ದಿತ್ವಾ ಚಂಡಮಾರುತ: ಪ್ರವಾಹಪೀಡಿತ ಶ್ರೀಲಂಕಾಕ್ಕೆ 12 ಟನ್ ನೆರವನ್ನು ತಲುಪಿಸಿದ ಭಾರತ
Photo Credit : PTI
ಹೊಸದಿಲ್ಲಿ: ಸುಮಾರು 12 ಟನ್‌ಗಳಷ್ಟು ಮಾನವೀಯ ನೆರವು ಸಾಮಗ್ರಿಗಳನ್ನು ಹೊತ್ತ ಸಿ-130ಜೆ ವಿಮಾನವು ಕೊಲಂಬೋದಲ್ಲಿ ಇಳಿದಿದೆ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ ಅವರು ಶನಿವಾರ ಪ್ರಕಟಿಸಿದ್ದಾರೆ.
ಈ ಪೂರೈಕೆಯು ದಿತ್ವಾ ಚಂಡಮಾರುತದಿಂದ ತತ್ತರಿಸಿರುವ ಶ್ರೀಲಂಕಾಕ್ಕೆ ನೆರವಾಗಲು ಭಾರತವು ಶುಕ್ರವಾರ ಆರಂಭಿಸಿದ ‘ಸಾಗರ ಬಂಧು’ ಕಾರ್ಯಾಚರಣೆಯ ಭಾಗವಾಗಿದೆ.
ಇತ್ತೀಚಿನ ಮಾಹಿತಿಗಳನ್ನು ಎಕ್ಸ್‌ನಲ್ಲಿ ಹಂಚಿಕೊಂಡಿರುವ ಜೈಶಂಕರ,ಆಪರೇಷನ್ ಸಾಗರ ಬಂಧು ಅಂಗವಾಗಿ ಟೆಂಟ್‌ಗಳು,ಟಾರ್ಪಾಲಿನ್‌ಗಳು,ಹೊದಿಕೆಗಳು,ನೈರ್ಮಲ್ಯ ಕಿಟ್‌ಗಳು ಮತ್ತು ಸಿದ್ಧ ಆಹಾರ ಪದಾರ್ಥಗಳು ಸೇರಿದಂತೆ ಸುಮಾರು 12 ಟನ್‌ಗಳಷ್ಟು ಮಾನವೀಯ ನೆರವು ಹೊತ್ತ ವಿಮಾನವು ಶನಿವಾರ ಕೊಲಂಬೋದಲ್ಲಿ ಇಳಿದಿದೆ ಎಂದು ತಿಳಿಸಿದ್ದಾರೆ.
ಸಾಗರ ಬಂಧು ಕಾರ್ಯಾಚರಣೆಯ ಮೊದಲ ಹಂತದಲ್ಲಿ ಭಾರತೀಯ ನೌಕಾಪಡೆಯ ವಿಮಾನವಾಹಕ ನೌಕೆ ಐಎನ್‌ಎಸ್ ವಿಕ್ರಾಂತ್ ಮತ್ತು ಮುಂಚೂಣಿಯ ಯುದ್ಧನೌಕೆ ಉದಯಗಿರಿ ಮೂಲಕ ಪರಿಹಾರ ಸಾಮಗ್ರಿಗಳ ಮೊದಲ ಕಂತನ್ನು ಶುಕ್ರವಾರ ಶ್ರೀಲಂಕಾಕ್ಕೆ ತಲುಪಿಸಲಾಗಿತ್ತು.
ಎಕ್ಸ್ ಪೋಸ್ಟ್‌ನಲ್ಲಿ ಶ್ರೀಲಂಕಾದ ಜನತೆಗೆ ಸಂತಾಪಗಳನ್ನು ಸೂಚಿಸಿರುವ ಪ್ರಧಾನಿ ನರೇಂದ್ರ ಮೋದಿಯವರು, ಚಂಡಮಾರುತದಿಂದಾಗಿ ಜೀವಹಾನಿಗೆ ದುಃಖವನ್ನು ವ್ಯಕ್ತಪಡಿಸಿದ್ದಾರೆ.
ಪರಿಸ್ಥಿತಿ ಇನ್ನಷ್ಟು ಹದಗೆಟ್ಟರೆ ಶ್ರೀಲಂಕಾಕ್ಕೆ ಹೆಚ್ಚಿನ ನೆರವು ಒದಗಿಸಲು ಭಾರತವು ಸಿದ್ಧವಾಗಿದೆ ಎಂದು ತಿಳಿಸಿರುವ ಮೋದಿ,ಈ ಬೆಂಬಲವು ಭಾರತದ ನೆರೆಹೊರೆಯವರು ಮೊದಲು ಎಂಬ ಭಾರತದ ನೀತಿ ಮತ್ತು ‘ಮಹಾಸಾಗರ’ ದೃಷ್ಟಿಕೋನದಿಂದ ನಿರ್ದೇಶಿತವಾಗಿದೆ ಎಂದು ಹೇಳಿದ್ದಾರೆ.