Uttar Pradesh | ಲಕ್ನೋದಲ್ಲಿ ಬಿಜೆಪಿಯ ಬ್ರಾಹ್ಮಣ ಶಾಸಕರ ಸಭೆಗೆ ವಿರೋಧ; ಶಾಸಕರಿಂದ ಜಾತಿ ಆಧಾರಿತ ಸಭೆಗಳ ವಿರುದ್ಧ ಬಿಜೆಪಿ ಕಠಿಣ ಎಚ್ಚರಿಕೆ
Image Credit: X/@mppchaudhary
ಹೊಸದಿಲ್ಲಿ, ಡಿ.27: ಜಾತಿ ಆಧಾರಿತವಾಗಿ ಯಾವುದೇ ಸಭೆಗಳನ್ನು ನಡೆಸದಂತೆ ಉತ್ತರಪ್ರದೇಶದ ಬಿಜೆಪಿ ನಾಯಕತ್ವವು ತನ್ನ ಶಾಸಕರಿಗೆ ಎಚ್ಚರಿಕೆಯನ್ನು ನೀಡಿದೆ. 2027ರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದೊಳಗೆ ಜಾತಿ ಆಧಾರಿತ ಗುಂಪುಗಾರಿಕೆ ನಡೆಸುವುದನ್ನು ಹತ್ತಿಕ್ಕುವ ಪ್ರಯತ್ನ ಇದಾಗಿದೆಯೆಂದು ರಾಜಕೀಯ ವಿಶ್ಲೇಷಕರು ಅಂದಾಜಿಸಿದ್ದಾರೆ.
ರಾಜ್ಯದಲ್ಲಿ ಬ್ರಾಹ್ಮಣ ಸಮುದಾಯದ ವಿರುದ್ಧ ಪಕ್ಷಪಾತ ನಡೆಸಲಾಗುತ್ತಿದೆಯೆಂಬ ಆರೋಪಗಳ ಬಗ್ಗೆ ಚರ್ಚಿಸಲು ಪಕ್ಷದ ಹಲವಾರು ಬ್ರಾಹ್ಮಣ ಶಾಸಕರು ಹಾಗೂ ವಿಧಾನಪರಿತ್ ಸದಸ್ಯರು ಮಂಗಳವಾರ ಕುಶಿನಗರ ಶಾಸಕ ಪಿ.ಎನ್. ಪಾಠಕ್ ಅವರ ಲಕ್ನೋ ನಿವಾಸದಲ್ಲಿ ಸಭೆ ನಡೆಸಿದ ಎರಡು ದಿನಗಳ ಬಳಿಕ ಉತ್ತರ ಪ್ರದೇಶ ಬಿಜೆಪಿಯ ನೂತನ ಅಧ್ಯಕ್ಷ ಪಂಕಜ್ ಚೌಧುರಿ ಈ ಎಚ್ಚರಿಕೆ ನೀಡಿದ್ದಾರೆ.
ರಾಜ್ಯದ ಬಿಜೆಪಿ ಶಾಸಕರು ಜಾತಿ ಆಧಾರದಲ್ಲಿ ಸಭೆಗಳನ್ನು ನಡೆಸುವುದರ ವಿರುದ್ಧ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿರುವ ಚೌಧುರಿ ಅವರು, ಪಾಠಕ್ ಅವರ ನಿವಾಸದಲ್ಲಿ ನಡೆದಿರುವ ಸಭೆಯು ಪಕ್ಷದ ಸಂವಿಧಾನ ಹಾಗೂ ವೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ. ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ಪುನರಾವರ್ತಿಸುವುದನ್ನು ಅಶಿಸ್ತು ಎಂಬುದಾಗಿ ಪರಿಗಣಿಸಲಾಗುವುದು ಎಂದವರು ಹೇಳಿದ್ದಾರೆ.
ಈ ಸಭೆಯನ್ನು ಪಕ್ಷದ ಕೆಲವು ಬ್ರಾಹ್ಮಣ ಶಾಸಕರು ಆಯೋಜಿಸಿದ್ದರು. ಸಭೆಯಲ್ಲಿ ಭೂಮಿಹಾರ್ ಹಾಗೂ ಕುರ್ಮಿ ಪಂಗಡಗಳ ಶಾಸಕರೂ ಇದ್ದರೆಂದು ಬಿಜೆಪಿ ಮೂಲಗಳು ತಿಳಿಸಿವೆ.
ಮಂಗಳವಾರ ರಾತ್ರಿ ನಡೆದ ಭೋಜನಕೂಟ ಸಭೆಯಲ್ಲಿ ಪಾಲ್ಗೊಂಡ ಬಿಜೆಪಿ ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರ ಹೆಸರುಗಳು ಹಾಗೂ ಅವರ ಸಂಪರ್ಕ ವಿವರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಈ ಸಭೆಯ ಬಗ್ಗೆ ಬಿಜೆಪಿಯ ಕೇಂದ್ರೀಯ ನಾಯಕತ್ವವು ಅಸಮಾಧಾನಗೊಂಡಿದೆ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಕಾರ್ಯಾಲಯ ಕೂಡಾ ತನ್ನ ಅಸಂತೃಪ್ತಿಯನ್ನು ವ್ಯಕ್ತಪಡಿಸಿದೆ.
ಪಕ್ಷದ ಶಾಸಕರು ಜಾತಿ ಆಧಾರಿತ ಬಣಗಳನ್ನು ಸೃಷ್ಟಿಸಿ 2027ರ ವಿಧಾನಸಭಾ ಚುನಾವಣೆಗೆ ಟಿಕೆಟ್ ಪಡೆಯಲು ಇಲ್ಲವೇ ಸಚಿವ ಸ್ಥಾನಕ್ಕಾಗಿ ಒತ್ತಡ ಹೇರುವುದು ಹಾಗೂ ಚೌಕಾಶಿ ನಡೆಸುವುದನ್ನು ತಡೆಯುವ ಉದ್ದೇಶದಿಂದ ರಾಜ್ಯದ ಬಿಜೆಪಿ ಶಾಸಕರಿಗೆ ಈ ಎಚ್ಚರಿಕೆಯನ್ನು ನೀಡಿದೆ. ಇಂತಹ ಬಣಗಳ ರಚನೆಯು ಚುನಾವಣೆಯಲ್ಲಿ ಪಕ್ಷಕ್ಕೆ ಹಾನಿಯುಂಟು ಮಾಡಬಹುದಾಗಿದೆ ಎಂದು ಮೂಲಗಳು ತಿಳಿಸಿವೆ.
ಕೇವಲ ಬ್ರಾಹ್ಮಣ ಸಮುದಾಯದ ಎಂಎಲ್‌ಎಗಳು ಹಾಗೂ ಎಂಎಲ್‌ಸಿಗಳ ಸಭೆಯ ಕಾರಣದಿಂದಾಗಿ ಪಕ್ಷದ ನಾಯಕತ್ವವು ಈ ಪ್ರತಿಕ್ರಿಯೆಯನ್ನು ನೀಡಿದ್ದಲ್ಲ. ಮಂಗಳವಾರ ರಾತ್ರಿ ಭೋಜನಕೂಟದ ಸಂದರ್ಭದಲ್ಲಿ ಬ್ರಾಹ್ಮಣ ಶಾಸಕರು ಸಭೆ ನಡೆಸುವ ಮೊದಲೇ ರಾಜ್ಯದ ಪಶ್ಚಿಮ ವಲಯದ ಬಿಜೆಪಿ ಶಾಸಕರು ಹಾಗೂ ಪದಾಧಕಾರಿಗಳ ಸಭೆಯು ಲಕ್ನೋದ ಹೊಟೇಲೊಂದರಲ್ಲಿ ಮಧ್ನಾಹ್ನದ ಭೋಜನಕೂಟದ ಸಂದರ್ಭ ನಡೆದಿತ್ತು. ಪಶ್ಚಿಮ ಉತ್ತರಪ್ರದೇಶದಲ್ಲಿ ಪಕ್ಷದ ಹಿರಿಯ ಜಾಟ್ ಮುಖಂಡರೊಬ್ಬರ ವಿರೋಧಿಗಳು ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಆದರೆ ಈ ಸಭೆಯ ಛಾಯಾಚಿತ್ರಗಳು ಹೊರಬಾರದೇ ಇದ್ದ ಕಾರಣ ಅದು ಗಮನಸೆಳೆದಿರಲಿಲ್ಲವೆಂದು ಹಿರಿಯ ಬಿಜೆಪಿ ನಾಯಕರೊಬ್ಬರು ತಿಳಿಸಿದ್ದಾರೆ. ಬಿಜೆಪಿಯ ಬ್ರಾಹ್ಮಣ ಶಾಸಕರ ಸಭೆಯು ಉತ್ತರ ಪ್ರದೇಶ ರಾಜಕೀಯ ವರ್ತುಲಗಳಲ್ಲಿ ಸಂಚಲನವನ್ನು ಸೃಷ್ಟಿಸಿದ್ದು, ಪಕ್ಷದೊಳಗೆ ಎಲ್ಲವೂ ಸರಿಯಾಗಿಲ್ಲ ಎಂಬುದನ್ನು ಇದು ಸೂಚಿಸುತ್ತಿದೆ ಎಂದು ಪ್ರತಿಪಕ್ಷಗಳು ಟೀಕಿಸಿವೆ.