ಚಿನ್ನ ಕಳ್ಳಸಾಗಣೆ ಆರೋಪದಲ್ಲಿ ತರೂರ್ ಮಾಜಿ ಸಹಾಯಕ ಬಂಧನ
ಶಶಿ ತರೂರ್ | PTI
ಹೊಸದಿಲ್ಲಿ : ದಿಲ್ಲಿ ಸುಂಕ ಇಲಾಖೆಯು ಬುಧವಾರ ಚಿನ್ನ ಕಳ್ಳಸಾಗಣೆ ಆರೋಪದಲ್ಲಿ ಹೊಸದಿಲ್ಲಿಯ ಇಂದಿರಾ ಗಾಂಧಿ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದೆ. ಬಂಧಿತರಲ್ಲಿ ಓರ್ವ ಕಾಂಗ್ರೆಸ್ ನಾಯಕ ಶಶಿ ತರೂರ್ ಅವರ ಮಾಜಿ ಸಹಾಯಕರಾಗಿದ್ದಾರೆ.
ತರೂರ್ ಅವರ ಮಾಜಿ ಸಹಾಯಕ ಶಿವಕುಮಾರ್ ಪ್ರಸಾದ್ ದುಬೈಯಿಂದ ಬಂದಿರುವ ವ್ಯಕ್ತಿಯೊಬ್ಬರನ್ನು ಸ್ವಾಗತಿಸುವುದಕ್ಕಾಗಿ ದಿಲ್ಲಿ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಪ್ರಯಾಣಿಕನು ಪ್ರಸಾದ್ ಗೆ ಸುಮಾರು 500 ಗ್ರಾಮ್ ಚಿನ್ನವನ್ನು ಹಸ್ತಾಂತರಿಸಲು ಯತ್ನಿಸಿದಾಗ ಅವರಿಬ್ಬರನ್ನೂ ಬಂಧಿಸಲಾಯಿತು.
ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಶಶಿ ತರೂರ್ ಮಾಜಿ ಸಹಾಯಕನ ಬಂಧನದ ಹಿನ್ನೆಲೆಯಲ್ಲಿ, ಬಿಜೆಪಿಯು ಕಾಂಗ್ರೆಸ್ ಮತ್ತು ಸಿಪಿಎಮ್ ಪಕ್ಷಗಳ ವಿರುದ್ಧ ವಾಗ್ದಾಳಿ ಮಾಡಿದೆ.
‘‘ಮೊದಲು, ಮುಖ್ಯಮಂತ್ರಿಯ ಕಾರ್ಯದರ್ಶಿ ಚಿನ್ನ ಕಳ್ಳ ಸಾಗಣೆಯಲ್ಲಿ ಶಾಮೀಲಾದರು. ಈಗ ಕಾಂಗ್ರೆಸ್ ಸಂಸದನ ‘ಸಹಾಯಕ’ನನ್ನು ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಬಂಧಿಸಲಾಗಿದೆ. ಸಿಪಿಎಮ್ ಮತ್ತು ಕಾಂಗ್ರೆಸ್ ಇಂಡಿಯಾ ಒಕ್ಕೂಟದ ಭಾಗೀದಾರರು. ಅವರದ್ದು ಚಿನ್ನ ಕಳ್ಳಸಾಗಣೆದಾರರ ಒಕ್ಕೂಟವಾಗಿದೆ’’ ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಎಕ್ಸ್ ನಲ್ಲಿ ಬರೆದಿದ್ದಾರೆ.
► ಕಾನೂನು ತನ್ನದೇ ಹಾದಿಯಲ್ಲಿ ಸಾಗಲಿ: ತರೂರ್
ಅದೇ ವೇಳೆ, ಈ ಘಟನೆಗೂ ತನಗೂ ಸಂಬಂಧವಿಲ್ಲ ಎಂದು ಹೇಳಿರುವ ಶಶಿ ತರೂರ್, ಕಾನೂನು ತನ್ನದೇ ಹಾದಿಯಲ್ಲಿ ಸಾಗಬೇಕು ಎಂದು ಹೇಳಿದ್ದಾರೆ.
‘‘ನಾನು ಧರ್ಮಶಾಲಾದಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾಗ, ನನ್ನ ಮಾಜಿ ಸಿಬ್ಬಂದಿಯೊಬ್ಬರು ಭಾಗಿಯಾಗಿರುವ ಘಟನೆಯ ಬಗ್ಗೆ ಕೇಳಿ ಆಘಾತವಾಯಿತು. ಅವರು ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದ ಕಾರ್ಯದಲ್ಲಿ ನನಗೆ ನೆರವು ನೀಡಲು ಅರೆಕಾಲಿಕ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ಯಾವುದೇ ಅಪರಾಧವನ್ನು ನಾನು ಕ್ಷಮಿಸುವುದಿಲ್ಲ. ಅವರನ್ನು ತನಿಖೆಗೊಳಪಡಿಸುವಂತೆ ಅಧಿಕಾರಿಗಳನ್ನು ನಾನು ಒತ್ತಾಯಿಸುತ್ತೇನೆ. ಕಾನೂನು ತನ್ನದೇ ಹಾದಿಯಲ್ಲಿ ಸಾಗಲಿ’’ ಎಂದು ಅವರು ಹೇಳಿದ್ದಾರೆ.