×
Ad

ಹಾರಾಟದಲ್ಲಿ ವ್ಯತ್ಯಯ | ಇಂಡಿಗೋ ವಿರುದ್ಧ ಕ್ರಮ ಕೈಗೊಳ್ಳಲಾಗುವುದು: ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು

Update: 2025-12-06 10:50 IST
Photo credit: PTI

ಹೊಸದಿಲ್ಲಿ: ಇಂಡಿಗೋ ಏರ್‌ಲೈನ್ಸ್ ಕಾರ್ಯಾಚರಣೆಯ ಕುಸಿತದ ಹಿನ್ನೆಲೆಯಲ್ಲಿ, ಸಂಸ್ಥೆಯ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಶುಕ್ರವಾರ ತಿಳಿಸಿದ್ದಾರೆ.

“ಈ ಸಂದರ್ಭವನ್ನು ನಾವು ಸುಮ್ಮನೆ ಕುಳಿತು ನೋಡಲು ಸಾಧ್ಯವಿಲ್ಲ. ಕ್ರಮ ಆಗಬಹುದು ಅಲ್ಲ, ಆಗುತ್ತದೆ” ಎಂದು ಅವರು NDTV ಗೆ ನೀಡಿದ ಸಂದರ್ಶನದಲ್ಲಿ ಸ್ಪಷ್ಟಪಡಿಸಿದ್ದಾರೆ.

ನವೆಂಬರ್‌ 1ರಿಂದ ಜಾರಿಗೆ ಬಂದಿರುವ ಹೊಸ ವಿಮಾನ ಕರ್ತವ್ಯ ಸಮಯ ಮಿತಿಗಳ (FDTL) ಕಾರಣಕ್ಕೆ ಇಂಡಿಗೋ 1,000 ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಪಡಿಸಿದ್ದು, ದೇಶದ ಹಲವು ವಿಮಾನ ನಿಲ್ದಾಣಗಳಲ್ಲಿ ಗೊಂದಲ ಉಂಟಾಗಿದೆ. ಆದರೆ ಇದೇ ನಿಯಮಗಳನ್ನು ಅನುಸರಿಸುತ್ತಿರುವ ಇತರ ವಿಮಾನಯಾನ ಸಂಸ್ಥೆಗಳು ಯಾವುದೇ ತೊಂದರೆ ಎದುರಿಸಿಲ್ಲವೆಂದು ಸಚಿವರು ಗಮನಸೆಳೆದರು. “ಸಮಸ್ಯೆಯ ಮೂಲ ಇಂಡಿಗೋ ಸಂಸ್ಥೆಯ ಆಂತರಿಕ ವ್ಯವಸ್ಥೆಯಲ್ಲಿದ್ದು, ನಿಯಮಗಳಲ್ಲಿಯೂ ಇಲ್ಲ, ಸಚಿವಾಲಯದಲ್ಲಿಯೂ ಇಲ್ಲ” ಎಂದು ಅವರು ಉಲ್ಲೇಖಿಸಿದರು.

ದಿಲ್ಲಿ, ಮುಂಬೈ, ಚೆನ್ನೈ ಸೇರಿದಂತೆ ಮೆಟ್ರೋ ವಿಮಾನ ನಿಲ್ದಾಣಗಳಲ್ಲಿ ಎರಡು ದಿನಗಳಿಂದ ಬಾಕಿ ಉಳಿದಿದ್ದ ಪ್ರಯಾಣಿಕರನ್ನು ಈಗಾಗಲೇ ತೆರವುಗೊಳಿಸಲಾಗಿದೆ. ಇತರ ವಿಮಾನ ನಿಲ್ದಾಣಗಳ ಪರಿಸ್ಥಿತಿಯೂ ಶುಕ್ರವಾರ ರಾತ್ರಿಯೊಳಗೆ ಸರಾಗವಾಗಲಿದೆ ಎಂದು ನಾಯ್ಡು ಹೇಳಿದರು.

“ಇಂಡಿಗೋ ಸೀಮಿತ ಸಾಮರ್ಥ್ಯದಲ್ಲಿ ಕಾರ್ಯಾಚರಣೆ ಪುನರಾರಂಭಿಸಲಿದೆ. ನಂತರ ಹಂತ ಹಂತವಾಗಿ ಸಾಮರ್ಥ್ಯ ಹೆಚ್ಚಿಸಲಾಗುತ್ತದೆ. ಪ್ರಯಾಣಿಕರಿಗೆ ಈ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ” ಎಂದು ಅವರು ಭರವಸೆ ನೀಡಿದರು.

ಇಂಡಿಗೋ ವಿಮಾನ ಸಂಸ್ಥೆಯಿಂದ ಆಗಿರುವ ಗೊಂದಲವನ್ನು ಸಚಿವಾಲಯ ಮತ್ತು ಡಿಜಿಸಿಎ ತಡೆಯಲು ವಿಫಲವಾಗಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ನಾಯ್ಡು, “ನಾವು ಹೊಸ ಎಫ್‌ಡಿಟಿಎಲ್ ನಿಬಂಧನೆಗಳನ್ನು ಜಾರಿಗೆ ತಂದ ನಂತರದಿಂದಲೇ ಎಲ್ಲಾ ಸಂಸ್ಥೆಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಸಮಸ್ಯೆಯ ಯಾವುದೇ ಸೂಚನೆ ನೀಡಲು ಅವರಿಗೆ ವೇದಿಕೆಯನ್ನು ನೀಡಿದ್ದೇವೆ” ಎಂದರು.

“ ಹಾರಾಟದಲ್ಲಿ ವ್ಯತ್ಯಯದಿಂದ ಉಂಟಾದ ಸಮಸ್ಯೆಯನ್ನು ವಿಚಾರಣೆ ನಡೆಸಲು ಸಮಿತಿ ರಚಿಸಲಾಗಿದೆ. ವರದಿಯನ್ನು ಆಧರಿಸಿ ಕ್ರಮ ಕೈಗೊಳ್ಳುತ್ತೇವೆ. ಪ್ರಯಾಣಿಕರ ಹಿತವೇ ನಮ್ಮ ಮೊದಲ ಆದ್ಯತೆ,” ಎಂದು ಸಚಿವರು ಪುನರುಚ್ಚರಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News