ವರ್ಷಗಳಲ್ಲಿ ರಾಜಸ್ಥಾನದಲ್ಲಿ ಶಾಲೆಗಳ ಸಂಖ್ಯೆ ಜಾಸ್ತಿಯಾಗಿದೆ.
ತೆಲಂಗಾಣದಲ್ಲಿ 5,021 ಶಾಲೆಗಳಲ್ಲಿ ಹತ್ತು ಅಥವಾ ಅದಕ್ಕಿಂತ ಕಡಿಮೆ ವಿದ್ಯಾರ್ಥಿಗಳಿದ್ದಾರೆ. ಆದರೆ ಈ ಶಾಲೆಗಳಲ್ಲಿ 4,850 ಅದ್ಯಾಪಕರು ಕರ್ತವ್ಯದಲ್ಲಿದ್ದಾರೆ! ಇಲ್ಲಿ ಒಟ್ಟು ಇರುವ ಶಾಲೆಗಳೇ 30,000. ತೆಲಂಗಾಣದ ಎಲ್ಲಾ 33 ಜಿಲ್ಲೆಗಳಲ್ಲಿ ಹತ್ತು ಅಥವಾ ಅದಕ್ಕಿಂತ ಹೆಚ್ಚು ಶೂನ್ಯ ವಿದ್ಯಾರ್ಥಿಗಳಿರುವ ಶಾಲೆಗಳಿವೆ.
ತೆಲಂಗಾಣದಲ್ಲಿ ಅತಿ ಹೆಚ್ಚು ಶೂನ್ಯ ದಾಖಲಾತಿ ಶಾಲೆಗಳೆಂದರೆ ನಲಗೊಂಡ (315), ಮಹಾಬುಬಾಬಾದ್ (167), ವಾರಂಗಲ್ (135), ರಂಗಾ ರೆಡ್ಡಿ (99), ಸಿದ್ದಿಪೇಟೆ (84), ನಾಗರಕರ್ನೂಲ್ (81).
ಇದೇನು ಜನಸಂಖ್ಯೆಯಿಂದಾದ ಕೊರತೆಯಲ್ಲ. ಈ ಜಿಲ್ಲೆಗಳಲ್ಲಿ ಹತ್ತು ಸಾವಿರದ ಮೇಲೆ ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಅಂದರೆ ಮಕ್ಕಳೂ ಇದ್ದಾರೆ, ಶಾಲೆಗಳೂ ಇವೆ. ಆದರೆ ಸರಕಾರಿ ಶಾಲೆ ತೊರೆದು ಬೇರೆ ಶಾಲೆಗಳಲ್ಲಿ ಓದುತ್ತಿದ್ದಾರೆ. ಶಾಲೆಗಳು ಬಹಳ ದೂರ ಇರುವುದು, ಕಳಪೆ ಗುಣಮಟ್ಟದಲ್ಲಿರುವುದರಿಂದ ಫೋಷಕರು ಆದ್ಯತೆ ನೀಡುವುದಿಲ್ಲ.