ಚತ್ತೀಸ್ ಗಡ 3 ಸಾವಿರ ಕೋಟಿ ರೂ. ಮದ್ಯ ಹಗರಣ; 81 ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್
ಸಾಂದರ್ಭಿಕ ಚಿತ್ರ | Photo Credit : freepik.com
ರಾಯ್ ಪುರ,ಡಿ.27: 3000 ಕೋಟಿ ರೂ. ವೌಲ್ಯದ ಮದ್ಯವಂಚನೆ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯವು 29,800 ಪುಟಗಳ ದಾಖಲೆಗಳನ್ನು ರಾಯಪುರದ ಕಪ್ಪುಹಣ ಬಿಳುಪು ತಡೆ ಕಾಯ್ದೆ (ಪಿಎಂಎಲ್‌ಎ) ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದ್ದು, ಒಟ್ಟು 81 ಮಂದಿಯನ್ನು ಆರೋಪಿಗಳೆಂದು ಹೆಸರಿಸಲಾಗಿದೆ.
ಮದ್ಯ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾದವರಲ್ಲಿ ಮಾಜಿ ಐಎಎಸ್ ಅಧಿಕಾರಿ ಅನಿಲ್ ಟುಟೇಜಾ, ಆರು ಸಲ ಕಾಂಗ್ರೆಸ್ ಶಾಸಕನಾಗಿ ಆಯ್ಕೆಯಾಗಿರುವ ಕವಾಸಿ ಲಖ್ಮಾ, ಮುಖ್ಯಮಂತ್ರಿ ಕಚೇರಿಯ ಮಾಜಿ ಉಪ ಕಾರ್ಯದರ್ಶಿ ಸೌಮ್ಯಾ ಚೌರಾಸಿಯಾ, ನಿವೃತ್ತ ಐಎಎಸ್ ಅಧಿಕಾರಿ ನಿರಂಜನ ದಾಸ್,ಅಬಕಾರಿ ಇಲಾಖೆಯ ವಿಶೇಷ ಕಾರ್ಯದರ್ಶಿ ಅರುಣ್ ಪತಿ ತ್ರಿಪಾಠಿ, ಉದ್ಮಿ ಅನ್ವರ್ ದೆಬರ್ ಅವರೂ ಒಳಗೊಂಡಿದ್ದಾರೆ. ಚತ್ತೀಸ್‌ಗಡದ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಶಾಸಕ ಭೂಪೇಶ್ ಬಘೇಲ್ ಅವರನ್ನು ಜಾರಿ ನಿರ್ದೇಶನಾಲಯವು ದೋಷಾರೋಪಪಟ್ಟಿಯಲ್ಲಿ ಹೆಸರಿಸಿಲ್ಲ.
2023ರ ಚತ್ತೀಸ್ ಗಡ ವಿಧಾನಸಭಾ ಚುನಾವಣೆ ಸಂದರ್ಭ ರಾಜಕೀಯ ಪಕ್ಷವೊಂದಕ್ಕೆ ನಿಧಿಯನ್ನು ಸಂಗ್ರಹಿಸಿಕೊಡುವಲ್ಲಿ ರಾಜ್ಯದ ಅಬಕಾರಿ ಇಲಾಖೆಯು ಪ್ರಮುಖ ಪಾತ್ರ ವಹಿಸಿದೆಯೆಂದು ಕೇಂದ್ರೀಯ ತನಿಖಾ ಏಜೆನ್ಸಿ ಆರೋಪಿಸಿದೆ.
ಚತ್ತೀಸ್ ಗಡದ ಅಬಕಾರಿ ಅಧಿಕಾರಿಗಳಾದ ದಿನಕರ್ ವಾಸ್ನಿಕ್, ನವೀನ್ ಸಿಂಗ್ ಥೋಮಾರ್, ವಿಕಾಸ್ ಗೋಸ್ವಾಮಿ, ನೀತು ನೊತಾನಿ, ಇಕ್ಬಾಲ್‌ಖಾನ್ ಅವರಿಗೆ ನಿಧಿಯನ್ನು ಸಂಗ್ರಹಿಸುವ ಹೊಣೆಗಾರಿಕೆಯನ್ನು ನೀಡಲಾಗಿತ್ತು. ರಾಜ್ಯದ ಸುಮಾರು 15 ಜಿಲ್ಲೆಗಳಲ್ಲಿ ಮದ್ಯವಂಚನೆಗಳನ್ನು ನಡೆಸಲಾಗುತ್ತಿತ್ತು. ವಿಧಾನಸಭಾ ಚುನಾವಣೆ ಸಂದರ್ಭ ಅಭ್ಯರ್ಥಿಗಳಿಗೆ ಮದ್ಯಪೂರೈಕೆಯ ವಿತರಣೆಯನ್ನು ಕೂಡಾ ಏರ್ಪಾಡು ಮಾಡಲಾಗಿತ್ತು ಎಂದು ದೋಷಾರೋಪಪಟ್ಟಿಯಲ್ಲಿ ಆಪಾದಿಸಲಾಗಿದೆ.
ಮಾಜಿ ಮುಖ್ಯಮಂತ್ರಿ ರೂಪೇಶ್ ಬಘೇಲ್ ಅವರ ಪುತ್ರ ಚೈತನ್ಯ ಹಾಗೂ ಮಾಜಿ ಐಎಎಸ್ ಅಧಿಕಾರಿಯ ಪುತ್ರ ಯಶ್ ಟುಟೇಜಾ ಈ ಹಗರಣದ ಪ್ರಮುಖ ಆರೋಪಿಗಳಾಗಿದ್ದಾರೆ.
ಇವರ ನೇತೃತ್ವದ ಜಾಲವು ಚತ್ತೀಸ್‌ಗಡದ ಪ್ರಮುಖ ಇಲಾಖೆಗಳ ಉನ್ನತ ಮಟ್ಟದ ಆಡಳಿತವನ್ನು ನಿಯಂತ್ರಿಸುವ ಮೂಲಕ ಲಂಚಗಳನ್ನು ಸಂಗ್ರಹಿಸುತ್ತಿತ್ತು ಎಂದು ಈಡಿ ಆಪಾದಿಸಿದೆ.