×
Ad

ಭಾರತದ ಮುಂಗಾರು ಮಳೆ ಮೇಲೆ ಎಲ್ ನಿನೊ ಪರಿಣಾಮ; ಮತ್ತಷ್ಟು ಸುಡು ಬೇಸಿಗೆ ನಿರೀಕ್ಷೆ

Update: 2026-03-11 08:12 IST

ಸಾಂದರ್ಭಿಕ ಚಿತ್ರ PC: freepik

ಹೊಸದಿಲ್ಲಿ: ಪ್ರಸಕ್ತ ವರ್ಷದ ಉತ್ತರಾರ್ಧದಲ್ಲಿ ಎಲ್ ನಿನೊ ಸಾಧ್ಯತೆಯನ್ನು ಅಂದಾಜಿಸಿರುವ ವಿಶ್ವ ಹವಾಮಾನ ಸಂಸ್ಥೆ, ಇದು ಭಾರತದ ಮುಂಗಾರು ಮಳೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಎಚ್ಚರಿಸಿದೆ. ಆದಾಗ್ಯೂ ಈ ಹಂತದಲ್ಲಿ ಎಲ್ ನಿನೊ ನಿಖರ ಪರಿಣಾಮಗಳ ಬಗ್ಗೆ ಅಂದಾಜಿಸಲು ಕಷ್ಟಸಾಧ್ಯ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಏತನ್ಮಧ್ಯೆ ವಿವಿಧ ಹವಾಮಾನ ಅಂಶಗಳ ಕಾರಣದಿಂದಾಗಿ ಮಾರ್ಚ್ ನಿಂದ ಮೇ ತಿಂಗಳ ನಡುವೆ ಜಾಗತಿಕ ಮಟ್ಟದಲ್ಲಿ ಮೇಲ್ಮೈ ತಾಪಮಾನ ಹೆಚ್ಚುವ ನಿರೀಕ್ಷೆಯಿದೆ ಎಂದು ಸಂಸ್ಥೆ ಅಂದಾಜಿಸಿದೆ. ಭಾರತದಲ್ಲಿ ಇದರ ಪರಿಣಾಮ ಈಗಾಗಲೇ ಅನುಭವಕ್ಕೆ ಬರುತ್ತಿದ್ದು, ದೇಶದ ವಿವಿಧೆಡೆ ಉಷ್ಣಮಾರುತ ಹಾಗೂ ತೀವ್ರ ಬಿಸಿಗಾಳಿ ಬೀಸುತ್ತಿದೆ.

ಜಮ್ಮು- ಕಾಶ್ಮೀರ ಮತ್ತು ಹಿಮಾಚಲ ಪ್ರದೇಶದಲ್ಲಿ ವಾಡಿಕೆಯ ಉಷ್ಣಾಂಶಕ್ಕಿಂತ 5-7 ಡಿಗ್ರಿ ತಾಪಮಾನ ಅಧಿಕವಾಗಿರುವ ಸಾಧ್ಯತೆಯ ಬಗ್ಗೆಯೂ ಸಂಸ್ಥೆ ಎಚ್ಚರಿಸಿದೆ. ದೆಹಲಿ-ಎನ್ಸಿಆರ್, ಗುಜರಾತ್ ಹಾಗೂ ಮಧ್ಯಪ್ರದೇಶದಲ್ಲಿ ಮುಂದಿನ ಮೂರು ದಿನಗಳಲ್ಲಿ ತಾಪಮಾನ ವಾಡಿಕೆಗಿಂತ 4-6 ಡಿಗ್ರಿ ಸೆಲ್ಷಿಯಸ್ ನಷ್ಟು ಹೆಚ್ಚಿರುವ ಸಾಧ್ಯತೆ ಇದೆ ಎಂದು ಅಂದಾಜಿಸಿದೆ. ಮುಂದಿನ ಐದು ದಿನಗಳ ವರೆಗೆ ನೈರುತ್ಯ ಪರ್ಯಾಯದ್ವೀಪ ಪ್ರದೇಶದಲ್ಲಿ ತಾಪಮಾನ ವಾಡಿಕೆಗಿಂತ 2-3 ಡಿಗ್ರಿ ಸೆಲ್ಷಿಯಸ್ ನಷ್ಟು ಅಧಿಕ ಇರಲಿದೆ ಎಂದು ಮುನ್ಸೂಚನೆ ನೀಡಿದೆ.

"ಪ್ರಸಕ್ತ ಋತುವಿನ ಉತ್ತರಾರ್ಧದಲ್ಲಿ ಎಲ್ ನಿನೊ ಸೃಷ್ಟಿಯಾಗುವ ಸೂಚನೆ ಇದೆ. ಪ್ರಸ್ತುತ ಅಂದಾಜಿನ ಪ್ರಕಾರ ಇದು ಮಧ್ಯಮ ಪರಿಣಾಮದ ಎಲ್ ನಿನೊ ಆಗಿರುತ್ತದೆ. ಆದಾಗ್ಯೂ ಈ ಹಂತದಲ್ಲಿ ಮುನ್ಸೂಚನೆ ದೊಡ್ಡ ಅನಿಶ್ಚಿತತೆಗಳನ್ನು ಹೊಂದಿದೆ. ಜೂನ್ ವೇಳೆಗೆ ಎಲ್ ನಿನೊ ಪರಿಸ್ಥಿತಿ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಲಿದೆ. ಆದ್ದರಿಂದ ತಕ್ಷಣಕ್ಕೆ ಆತಂಕಕ್ಕೆ ಈಡಾಗುವ ಅಗತ್ಯವಿಲ್ಲ; ಪರಿಸ್ಥಿತಿಯ ಬಗ್ಗೆ ನಿಗಾ ಇಡಬೇಕಾಗಿದೆ" ಎಂದು ಭೂವಿಜ್ಞಾನಗಳ ಸಚಿವಾಲಯದ ಮಾಜಿ ಕಾರ್ಯದರ್ಶಿ ಮಾಧವನ್ ರಾಜೀವನ್ ಸ್ಪಷ್ಟನೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News