×
Ad

ಗ್ವಾಲಿಯರ್ ಹತ್ಯೆ ಪ್ರಕರಣ | ಬಂಧಿತ ಖಾಲಿಸ್ತಾನಿ ಪ್ರತ್ಯೇಕತಾವಾದಿ ಅರ್ಶ್ ದಲ್ಲಾ ಸಹಚರರಿಂದ ವಿದೇಶಿ ಪಿಸ್ತೂಲ್, ಫೋನ್ ವಶ

Update: 2024-11-11 21:31 IST

ಅರ್ಶ್ ದಲ್ಲಾ Photo: NDTV

ಗ್ವಾಲಿಯರ್ : ಕಳೆದ ವಾರ ಮಧ್ಯಪ್ರದೇಶದ ಗ್ವಾಲಿಯರ್‌ ನಲ್ಲಿ ವ್ಯಕ್ತಿಯೊಬ್ಬನನ್ನು ಗುಂಡಿಕ್ಕಿ ಹತ್ಯೆ ಮಾಡಿದ ಆರೋಪದಲ್ಲಿ ಬಂಧಿತ ಕೆನಡಾ ಮೂಲದ ಖಾಲಿಸ್ತಾನಿ ಪ್ರತ್ಯೇಕತಾವಾದಿ ಅರ್ಷದೀಪ್ ಸಿಂಗ್ ಗಿಲ್ ಸಹಚರರಿಂದ ಆಸ್ಟ್ರೇಲಿಯಾ ಮತ್ತು ಚೀನಾ ನಿರ್ಮಿತ ಎರಡು ಬಂದೂಕುಗಳು ಮತ್ತು IMEI ಹೊಂದಿರುವ ಅತ್ಯಾಧುನಿಕ ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಂಧಿತ ಆರೋಪಿಗಳನ್ನು ನವಜೋತ್ ಸಿಂಗ್ ಅಲಿಯಾಸ್ ನೀತು ಮತ್ತು ಅನ್ಮೋಲ್ಪ್ರೀತ್ ಸಿಂಗ್ ಅಲಿಯಾಸ್ ವಿಶಾಲ್ ಎಂದು ಗುರುತಿಸಲಾಗಿದೆ. ಪಂಜಾಬ್ ನಲ್ಲಿ ಯೂಟ್ಯೂಬರ್ ಹತ್ಯೆಗೆ ಸಂಬಂಧಿಸಿದಂತೆ ರವಿವಾರ ಪೊಲೀಸರು ಈ ಆರೋಪಿಗಳನ್ನು ಬಂಧಿಸಿದ್ದಾರೆ.

ನ.7ರಂದು ಗ್ವಾಲಿಯರ್ ನ ದಬ್ರಾ ಪ್ರದೇಶದ ಮನೆಯ ಹೊರಗೆ ಜಸ್ವಂತ್ ಸಿಂಗ್ ಗಿಲ್ ಅವರನ್ನು ಗುಂಡಿಕ್ಕಿ ಹತ್ಯೆಗೈಯ್ಯಲಾಗಿತ್ತು. ಗಿಲ್ 2016ರಲ್ಲಿ ತನ್ನ ಪತ್ನಿಯ ಸಂಬಂಧಿ ಸುಖ್ವಿಂದರ್ ನನ್ನು ಕೊಲೆ ಮಾಡಿದ ಆರೋಪದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದು, ಅಕ್ಟೋಬರ್ 28ರಿಂದ ಪೆರೋಲ್ ಮೇಲೆ ಹೊರಗೆ ಬಂದಿದ್ದ. ಸುಖ್ವಿಂದರ್ ಸಹೋದರ ಸತ್ಪಾಲ್ ಕೆನಡಾದಿಂದ 2.50 ಲಕ್ಷ ರೂ.ಗಳನ್ನು ತಮ್ಮ ಸೋದರ ಸಂಬಂಧಿ ಜಿತು ಸಿಂಗ್ ಅಲಿಯಾಸ್ ಜಿತಾ ಎಂಬಾತನಿಗೆ ವರ್ಗಾಯಿಸಿದ್ದ ಎಂದು ತನಿಖಾಧಿಕಾರಿ ತಿಳಿಸಿದ್ದಾರೆ.

ಆಸ್ಟ್ರೇಲಿಯನ್ ಗ್ಲೋಕ್ ಮತ್ತು ಚೈನೀಸ್ ನಿರ್ಮಿತ ಪಿಸ್ತೂಲ್ , ಎರಡು ಬಂದೂಕುಗಳ ಬೆಲೆ ತಲಾ 15 ಲಕ್ಷ ರೂ. ಇದೆ. ಇವುಗಳಲ್ಲಿ ಒಂದು ಪಿಸ್ತೂಲ್ ಮತ್ತು ವಿದೇಶಿ IMEI (ಇಂಟರ್ನ್ಯಾಷನಲ್ ಮೊಬೈಲ್ ಎಕ್ವಿಪ್ಮೆಂಟ್ ಐಡೆಂಟಿಟಿ) ಹೊಂದಿರುವ ಅತ್ಯಾಧುನಿಕ ಮೊಬೈಲ್ ಫೋನ್ ನ್ನು ಕೊಲೆಗೆ ಬಳಸಲಾಗಿದೆ. ಹತ್ಯೆಯ ನಂತರ ನವಜೋತ್ ಮತ್ತು ಅನ್ಮೋಲ್ಪ್ರೀತ್ ಚಂಡೀಗಢಕ್ಕೆ ಸತ್ಪಾಲ್ ಬುಕ್ ಮಾಡಿದ ಟ್ಯಾಕ್ಸಿಯಲ್ಲಿ ಪರಾರಿಯಾಗಿರುವುದು ನಮ್ಮ ತನಿಖೆಯಿಂದ ಬಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News