ಜಸ್ಚಿಸ್ ವರ್ಮಾ ವಿರುದ್ಧದ ಆರೋಪಗಳ ವರದಿ ಹಂಚಿಕೊಳ್ಳಿ: ಕೇಂದ್ರ ಸರಕಾರಕ್ಕೆ ಕಾಂಗ್ರೆಸ್ ಮನವಿ
ಜಸ್ಚಿಸ್ ವರ್ಮಾ | PTI
ಹೊಸದಿಲ್ಲಿ: ನ್ಯಾಯಮೂರ್ತಿ ಯಶ್ವಂತ್ ವರ್ಮಾ ವಿರುದ್ಧದ ಭ್ರಷ್ಟಾಚಾರ ಆರೋಪದ ಕುರಿತು ತನಿಖೆ ನಡೆಸಿದ ಸುಪ್ರೀಂ ಕೋರ್ಟ್ ನಿಯೋಜಿತ ಸಮಿತಿಯ ವರದಿಯನ್ನು ತಮ್ಮೊಂದಿಗೆ ಹಂಚಿಕೊಳ್ಳಿ ಎಂದು ಕಾಂಗ್ರೆಸ್ ಕೇಂದ್ರ ಸರಕಾರವನ್ನು ಗುರುವಾರ ವಿನಂತಿಸಿದೆ.
ಇದರಿಂದ ಸಂಸತ್ತಿನ ಮುಂಗಾರು ಅಧಿವೇಶನಕ್ಕಿಂತ ಮುನ್ನ ಜಸ್ಟಿಸ್ ವರ್ಮಾ ಅವರ ವಾಗ್ದಂಡನೆ ವಿಷಯದ ಕುರಿತು ತಮ್ಮ ನಿಲುವನ್ನು ದೃಢಪಡಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಆದರೆ, ಕೇಂದ್ರ ಸರಕಾರ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಮೂಲಗಳು ಹೇಳಿವೆ.
ವಾಗ್ದಂಡನೆ ವಿಷಯದ ಕುರಿತು ಪಕ್ಷ ತನ್ನ ನಿಲುವನ್ನು ದೃಢಪಡಿಸಲು ಸಮಿತಿಯ ವರದಿ ಹಂಚಿಕೊಳ್ಳುವಂತೆ ರಿಜಿಜು ಅವರನ್ನು ಪಕ್ಷ ವಿನಂತಿಸಿದೆ. ಆದರೆ, ಸಚಿವರು ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಅವು ಹೇಳಿವೆ.
ಜಸ್ಟಿಸ್ ಯಶ್ವಂತ್ ವರ್ಮಾ ಅವರ ದಿಲ್ಲಿಯಲ್ಲಿರುವ ನಿವಾಸದಲ್ಲಿ ಮಾರ್ಚ್‌ನಲ್ಲಿ ಅಗ್ನಿ ಅವಘಡ ಸಂಭವಿಸಿದ ಬಳಿಕ ಗೋಣಿ ಚೀಲದಲ್ಲಿ ಭಾರೀ ಪ್ರಮಾಣದ ನಗದು ಪತ್ತೆಯಾಗಿತ್ತು. ಈ ಸಂದರ್ಭ ಜಸ್ಟಿಸ್ ವರ್ಮಾ ಅವರು ದಿಲ್ಲಿ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿದ್ದರು.
ಅನಂತರ ವರ್ಮಾ ಅವರನ್ನು ಅಲಹಾಬಾದ್ ಉಚ್ಚ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿತ್ತು. ತಾವಾಗಲಿ, ತಮ್ಮ ಕುಟುಂಬವಾಗಲಿ ನೋಟುಗಳನ್ನು ಇರಿಸಿರಲಿಲ್ಲ ಎಂದು ವರ್ಮಾ ಅವರು ಹೇಳಿದ್ದರು. ಹಲವು ಸಾಕ್ಷಿಗಳೊಂದಿಗೆ ಮಾತನಾಡಿದ ಹಾಗೂ ಅವರ ಹೇಳಿಕೆಯನ್ನು ದಾಖಲಿಸಿಕೊಂಡ ಬಳಿಕ ಸುಪ್ರೀಂ ಕೋರ್ಟ್ ನಿಯೋಜಿತ ಸಮಿತಿ ವರ್ಮಾ ಅವರ ವಿರುದ್ಧ ಆರೋಪ ಹೊರಿಸಿತ್ತು.