ಪಕ್ಷದ ಉಚ್ಚಾಟಿತ ನಾಯಕನಿಂದ ಜೀವ ಬೆದರಿಕೆ: ತೇಜ್ ಪ್ರತಾಪ್ ಯಾದವ್ ಆರೋಪ, ರಕ್ಷಣೆಗೆ ಮೊರೆ
ತೇಜ್ ಪ್ರತಾಪ್ ಯಾದವ್ | Photo Credit : PTI
ಪಾಟ್ನಾ,ಡಿ.27: ತನ್ನ ಪಕ್ಷದ ಉಚ್ಚಾಟಿತ ರಾಷ್ಟ್ರೀಯ ವಕ್ತಾರ ಸಂತೋಷ್ ರೇಣು ಯಾದವ್ ತನಗೆ ಜೀವ ಬೆದರಿಕೆಯೊಡ್ಡಿರುವುದಾಗಿ ಆರೋಪಿಸಿ ಜನಶಕ್ತಿ ಜನತಾ ದಳದ (ಜೆಜೆಡಿ) ಮುಖ್ಯಸ್ಥ ತೇಜ್ ಪ್ರತಾಪ್ ಯಾದವ್ ಪೋಲಿಸರಿಗೆ ದೂರು ಸಲ್ಲಿಸಿದ್ದಾರೆ.
ತನಗೆ ಭದ್ರತೆಯನ್ನು ಹೆಚ್ಚಿಸುವಂತೆ ಕೋರಿ ಅವರು ಉಪಮುಖ್ಯಮಂತ್ರಿ ಹಾಗೂ ಗೃಹಸಚಿವ ಸಾಮ್ರಾಟ್ ಚೌಧರಿಯವರಿಗೂ ಪತ್ರ ಬರೆದಿದ್ದಾರೆ. ಬಿಹಾರದ ಮಾಜಿ ಸಚಿವ ತೇಜ್ ಪ್ರತಾಪ್ ಈ ವರ್ಷದ ವಿಧಾನಸಭಾ ಚುನಾವಣೆಯಲ್ಲಿ ಮಹುವಾ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು.
ಶನಿವಾರ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಚೌಧರಿ,ತೇಜಪ್ರತಾಪ್ ತನಗೆ ಪತ್ರ ಬರೆದಿರುವುದನ್ನು ದೃಢಪಡಿಸಿದರು. ವಿಷಯವನ್ನು ಪರಿಶೀಲಿಸಲಾಗುತ್ತಿದೆ ಎಂದರು.
ತೇಜ್ ಪ್ರತಾಪ್ ದೂರಿನ ಮೇರೆಗೆ ಎಫ್‌ಐಆರ್ ದಾಖಲಾಗಿದ್ದು,ತನಿಖೆ ನಡೆಸಲಾಗುತ್ತಿದೆ ಎಂದು ಪೋಲಿಸರು ತಿಳಿಸಿದರು.
ರೇಣು ಯಾದವ್ ರನ್ನು ಜೆಜೆಡಿಯ ರಾಷ್ಟ್ರೀಯ ವಕ್ತಾರರನ್ನಾಗಿ ನೇಮಿಸಲಾಗಿತ್ತು. ಆದರೆ ನಂತರ ಅವರು ಪಕ್ಷದ ಸಿದ್ಧಾಂತಕ್ಕೆ ವಿರುದ್ಧವಾಗಿ ಕೆಲಸ ಮಾಡತೊಡಗಿದ್ದರು. ಉದ್ಯೋಗಗಳು ಮತ್ತು ಇತರ ಅನುಕೂಲಗಳ ಭರವಸೆ ನೀಡಿ ಅವರು ಪಕ್ಷದ ಕಾರ್ಯಕರ್ತರು ಮತ್ತು ಇತರರಿಂದ ಹಣ ಪಡೆದಿದ್ದರು ಎಂದು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಹಿರಿಯ ಪುತ್ರರಾಗಿರುವ ತೇಜಪ್ರತಾಪ್ ದೂರಿದ್ದಾರೆ. ರೇಣು ಯಾದವ್ ಅವರನ್ನು ಡಿ.14ರಂದು ಪಕ್ಷದಿಂದ ಉಚ್ಚಾಟಿಸಲಾಗಿತ್ತು.