ಚಂದ್ರಶೇಖರ ಕಂಬಾರಗೆ ರಾಮನಾಥ ಗೋಯಂಕಾ ‘ಜೀವಮಾನ ಸಾಧನೆ’ ಪ್ರಶಸ್ತಿ
ನಾಲ್ವರು ಲೇಖಕರಿಗೆ ಪ್ರಶಸ್ತಿ ಪ್ರದಾನ
Photo Credit : newindianexpress.com
ಚೆನ್ನೈ, ಜ. 2: ಭಾರತದ ಅತ್ಯಂತ ಗೌರವಾನ್ವಿತ ಸಾಹಿತಿ, ಕನ್ನಡದ ಡಾ. ಚಂದ್ರಶೇಖರ ಕಂಬಾರ ಅವರಿಗೆ ‘ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್’ನ 2025ರ ಸಾಲಿನ ರಾಮನಾಥ ಗೋಯಂಕಾ ಸಾಹಿತ್ಯ ಸಮ್ಮಾನ ‘ಜೀವಮಾನ ಸಾಧನೆ’ ಪ್ರಶಸ್ತಿಯನ್ನು ನೀಡಲಾಗಿದೆ.
ಚೆನ್ನೈಯಲ್ಲಿ ಶುಕ್ರವಾರ ರಾಮನಾಥ ಗೋಯಂಕಾ ಸಾಹಿತ್ಯ ಸಮ್ಮಾನ ಪ್ರಶಸ್ತಿಗಳನ್ನು ನಾಲ್ಕು ವಿಭಾಗಗಳಲ್ಲಿ ನಾಲ್ವರು ಲೇಖಕರಿಗೆ ಪ್ರದಾನ ಮಾಡಲಾಯಿತು. ಈ ಸಂದರ್ಭದಲ್ಲಿ ಉಪರಾಜ್ಯಪಾಲ ಸಿ.ಪಿ. ರಾಧಾಕೃಷ್ಣನ್ ಮುಖ್ಯ ಅತಿಥಿಯಾಗಿದ್ದರು.
ಸಾಹಿತಿ, ಚಿಂತಕ, ನಾಟಕಕಾರ, ಜನಪದ ವಿದ್ವಾಂಸ ಹಾಗೂ ರಂಗಭೂಮಿ ಹೋರಾಟಗಾರರಾದ ಚಂದ್ರಶೇಖರ ಕಂಬಾರರ ಕೃತಿಗಳು ಜಾನಪದ ಪರಂಪರೆಗಳು ಮತ್ತು ಮೌಖಿಕ ಇತಿಹಾಸಗಳಿಂದ ಆಳವಾಗಿ ಪ್ರಭಾವಿತಗೊಂಡಿವೆ. ಅವರ ಕೃತಿಗಳು ಶಾಸ್ತ್ರೀಯ ಮತ್ತು ಸಮಕಾಲೀನ ಸಾಹಿತ್ಯಗಳ ನಡುವಿನ ಅಂತರವನ್ನು ತುಂಬುತ್ತವೆ. ದಶಕಗಳ ಅವಧಿಯಲ್ಲಿ ಅವರ ಬರವಣಿಗೆ, ವಿದ್ವತ್ತು ಮತ್ತು ಸಾಂಸ್ಕೃತಿಕ ನಾಯಕತ್ವವು ಕನ್ನಡ ಸಾಹಿತ್ಯ ಮತ್ತು ಭಾರತೀಯ ರಂಗಭೂಮಿಯ ಸೀಮೆಗಳನ್ನು ವಿಸ್ತರಿಸಿದೆ.
ರಾಮನಾಥ ಗೋಯಂಕಾ ಸಾಹಿತ್ಯ ಸಮ್ಮಾನ ‘ಶ್ರೇಷ್ಠ ಕತೆಯೇತರ’ ಪ್ರಶಸ್ತಿಯನ್ನು ಇಂಗ್ಲಿಷ್‌ನಲ್ಲಿ ಬರೆಯುವ ಲೇಖಕ ಸುದೀಪ್ ಚಕ್ರವರ್ತಿ ಅವರ Fallen City: A Double Murder, Political Insanity, and Delhi's Descent from Grace ಎಂಬ ಕೃತಿಗೆ ನೀಡಲಾಗಿದೆ.
ಈ ಪುಸ್ತಕವು ವಿಧಿವಿಜ್ಞಾನ ವರದಿಗಾರಿಕೆಯನ್ನು ನೈತಿಕತೆಯೊಂದಿಗೆ ಬೆರೆಸಿಕೊಂಡು, ಭಯಾನಕ ಅಪರಾಧವೊಂದರ ಮೂಲಕ ದಿಲ್ಲಿಯ ಪೌರ ಸಂಸ್ಥೆಗಳ ನೈತಿಕ ಅಧಃಪತನ ಮತ್ತು ಸಾರ್ವಜನಿಕರ ನೈತಿಕ ಪ್ರಜ್ಞೆಯಲ್ಲಿ ಉಂಟಾದ ಕುಸಿತವನ್ನು ಪರಿಶೀಲಿಸುತ್ತದೆ.
ರಾಮನಾಥ ಗೋಯಂಕಾ ಸಾಹಿತ್ಯ ಸಮ್ಮಾನ ‘ಶ್ರೇಷ್ಠ ಕತೆ’ ಪ್ರಶಸ್ತಿಯನ್ನು ಸುಬಿ ತಾಬ ಪಡೆದಿದ್ದಾರೆ. ಅವರ Tales from the Dawn-Lit Mountains: Stories from Arunachal Pradesh ಎಂಬ ಮೌಖಿಕ ಸಂಪ್ರದಾಯಗಳ ಆಧಾರಿತ ಕತೆಗಳ ಸಂಕಲನಕ್ಕೆ ಈ ಪ್ರಶಸ್ತಿ ಲಭಿಸಿದೆ.
ರಾಮನಾಥ ಗೋಯಂಕಾ ಸಾಹಿತ್ಯ ಸಮ್ಮಾನ ‘ಶ್ರೇಷ್ಠ ಪಾದಾರ್ಪಣೆ’ ಪ್ರಶಸ್ತಿಯನ್ನು ನೇಹಾ ದೀಕ್ಷಿತ್ ಅವರಿಗೆ ನೀಡಲಾಗಿದೆ. ಅವರ The Many Lives of Syeda X: The Story of an Unknown Indian ಕೃತಿಯು ಈ ಗೌರವವನ್ನು ಪಡೆದುಕೊಂಡಿದೆ.
ಅನಾಮಧೇಯ ಮಹಿಳೆಯೊಬ್ಬರ ಕಥೆಯ ಮೂಲಕ, ಈ ಪುಸ್ತಕವು ಸಮಕಾಲೀನ ಭಾರತದಲ್ಲಿನ ಲಿಂಗ, ಬಡತನ ಮತ್ತು ಸಾಂಸ್ಥಿಕ ಶಕ್ತಿಗಳ ನಡುವಿನ ಪರಸ್ಪರ ಸಂಘರ್ಷಗಳನ್ನು ಅನಾವರಣಗೊಳಿಸುತ್ತದೆ.