"ಪ್ರಧಾನಿ ದುರ್ಬಲ ವಿಕೆಟ್ ಮೇಲೆ ಆಡುತ್ತಿದ್ದಾರೆ": ಟ್ರಂಪ್ ಹೇಳಿಕೆಯನ್ನು ನಿರಾಕರಿಸದ್ದಕ್ಕೆ ಪ್ರಧಾನಿ ಮೋದಿಗೆ ಕಾಂಗ್ರೆಸ್ ತಿರುಗೇಟು
File Photo: PTI
ಹೊಸದಿಲ್ಲಿ: ಭಾರತ ಮತ್ತು ಪಾಕಿಸ್ತಾನ ನಡುವೆ ಕದನ ವಿರಾಮಕ್ಕೆ ನಾನು ಮಧ್ಯಸ್ಥಿಕೆ ವಹಿಸಿದ್ದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಯನ್ನು ಪ್ರಧಾನಿ ನರೇಂದ್ರ ಮೋದಿ ಖಡಾಖಂಡಿತವಾಗಿ ನಿರಾಕರಿಸುತ್ತಿಲ್ಲ ಎಂದು ಬುಧವಾರ ಆರೋಪಿಸಿದ ಕಾಂಗ್ರೆಸ್, “ಅವರು ತುಂಬಾ ದುರ್ಬಲ ವಿಕೆಟ್ ಮೇಲೆ ಆಡುತ್ತಿದ್ದಾರೆ” ಎಂದು ವ್ಯಂಗ್ಯವಾಡಿದೆ.
ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮಕ್ಕೆ ಮಧ್ಯಸ್ಥಿಕೆ ವಹಿಸಿದ್ದ ನಾನೇ ಎಂದು ಪದೇ ಪದೇ ಹೇಳಿಕೆ ನೀಡುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕುರಿತು ಪ್ರಸ್ತಾಪಿಸಿರುವ ಕಾಂಗ್ರೆಸ್, “ಟ್ರಂಪ್ ಅವರು ಪ್ರಧಾನಿಯನ್ನು ಹಾವಿನಂತೆ ಸುತ್ತುವರಿದಿದ್ದು, ಅವರ ಕಿವಿಯಲ್ಲಿ ಕಹಿ ಸತ್ಯವನ್ನು ಪಿಸುಗುಟ್ಟುತ್ತಿದ್ದಾರೆ” ಎಂದು ವಾಗ್ದಾಳಿ ನಡೆಸಿದೆ.
ಮಂಗಳವಾರ ಸ್ಕಾಟ್ಲೆಂಡ್ ನಿಂದ ವಾಷಿಂಗ್ಟನ್ ಗೆ ಮರಳುವ ಮುನ್ನ, ಏರ್ ಫೋರ್ಸ್ ಒನ್ ವಿಮಾನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ನಾನು ಭಾರತ ಮತ್ತು ಪಾಕಿಸ್ತಾನದ ನಡುವಿನ ಬಿಕ್ಕಟ್ಟನ್ನು ಅಂತ್ಯಗೊಳಿಸಿದೆ ಎಂದು ಮತ್ತೊಮ್ಮೆ ಪುನರುಚ್ಚರಿಸಿದ್ದರು.
ಈ ವಿಡಿಯೊವನ್ನು ಎಕ್ಸ್ ನಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್, “ ಪ್ರಧಾನಿ ಮೋದಿಯವರು ನಿನ್ನೆ ಲೋಕಸಭೆಯಲ್ಲಿ ಮಧ್ಯಪ್ರವೇಶಿಸಿ, ಮುಖ್ಯ ವಿಷಯವನ್ನು ವಿಷಯಾಂತರ ಮಾಡಿ, ಬೇರೆಡೆ ಗಮನ ಸೆಳೆದ ನಂತರ, ಅಮೆರಿಕ ಅಧ್ಯಕ್ಷ ಟ್ರಂಪ್ ಮತ್ತೊಮ್ಮೆ ತಮ್ಮ ಹೇಳಿಕೆಯನ್ನು ಪುನರುಚ್ಚರಿಸಿದ್ದಾರೆ” ಎಂದು ಟೀಕಿಸಿದ್ದಾರೆ.
“ಪ್ರಧಾನಿ ಮೋದಿಯವರೇಕೆ ತಮ್ಮ ಉತ್ತಮ ಸ್ನೇಹಿತ ಡೊನಾಲ್ಡ್ ಟ್ರಂಪ್ ಅವರು ಅಮೆರಿಕ, ಸೌದಿ ಅರೇಬಿಯಾ, ಖತರ್ ಹಾಗೂ ಬ್ರಿಟನ್ ನಲ್ಲಿ ಇಲ್ಲಿಯವರೆಗೆ 30 ಬಾರಿ ನೀಡಿರುವ ಹೇಳಿಕೆಯನ್ನು ಖಡಾಖಂಡಿತವಾಗಿ ನಿರಾಕರಿಸುತ್ತಿಲ್ಲ?” ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ ಕೂಡಾ ಈ ಕುರಿತು ಪ್ರಧಾನಿಯನ್ನು ತರಾಟೆಗೆ ತೆಗೆದುಕೊಂಡಿದ್ದು, “ಟ್ರಂಪ್ ಅವರು ಮೋದಿಯನ್ನು ಹಾವಿನಂತೆ ಸುತ್ತುವರಿದಿದ್ದಾರೆ. ನಿನ್ನೆ ರಾಹುಲ್ ಗಾಂಧಿ ಅವರು ಈ ಗೊಂದಲವನ್ನು ಬಗೆಹರಿಸುವ ಅವಕಾಶವನ್ನು ಅವರಿಗೆ ನೀಡಿದ್ದರು. ಕದನ ವಿರಾಮದ ಕುರಿತು ಟ್ರಂಪ್ ಸುಳ್ಳು ಹೇಳುತ್ತಿದ್ದಾರೆ ಎಂದಷ್ಟೇ ಹೇಳಿ” ಎಂದು ಸವಾಲು ಹಾಕಿದ್ದಾರೆ.
“ಇದು ಸರಳ ಅಲ್ಲವೆ? ಆದರೆ, ಅದಾಗುತ್ತಿಲ್ಲ. ರಾಹುಲ್ ಗಾಂಧಿಯವರ ಸಲಹೆಯನ್ನು ಸ್ವೀಕರಿಸಲು ಮೋದಿಗೆ ಮುಜುಗರವಾಗುತ್ತಿದೆ. ಇಂದು ಹಾವು ಮತ್ತೊಮ್ಮೆ ಪ್ರತ್ಯಕ್ಷವಾಗಿದ್ದು, ಈ ಹಿಂದಿಗಿಂತ ಅವರನ್ನು ಹೆಚ್ಚು ಬಿಗಿಯಾಗಿ ಸುತ್ತುವರಿದಿದೆ. ಮೋದಿಯವರ ಕಿವಿಯಲ್ಲಿ ಕಹಿ ಸತ್ಯವನ್ನು ಪಿಸುಗುಟ್ಟುತ್ತಿದೆ” ಎಂದು ಅವರು ಲೇವಡಿ ಮಾಡಿದ್ದಾರೆ.
ಪಹಲ್ಗಾಮ್ ದಾಳಿ ಹಾಗೂ ನಂತರ ಅದಕ್ಕೆ ಪ್ರತಿಯಾಗಿ ನಡೆದ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಕುರಿತು ಸೋಮವಾರದಿಂದ ಸಂಸತ್ತಿನಲ್ಲಿ ನಡೆಯುತ್ತಿರುವ ವಿಶೇಷ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪಾಕಿಸ್ತಾನದ ಮನವಿಯ ಮೇರೆಗೆ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಯಿತೇ ಹೊರತು, ಯಾವುದೇ ವಿಶ್ವನಾಯಕರ ಸೂಚನೆಯಂತಲ್ಲ ಎಂದು ಸ್ಪಷ್ಟಪಡಿಸಿದ್ದರು.
ಆದರೆ, ಮಂಗಳವಾರ ಮತ್ತೆ ಈ ಕುರಿತು ಪ್ರತಿಕ್ರಿಯಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತ ಮತ್ತು ಪಾಕಿಸ್ತಾನ ನಡುವಿನ ಕದನ ವಿರಾಮದ ಮಧ್ಯಸ್ಥಿಕೆಯನ್ನು ನಾನು ವಹಿಸಿದ್ದೆ ಎಂದು ಹೇಳುವ ಮೂಲಕ, ಪ್ರಧಾನಿ ನರೇಂದ್ರ ಮೋದಿಗೆ ಮತ್ತೊಮ್ಮೆ ಮುಜುಗರವನ್ನುಂಟು ಮಾಡಿದ್ದಾರೆ.