ಮಧ್ಯಪ್ರದೇಶ ಪೊಲೀಸರು ಪೆನ್ ಡ್ರೈವ್ ಗಾಗಿ ಸಾವಿರಾರು ರೂಪಾಯಿ ವೆಚ್ಚ ಮಾಡುತ್ತಿರುವುದೇಕೆ ಗೊತ್ತೆ?
ಭೋಪಾಲ್: ಮಧ್ಯಪ್ರದೇಶದಾದ್ಯಂತ ಇರುವ ಪೊಲೀಸ್ ಠಾಣೆಗಳು ಅಸಹಜ ಹಣಕಾಸು ಒತ್ತಡಕ್ಕೆ ಒಳಗಾಗಿದ್ದು, ಪ್ರತಿ ತಿಂಗಳು ಪೆನ್ ಡ್ರೈವ್ ಖರೀದಿಗಾಗಿಯೇ ಸಾವಿರಾರು ರೂಪಾಯಿ ವೆಚ್ಚ ಮಾಡುವಂತಾಗಿದೆ. ಇದಕ್ಕೆ ಕಾರಣವೇನು ಗೊತ್ತೆ? ಬ್ರಿಟಿಷರ ಕಾಲದ ಭಾರತೀಯ ದಂಡ ಸಂಹಿತೆಯ ಬದಲಿಗೆ ಜಾರಿಯಾಗಿರುವ ಭಾರತೀಯ ನ್ಯಾಯ ಸಂಹಿತೆ!
ಭಾರತೀಯ ನೀತಿ ಸಂಹಿತೆಯಡಿ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ಸಾಕ್ಷ್ಯಾಧಾರಗಳು, ಅಪರಾಧ ಸ್ಥಳದ ದೃಶ್ಯಗಳ ಚಿತ್ರೀಕರಣ ಹಾಗೂ ವಿಧಿವಿಜ್ಞಾನ ದತ್ತಾಂಶಗಳನ್ನು ಈ ಹಿಂದಿನಂತೆ ಸಿಡಿ ಅಥವಾ ಕಾಗದದ ದಾಖಲೆಗಳ ಮೂಲಕ ಸಲ್ಲಿಸುವ ಬದಲು, ಪೆನ್ ಡ್ರೈವ್ ನಲ್ಲಿ ಸಲ್ಲಿಸುವುದನ್ನು ಕಾನೂನಾತ್ಮಕವಾಗಿ ಕಡ್ಡಾಯಗೊಳಿಸಲಾಗಿದೆ.
ಈ ಡಿಜಟಲೀಕರಣವು ಕಾನೂನು ಪ್ರಕ್ರಿಯೆಗಳನ್ನು ಸುವ್ಯವಸ್ಥಿತಗೊಳಿಸುವ ಗುರಿ ಹೊಂದಿದ್ದರೂ, ಈ ಸಾಧನಗಳನ್ನು ಖರೀದಿಸಬೇಕಾದ ಹೊಣೆಗಾರಿಕೆ ಪೊಲೀಸ್ ಸಿಬ್ಬಂದಿಗಳ ಹೆಗಲಿಗೇರಿದ್ದು, ಕೆಲವೊಮ್ಮೆ ಅವರು ಇದಕ್ಕಾಗಿ ತಮ್ಮ ಜೇಬಿನಿಂದಲೇ ಹಣ ವ್ಯಯಿಸಬೇಕಾದ ಪರಿಸ್ಥಿತಿ ತಲೆದೋರಿದೆ. 8 ಜಿಬಿ ಪೆನ್ ಡ್ರೈವ್ ಬೆಲೆ ಸುಮಾರು 300 ರೂ.ನಷ್ಟಿದ್ದು, ತನಿಖೆಗಳಿಗೆ ಪದೇ ಪದೇ ಹಲವಾರು ಪೆನ್ ಡ್ರೈವ್ ಗಳನ್ನು ಖರೀದಿಸುವ ಅಗತ್ಯ ಬೀಳುತ್ತಿದೆ ಎಂದು NDTV ವರದಿ ಮಾಡಿದೆ.
ಸಬ್ ಇನ್ಸ್ ಪೆಕ್ಟರ್ ಬಿ.ಎಸ್.ಕಲ್ಪುರಿಯ ಅವರು ಭೋಪಾಲ್ ನ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ ಹಾಗೂ ನೂತನ ಕಾನೂನಿನಡಿ ವಿವಿಧ ಪ್ರಕರಣಗಳ ತನಿಖೆ ನಡೆಸುತ್ತಿದ್ದಾರೆ. ಆದರೆ, ಕಾಗದದಿಂದ ಡಿಜಿಟಲ್ ಸಾಕ್ಷ್ಯಾಧಾರಕ್ಕೆ ಬದಲಾಗಿರುವುದು ಅವರ ಪಾಲಿನ ಅನಿರೀಕ್ಷಿತ ವೆಚ್ಚವನ್ನು ತಂದೊಡ್ಡಿದೆ. ಪ್ರಕರಣವೊಂದರ ಎಲ್ಲ ಸಾಕ್ಷ್ಯಾಧಾರಗಳನ್ನು ಒಟ್ಟಿಗೆ ಸಂಗ್ರಹಿಸಲು ಕನಿಷ್ಠ ಮೂರು ಪೆನ್ ಡ್ರೈವ್ ಗಳ ಅಗತ್ಯ ಬೀಳುತ್ತಿದೆ.
ಈ ಕುರಿತು ಪ್ರತಿಕ್ರಿಯಿಸಿದ ಅವರು, “ನೀವಿದನ್ನು ಮಾಡಲೇಬೇಕು, ಸರ್!” ಎಂದು ಅಸಹಾಯಕತೆ ತೋಡಿಕೊಳ್ಳುತ್ತಾರೆ.
ಭಾರತೀಯ ಸಾಕ್ಷ್ಯ ಕಾಯ್ದೆಯ ಸೆಕ್ಷನ್ 65ಬಿ(4) ಅನ್ವಯ, ಪೆನ್ ಡ್ರೈವ್ ಸೇರಿದಂತೆ ಯಾವುದೇ ಇಲೆಕ್ಟ್ರಾನಿಕ್ ಸಾಧನವನ್ನು ಅದರ ನೈಜತೆ ಪರಿಶೀಲನೆ ಪ್ರಮಾಣ ಪತ್ರದೊಂದಿಗೆ ಸಲ್ಲಿಸಬೇಕಾಗುತ್ತದೆ. ಈ ಹಿಂದೆ ಸಿಡಿಗಳನ್ನು ಬಳಸಲಾಗುತ್ತಿತ್ತು. ಆದರೆ, ಅವು ಈಗ ಮಾರುಕಟ್ಟೆಯಲ್ಲಿ ಲಭ್ಯವಿಲ್ಲದೆ ಇರುವುದರಿಂದ ಹಾಗೂ ಬಳಸಲು ಕಷ್ಟವಾಗಿರುವುದರಿಂದ, ಪೊಲೀಸರು ಅನಿವಾರ್ಯವಾಗಿ ಪೆನ್ ಡ್ರೈವ್ ಗೆ ಬದಲಾಗಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ, 2023ರಲ್ಲಿ ಸಾಕ್ಷ್ಯಾಧಾರಗಳನ್ನು ಧ್ವನಿ-ದೃಶ್ಯ ಮಾಧ್ಯಮದಲ್ಲಿ ಚಿತ್ರೀಕರಿಸಲು ಅವಕಾಶವಿದೆ. ಇದರಲ್ಲಿ ಅಪರಾಧ ದೃಶ್ಯಗಳ ಚಿತ್ರೀಕರಣವೂ ಸೇರಿದೆ.
ಭಾರತೀಯ ನ್ಯಾಯ ಸಂಹಿತೆಯ ಪ್ರಕಾರ, ನಿರ್ದಿಷ್ಟವಾಗಿ ಸೆಕ್ಷನ್ 105ರ ಪ್ರಕಾರ, ಶೋಧ ಹಾಗೂ ಮುಟ್ಟುಗೋಲು ಕಾರ್ಯಾಚರಣೆಯ ಸಂದರ್ಭದಲ್ಲಿ ಸಂಗ್ರಹಿಸುವ ಸಾಕ್ಷ್ಯಾಧಾರಗಳನ್ನು ಮೊಬೈಲ್ ಫೋನ್ ನಂತಹ ಧ್ವನಿ-ದೃಶ್ಯ ಇಲೆಕ್ಟ್ರಾನಿಕ್ ಸಾಧನಗಳ ಮೂಲಕ ಚಿತ್ರೀಕರಿಸಿ, ಅವನ್ನು ಪೆನ್ ಡ್ರೈನ್ ನಲ್ಲಿ ಶೇಖರಿಸಿಡಬೇಕಾಗುತ್ತದೆ. ಇದರಿಂದ ನ್ಯಾಯಾಲಯದೆದುರು ಚಿತ್ರೀಕರಿಸಿದ ಸಾಕ್ಷ್ಯಾಧಾರಗಳನ್ನು ಸಲ್ಲಿಸಲು ಪೆನ್ ಡ್ರೈವ್ ಅತ್ಯಗತ್ಯ ಮಾಧ್ಯಮವಾಗಿ ಬದಲಾಗಿದೆ. ತನಿಖೆಯ ಸಂದರ್ಭದಲ್ಲಿ ಹೊಣೆಗಾರಿಕೆ ಹಾಗೂ ಪಾರದರ್ಶಕತೆಯ ಖಾತರಿಗೊಳಿಸಲು ಈ ನಿಯಮವನ್ನು ಕಡ್ಡಾಯಗೊಳಿಸಲಾಗಿದೆ.
ಇತ್ತೀಚಿನ ಕೇಂದ್ರ ಗೃಹ ಸಚಿವಾಲಯದ ವರದಿ ಪ್ರಕಾರ, ಜುಲೈ 1, 2024ರಿಂದ ಸೆಪ್ಟೆಂಬರ್ 3, 2024ರ ನಡುವೆ ನೂತನ ದಂಡ ಸಂಹಿತೆಯ ಅಡಿ ಪ್ರತಿ ದಿನ ಸರಾಸರಿ 7,400 ಎಫ್‌ಐಆರ್ ಗಳಂತೆ ಒಟ್ಟು 5,56,000 ಎಫ್‌ಐಆರ್ ಗಳನ್ನು ದಾಖಲಿಸಿಕೊಳ್ಳಲಾಗಿದೆ. ಈ ಸರಾಸರಿ ಲೆಕ್ಕದಲ್ಲಿ ಮಧ್ಯಪ್ರದೇಶದಾದ್ಯಂತ ಇರುವ ಒಟ್ಟಾರೆ ಪೊಲೀಸ್ ಠಾಣೆಗಳಲ್ಲೇ ಪೆನ್ ಡ್ರೈವ್ ಖರೀದಿಗಾಗಿ ತಿಂಗಳಿಗೆ 25 ಲಕ್ಷ ರೂ. ವೆಚ್ಚ ಮಾಡಬೇಕಾದ ಅಗತ್ಯ ನಿರ್ಮಾಣವಾಗಿದೆ.
ತಂತ್ರಜ್ಞಾನವು ಕಾನೂನು ಪ್ರಕ್ರಿಯೆಗಳನ್ನು ಮತ್ತಷ್ಟು ದಕ್ಷಗೊಳಿಸಿದ್ದರೂ, ಅದರ ಜಾರಿ ಮಾತ್ರ ಕಾನೂನು ಜಾರಿ ಪ್ರಾಧಿಕಾರಗಳ ಪಾಲಿಗೆ ಹೊರೆಯಾಗಿ ಪರಿಣಮಿಸಿದೆ. ಇದಕ್ಕಾಗಿ ಸರಕಾರವು ಅಧಿಕೃತ ಬಜೆಟ್ ಮಂಜೂರಾತಿ ನೀಡುವವವರೆಗೂ ಪೊಲೀಸ್ ಸಿಬ್ಬಂದಿಗಳೇ ತಮ್ಮ ತನಿಖೆಯ ವೆಚ್ಚವನ್ನು ಹೊರಬೇಕಾಗಿದೆ – ಕನಿಷ್ಠ ಪಕ್ಷ ಒಂದು ಬಾರಿಗೆ ಒಂದು ಪೆನ್ ಡ್ರೈವ್ ಖರೀದಿಯ ವೆಚ್ಚ.