×
Ad

ರಶ್ಯ ಅಧ್ಯಕ್ಷ ಪುಟಿನ್‌ ಔತಣಕೂಟಕ್ಕೆ ರಾಹುಲ್ - ಖರ್ಗೆ ಕಡೆಗಣನೆ; ಶಶಿ ತರೂರ್‌ ಗೆ ಆಹ್ವಾನ: ಕಾಂಗ್ರೆಸ್ ಅಸಮಾಧಾನ

►ಆಹ್ವಾನ ಸ್ವೀಕರಿಸಿದ ತರೂರ್‌ ಅವರನ್ನೂ ಟೀಕಿಸಿದ ಕಾಂಗ್ರೆಸ್ ►ನನಗೆ ಬಂದ ಆಹ್ವಾನವನ್ನು ನಿರಾಕರಿಸುವ ಪ್ರಶ್ನೆಯೇ ಇಲ್ಲ ಎಂದ ಶಶಿ ತರೂರ್‌

Update: 2025-12-06 11:40 IST

Photo credit: PTI

ಹೊಸದಿಲ್ಲಿ: ರಶ್ಯ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರಿಗೆ ರಾಷ್ಟ್ರಪತಿ ಭವನದಲ್ಲಿ ಶುಕ್ರವಾರ ರಾತ್ರಿ ಏರ್ಪಡಿಸಿದ್ದ ಔತಣಕೂಟಕ್ಕೆ ಶಶಿ ತರೂರ್‌ ಅವರಿಗೆ ಮಾತ್ರ ಆಹ್ವಾನ ನೀಡಿರುವುದಕ್ಕೆ ಕಾಂಗ್ರೆಸ್‌  ಪಕ್ಷವು ಆಕ್ರೋಶ ವ್ಯಕ್ತಪಡಿಸಿದೆ.

ಪಕ್ಷದ ಹಿರಿಯ ನಾಯಕರಾದ ರಾಹುಲ್‌ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಆಹ್ವಾನ ನೀಡದೇ ಶಶಿ ತರೂರ್‌ ಅವರಿಗೆ ಆಹ್ವಾನ ನೀಡಿರುವುದು, ಮತ್ತು ಅದನ್ನು ಅವರು ಸ್ವೀಕರಿಸಿರುವುದು ಪಕ್ಷದೊಳಗಿನ ಅಸಮಾಧಾನವನ್ನು ಹಚ್ಚಿದೆ.

ಈ ಕುರಿತು ಪ್ರತಿಕ್ರಿಯಿಸಿದ ಕಾಂಗ್ರೆಸ್‌ ವಕ್ತಾರ ಪವನ್‌ ಖೇರಾ, ತರೂರ್‌ ಅವರನ್ನು ಉಲ್ಲೇಖಿಸಿ ಟೀಕಿಸಿದ್ದು, “ನಮ್ಮ ನಾಯಕರನ್ನು ಆಹ್ವಾನಿಸದೇ, ತರೂರ್‌ ಅವರಿಗೆ ಮಾತ್ರ ಆಹ್ವಾನ ಕಳುಹಿಸಿರುವುದು ಆಶ್ಚರ್ಯದ ಸಂಗತಿ. ಯಾವ ಆಟ ನಡೆಯುತ್ತಿದೆ, ಯಾರು ಆಟಗಾರರು ಇದು ಎಲ್ಲರಿಗೂ ಸ್ಪಷ್ಟವಾಗಬೇಕು,” ಎಂದು ಹೇಳಿದ್ದಾರೆ.

ತರೂರ್‌ ಅವರು ಮಾತ್ರ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡು, “ನನಗೆ ಬಂದ ಆಹ್ವಾನವನ್ನು ನಿರಾಕರಿಸುವ ಪ್ರಶ್ನೆಯೇ ಇಲ್ಲ. ಆದರೆ ವಿರೋಧ ಪಕ್ಷದ ನಾಯಕರನ್ನು ಆಹ್ವಾನಿಸದಿರುವುದು ಸರಿಯಲ್ಲ,” ಎಂದು ಸ್ಪಷ್ಟಪಡಿಸಿದರು.

ಇದರ ನಡುವೆ, ಖರ್ಗೆ ಹಾಗೂ ರಾಹುಲ್‌ ಗಾಂಧಿ ಅವರನ್ನು ಭೋಜನಕೂಟಕ್ಕೆ ಆಹ್ವಾನಿಸಿಲ್ಲ ಎಂಬುದನ್ನು ಕಾಂಗ್ರೆಸ್ ಮೂಲಗಳು ಬೆಳಿಗ್ಗೆ ದೃಢಪಡಿಸಿದ್ದು, ನಂತರ ಪಕ್ಷದ ಸಂಸದ ಜೈರಾಮ್‌ ರಮೇಶ್‌ ಅವರು X ನಲ್ಲಿ ಈ ಕುರಿತು ಪೋಸ್ಟ್ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಸರ್ಕಾರ ವಿದೇಶಿ ನಿಯೋಗಗಳನ್ನು ಭೇಟಿ ಮಾಡಲು ವಿರೋಧ ಪಕ್ಷದ ನಾಯಕರಿಗೆ ಆಹ್ವಾನ ನೀಡುವ ಸಂಪ್ರದಾಯವನ್ನು ಕಡೆಗಣಿಸಿದೆ ಎಂದು ರಾಹುಲ್‌ ಗಾಂಧಿ ಮಾಡಿದ ಆರೋಪದ ಬಳಿಕ ಈ ಬೆಳವಣಿಗೆ ಸಂಭವಿಸಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದೆ. ಆದರೆ ಸರ್ಕಾರದ ಮೂಲಗಳು ಈ ಆರೋಪವನ್ನು ತಳ್ಳಿಹಾಕುತ್ತಾ, ವಿರೋಧ ಪಕ್ಷದ ನಾಯಕನಾಗಿ ರಾಹುಲ್‌ ಗಾಂಧಿ ಈಗಾಗಲೇ ಕನಿಷ್ಠ ನಾಲ್ಕು ವಿದೇಶಿ ನಾಯಕರನ್ನು ಭೇಟಿ ಮಾಡಿದ್ದಾರೆ ಎಂದು ಹೇಳಿವೆ.

ಈ ವರ್ಷ ತರೂರ್‌ ಈಗಾಗಲೇ ಅನೇಕ ಸಂದರ್ಭಗಳಲ್ಲಿ ಪಕ್ಷದ ಆಂತರಿಕ ವಲಯದಲ್ಲಿ ಟೀಕೆಗೆ ಗುರಿಯಾಗಿದ್ದಾರೆ. ‘ಆಪರೇಷನ್‌ ಸಿಂಧೂರ್‌’ ವೇಳೆ ಭಾರತೀಯ ನಿಯೋಗದ ಭಾಗವಾಗಿದ್ದಕ್ಕಾಗಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಲಾರ್ಡ್‌ ಮೆಕಾಲೇ ಭಾಷಣಕ್ಕೆ ಹಾಜರಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಕ್ಕಾಗಿ ಪಕ್ಷದ ಒಳಗಿನಿಂದಲೇ ಅವರಿಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಈಗ ಆ ಪಟ್ಟಿಗೆ ಪುಟಿನ್‌ ಔತಣಕೂಟದ ಆಹ್ವಾನ ಸ್ವೀಕಾರವೂ ಸೇರಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News