×
Ad

ಬಲವಂತದ ರಾಜೀನಾಮೆ ಪಡೆದು 25 ವರ್ಷದ ಬಳಿಕ CISF ಅಧಿಕಾರಿಯ ‘‘ಗೌರವ’’ ಮರುಸ್ಥಾಪಿಸಿದ ದಿಲ್ಲಿ ಹೈಕೋರ್ಟ್

Update: 2025-12-27 21:04 IST

ದಿಲ್ಲಿ ಹೈಕೋರ್ಟ್ | Photo Credit : PTI 

ಹೊಸದಿಲ್ಲಿ, ಡಿ. 27: 72 ವರ್ಷದ ಮಾಜಿ CISF ಅಧಿಕಾರಿಯ ‘‘ಗೌರವ’’ವನ್ನು ದಿಲ್ಲಿ ಹೈಕೋರ್ಟ್ ಮರುಸ್ಥಾಪಿಸಿದೆ. ಇಪ್ಪತ್ತು ವರ್ಷಗಳ ಹಿಂದೆ, ಮಹಿಳಾ ಸಹೋದ್ಯೋಗಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಅವರಿಂದ ಬಲವಂತದ ರಾಜೀನಾಮೆಯನ್ನು ಪಡೆದುಕೊಳ್ಳಲಾಗಿತ್ತು. ಅವರ ವಿರುದ್ಧದ ದೂರು ಸುಳ್ಳು ಎಂಬಂತೆ ಕಂಡುಬರುತ್ತಿದೆ ಎಂದು ಹೈಕೋರ್ಟ್ ಹೇಳಿದೆ.

‘‘ಅರ್ಜಿದಾರನ ವಿರುದ್ಧ ಮಾಡಲಾಗಿರುವ ಆರೋಪಗಳು ಸಾಬೀತಾಗಿಲ್ಲ. ಅವರ ವಿರುದ್ಧದ ಆರೋಪಗಳು ಸಾಬೀತಾಗಿದೆ ಎಂಬುದಾಗಿ ತನಿಖಾಧಿಕಾರಿ ಕಂಡುಕೊಂಡಿದ್ದಾರೆ ಎಂಬುದಾಗಿ ಭಾವಿಸಿದರೂ, ಕಡ್ಡಾಯ ನಿವೃತ್ತಿಯಂಥ ಘೋರ ಶಿಕ್ಷೆಯನ್ನು ವಿಧಿಸಬಾರದಾಗಿತ್ತು’’ ಎಂದು ನ್ಯಾಯಾಲಯ ಹೇಳಿತು.

‘‘ಅಂದಿನಿಂದ 25 ವರ್ಷಗಳು ಕಳೆದುಹೋಗಿವೆ. ಈಗ ಅರ್ಜಿದಾರರಿಗೆ 72 ವರ್ಷ. ಹಾಗಾಗಿ, ಕನಿಷ್ಠ ಅವರ ಗೌರವವನ್ನು ಮರುಸ್ಥಾಪಿಸುವ ಕೆಲಸವನ್ನು ನಾವು ಮಾಡಬಹುದು ಎಂಬುದಾಗಿ ನಾವು ಭಾವಿಸುತ್ತೇವೆ. ಕಡ್ಡಾಯ ನಿವೃತ್ತಿಗೆ ಆದೇಶ ನೀಡುವ ಮೂಲಕ ಅವರ ಗೌರವವನ್ನು ನಾಶಮಾಡಲಾಗಿದೆ ಎನ್ನುವುದು ನಮ್ಮ ಭಾವನೆ’’ ಎಂದು ನ್ಯಾಯಮೂರ್ತಿಗಳಾದ ದಿನೇಶ್ ಮೆಹ್ತಾ ಮತ್ತು ವಿಮಲ್ ಕುಮಾರ್ ಯಾದವ್ ಅವರನ್ನೊಳಗೊಂಡ ನ್ಯಾಯಪೀಠವೊಂದು ಡಿಸೆಂಬರ್ 19ರಂದು ನೀಡಿದ ಆದೇಶದಲ್ಲಿ ಹೇಳಿದೆ.

ಅವರು ಸಹಜ ನಿವೃತ್ತಿಯಾಗುವವರೆಗೆ ಸೇವೆಯನ್ನು ಪೂರ್ತಿಗೊಳಿಸಿದ್ದಾರೆ ಎಂಬುದಾಗಿ ಅನೌಪಚಾರಿಕವಾಗಿ ಪರಿಗಣಿಸಬೇಕು. ಆದರೆ, ಈ ಅವಧಿಯ ವೇತನ ಅವರಿಗೆ ಸಿಗುವುದಿಲ್ಲ. ಆದರೆ, ಅವರ ಪೂರ್ಣ ಸೇವೆಗೆ ಅನುಗುಣವಾಗಿ ಅವರ ಪಿಂಚಣಿಯನ್ನು 2026 ಮಾರ್ಚ್‌ ನಿಂದ ಪರಿಷ್ಕರಿಸಬೇಕು. ಆದರೆ, ಬಾಕಿ ಪಿಂಚಣಿ ಅವರಿಗೆ ಸಿಗುವುದಿಲ್ಲ ಎಂಬುದಾಗಿಯೂ ಹೈಕೋರ್ಟ್ ಹೇಳಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News