ಮಧ್ಯಪ್ರದೇಶ | ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಂದ ಗಾಳಿಯಲ್ಲಿ ಗುಂಡು ಹಾರಿಸಿ, ದಲಿತ ಕುಟುಂಬದ ಮೇಲೆ ಹಲ್ಲೆ
PC : NDTV
ಭೋಪಾಲ್: ಇತ್ತೀಚೆಗಷ್ಟೆ ಜೈಲಿನಿಂದ ಬಿಡುಗಡೆಯಾಗಿದ್ದ ಬಲಿಷ್ಠ ಜಾತಿಗೆ ಸೇರಿದ ನಾಲ್ವರು ದುಷ್ಕರ್ಮಿಗಳು ದಲಿತ ಸಮುದಾಯಕ್ಕೆ ಸೇರಿದ ಮಾಜಿ ಸರಪಂಚರೊಬ್ಬರ ಮನೆಗೆ ನುಗ್ಗಿ, ಒಂಭತ್ತು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯ ಕರೇರಾ ತಾಲ್ಲೂಕಿನ ಲಾಲ್ಪುರ್ ಗ್ರಾಮದಲ್ಲಿ ನಡೆದಿದೆ.
ದಾಳಿಯ ವೇಳೆ ಅವರು ಓರ್ವ ಮಹಿಳೆ ಹಾಗೂ ಓರ್ವ ಯುವಕನ ಮೇಲೆ ಬಂದೂಕಿನ ಹಿಡಿಕೆಯಿಂದ ಹಲ್ಲೆ ನಡೆಸಿ, ಅವರಿಬ್ಬರನ್ನೂ ಗಾಯಗೊಳಿಸಿದ್ದಾರೆ ಎಂದೂ ಆರೋಪಿಸಲಾಗಿದೆ.
ಲಾಲ್ಪುರ್ ನ ಮಾಜಿ ಸರಪಂಚರಾದ ಸಂತ್ರಸ್ತ ಅಜ್ಮೇರ್ ಸಿಂಗ್ ಪರಿಹಾರ್ ಪ್ರಕಾರ, ಈ ದಾಳಿಗೆ ಹಳೆಯ ದ್ವೇಷವೇ ಕಾರಣ ಎಂದು ಹೇಳಲಾಗಿದೆ. ಈ ಹಿಂದೆ, ಅಜ್ಮೇರ್ ಸಿಂಗ್ ಪರಿಹಾರ್ ಅವರ ಕುಟುಂಬದ ಮೇಲೆ ದಾಳಿ ನಡೆಸಿದ ಕಾರಣಕ್ಕಾಗಿಯೇ ಆರೋಪಿಗಳು ಜೈಲು ವಾಸ ಅನುಭವಿಸುತ್ತಿದ್ದರು ಎಂದು ಹೇಳಲಾಗಿದೆ. ಈ ಪ್ರಕರಣದಲ್ಲಿ ತಮಗೆ ಜಾಮೀನು ದೊರೆತ ನಂತರ, ಅವರು ಮತ್ತೆ ಅಜ್ಮೇರ್ ಸಿಂಗ್ ಪರಿಹಾರ್ ಕುಟುಂಬದ ಮೇಲೆ ಹಲ್ಲೆ ನಡೆಸಿದ್ದಾರೆ.
ಈ ಸಂಬಂಧ, ಆರೋಪಿಗಳ ವಿರುದ್ಧ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆ ಹಾಗೂ ಹತ್ಯಾ ಪ್ರಯತ್ನದ ಆರೋಪಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಸ್ಥಳೀಯ ಪೊಲೀಸರು ದೃಢಪಡಿಸಿದ್ದಾರೆ. ಆರೋಪಿಗಳ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದೂ ಅವರು ಭರವಸೆ ನೀಡಿದ್ದಾರೆ.
ಸುಮಾರು ಒಂದೂವರೆ ವರ್ಷಗಳ ಹಿಂದೆ ಕಾರ್ಯಕ್ರಮವೊಂದರಲ್ಲಿ ಡಿಜೆ ಸಂಗೀತ ಹಾಕಿದ್ದ ಕಾರಣಕ್ಕೆ ಈ ಎರಡು ಕುಟುಂಬಗಳ ನಡುವೆ ಉದ್ಭವಗೊಂಡಿದ್ದ ವೈಷಮ್ಯ, ದಿನಕಳೆದಂತೆ ಗಂಭೀರ ಸ್ವರೂಪಕ್ಕೆ ತಿರುಗಿತ್ತು. ಇದರೊಂದಿಗೆ ಭೂವ್ಯಾಜ್ಯವೂ ಸೇರಿಕೊಂಡು, ಈ ಸಂಘರ್ಷ ಮತ್ತಷ್ಟು ಉಲ್ಬಣಗೊಂಡಿತ್ತು ಎನ್ನಲಾಗಿದೆ.